ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ಹೊಳಲ್ಕೆರೆ ತಾಲ್ಲೂಕಿನಲ್ಲಿರುವ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ಅವ್ಯವಹಾರ ಮಿತಿ ಮೀರಿದ್ದು, ಆಶ್ರಮ ಅದೋಗತಿಯತ್ತ ಹೋಗುತ್ತಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಹೇಳಿದರು.
ಉಮಾಪತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ಮುರುಘಾಮಠಕ್ಕೆ ಹಸ್ತಾಂತರಗೊಂಡಾಗ ನಾನು ಹೊಳಲ್ಕೆರೆ ಶಾಸಕನಾಗಿದ್ದೆ. ಆಗ ಬೆಂಬಲ ಕೊಟ್ಟೆ. ನಂತರ ಅಲ್ಲಿ ಅನ್ಯಾಯವಾಗುತ್ತಿರುವುದು ನನಗೆ ಗೊತ್ತಾಯಿತು. ಟ್ರಸ್ಟಿಗಳೆಂದು ಹೇಳಿಕೊಳ್ಳುತ್ತಿರುವವರು ಆಶ್ರಮದ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ.
ಲೋಕಾಯುಕ್ತ ಮತ್ತು ಇಡಿ. ಸಂಸ್ಥೆಗಳು ದಾಳಿ ನಡೆಸಿ ಹಗರಣವನ್ನು ಬಯಲಿಗೆಳೆಯುವಂತೆ ಮನವಿ ಮಾಡಿದರು.
ಮಲ್ಲಾಡಿಹಳ್ಳಿಯ ತಿರುಕ ಎಂದೆ ಪ್ರಸಿದ್ದಿಯಾಗಿದ್ದ ರಾಘವೇಂದ್ರಸ್ವಾಮಿಗಳು ಕಟ್ಟಿ ಬೆಳೆಸಿರುವ ಅನಾಥ ಸೇವಾಶ್ರಮ ಅಭಿವೃದ್ದಿ ಪಡಿಸುವವರ ಕೈ ಸೇರುವ ಬದಲು ಭ್ರಷ್ಟರ ಕೈಗೆ ಸಿಕ್ಕಿದೆ. 75 ಲಕ್ಷ ರೂ. ನಗದನ್ನು ತಗೆದುಕೊಂಡಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಪ್ರತಿಯೊಂದು ಸಮಾಜದವರಿಗೂ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಮೇಲೆ ಗೌರವವಿದೆ. ಹಾಳಾಗಲು ಬಿಡಲ್ಲ. ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಸೇರಿದಂತೆ ಟ್ರಸ್ಟ್‍ನ ಕೆಲವರು ಆಶ್ರಮದ ಆಸ್ತಿಯನ್ನು ಮಾರಾಟ ಮಾಡಿ ಹಣ ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆಂದು ಆಪಾದಿಸಿದರು.
ಓಂಕಾರಪ್ಪ ಮಾತನಾಡಿ ನಾವು ಕೂಡ ಟ್ರಸ್ಟ್‍ಗೆ ದೇಣಿಗೆ ಕೊಟ್ಟಿದ್ದೇವೆ. ಬೇರೆ ಬೇರೆ ಕಡೆಯಿರುವ ಆಶ್ರಮಕ್ಕೆ ಸೇರಿದ ಅನುದಾನಿತ ಶಾಲೆಗಳಿಗೆ ಸರ್ಕಾರದಿಂದ ಕೋಟ್ಯಾಂತರ ರೂ.ಗಳ ಅನುದಾನ ಬರುತ್ತಿದೆ. ಭ್ರಷ್ಟರಿಂದ ಕೂಡಿರುವ ಟ್ರಸ್ಟ್‍ನವರು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಆಸ್ತಿ ಮೇಲೆ ಕಣ್ಣಿಟ್ಟಿದ್ದು, ಹಂತ ಹಂತವಾಗಿ ಒಂದೊಂದು ಮಾರಾಟ ಮಾಡುವ ಸಂಚು ರೂಪಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಆಯುರ್ವೇದ ಕಾಲೇಜಿಗೆ ಸರ್ಕಾರದಿಂದ
ಅನುಮತಿ ಪಡೆದುಕೊಳ್ಳಲು ಎಪ್ಪತ್ತೈದು ಲಕ್ಷ ರೂ.ಗಳನ್ನು ಡ್ರಾ ಮಾಡಿದ್ದಾರೆ. ರಾಘವೇಂದ್ರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಪತಿ ನಾಗೋಳ್ ಇವರು ಭ್ರಷ್ಟರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆಂದು ದೂರಿದರು.
ಟ್ರಸ್ಟ್‍ನ ಕಾಯಿದೆ ಉಲ್ಲಂಘನೆಯಾಗಿರುವುದಲ್ಲದೆ ದಾಖಲೆ ನಾಶಪಡಿಸುವ ಹುನ್ನಾರ ನಡೆಯುತ್ತಿದೆ. ಆಶ್ರಮ ಹಾಳಾಗುವುದಕ್ಕೆ ನಾವುಗಳು ಬಿಡಲ್ಲ. ಎಲ್ಲೆಲ್ಲಿ ಆಶ್ರಮದ ಆಸ್ತಿಗಳಿದೆಯೋ ಅವುಗಳನ್ನೆಲ್ಲಾ ಒಂದೊಂದಾಗಿ ಮುಕ್ಕಲು ಹೊರಟಿರುವವರ ವಿರುದ್ದ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪಿ.ಎಸ್.ಮುರುಗೇಶ, ಚಂದ್ರಶೇಖರ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












