ಚಿತ್ರದುರ್ಗ. ಸೆ.29: ವಿಶ್ವ ಪ್ರವಾಸೋದ್ಯಮ ದಿನ ಹಾಗೂ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದ ಅಂಗವಾಗಿ ನಗರಸಭೆ ವತಿಯಿಂದ ಭಾನುವಾರ ಇಲ್ಲಿನ ಐತಿಹಾಸಿಕ ಚಿತ್ರದುರ್ಗ ಕೋಟೆ ಹಾಗೂ ಸ್ಮಾರಕಗಳ ಆವರಣದಲ್ಲಿ ಶ್ರಮದಾನ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘ಕೋತಿರಾಜ್’ ಎಂದೇ ಪ್ರಸಿದ್ಧರಾದ ಜ್ಯೋತಿರಾಜ್ ಅವರ ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಪ್ರಮುಖರು ಪಾಲ್ಗೊಂಡು ಕೋಟೆಯ ಮುಂಭಾಗ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜಡಗೊಂಡಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.
ನಂತರ ಕೋಟೆಯ ಆವರಣದಲ್ಲಿ ವೃತ್ತಾಕಾರದಲ್ಲಿ ಸಾಲಾಗಿ ನಿಂತು ಮಾನವ ಸರಪಳಿ ನಿರ್ಮಿಸಿದ ಭಾಗವಹಿಸಿದವರು, ದೇಶ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಸ್ವಯಂಪ್ರೇರಿತರಾಗಿ ಶ್ರಮಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ವಾರಕ್ಕೆ ಕನಿಷ್ಠ ಎರಡು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯಕ್ಕೆ ಸಮಯ ಮೀಸಲಿಡುವುದಾಗಿ ಈ ಸಂದರ್ಭದಲ್ಲಿ ಸಂಕಲ್ಪ ಮಾಡಲಾಯಿತು.
ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳ ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂಬ ಸಂದೇಶವನ್ನು ಈ ಜಾಗೃತಿ ಅಭಿಯಾನದ ಮೂಲಕ ಸಾರ್ವಜನಿಕರಿಗೆ ತಲುಪಿಸಲಾಯಿತು.









