ಚಿತ್ರದುರ್ಗ. ಸೆ.28: ಹಾವು ಕಡಿತದ ಸಂದರ್ಭದಲ್ಲಿ ಭಯಕ್ಕಿಂತ ಜಾಗೃತಿ ಮತ್ತು ಸಮಯಪ್ರಜ್ಞೆ ಅತ್ಯಂತ ಪ್ರಮುಖವಾಗಿದೆ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಕ್ಯಾಸಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಐ.ಇ.ಸಿ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಅಂತರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾವು ಕಚ್ಚಿದಾಗ ವ್ಯಕ್ತಿಗೆ ಮಾನಸಿಕವಾಗಿ ಧೈರ್ಯ ತುಂಬಿ ಗಾಬರಿಗೊಳ್ಳದಂತೆ ನೋಡಿಕೊಳ್ಳಬೇಕು. ಗಾಯಗೊಂಡ ಜಾಗವನ್ನು ಕತ್ತರಿಸುವುದು, ಬಿಗಿಯಾಗಿ ಕಟ್ಟುವುದು ಅಥವಾ ಬಾಯಿಯಿಂದ ವಿಷ ತೆಗೆಯಲು ಯತ್ನಿಸುವುದು ಮಾಡಬಾರದು. ಹಾವು ಕಚ್ಚಿಸಿಕೊಂಡ ವ್ಯಕ್ತಿಯನ್ನು ನಡೆದಾಡಲು ಬಿಡದೆ, ಕಚ್ಚಿದ ಕೈ ಅಥವಾ ಕಾಲಿನಲ್ಲಿರುವ ಉಂಗುರ, ಬಳೆ, ವಾಚ್ ಹಾಗೂ ಬಿಗಿಯಾದ ಬಟ್ಟೆಗಳನ್ನು ತಕ್ಷಣ ತೆಗೆಯಬೇಕು. ಇವು ಊತ ಉಂಟಾದಾಗ ರಕ್ತಸಂಚಾರಕ್ಕೆ ಅಡೆತಡೆ ಉಂಟು ಮಾಡುತ್ತವೆ ಎಂದರು.
ಯಾವುದೇ ರೀತಿಯ ಮನೆಮದ್ದು, ನಾಟಿ ಚಿಕಿತ್ಸೆ ಸೇರಿದಂತೆ ಅಸುರಕ್ಷಿತ ವಿಧಾನ ಹಾಗೂ ಮೂಢನಂಬಿಕೆಗಳನ್ನು ಅನುಸರಿಸಿ ಕಾಲಹರಣ ಮಾಡದೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಆಸ್ಪತ್ರೆಗೆ ಸಾಗಿಸುವಾಗ ಹಾವು ಕಚ್ಚಿದ ಭಾಗ ಅಲುಗಾಡದಂತೆ ರೋಗಿಯನ್ನು ಎಡಭಾಗಕ್ಕೆ ಮಲಗಿಸಬೇಕು. ರಾತ್ರಿ ವೇಳೆ ಸಂಚರಿಸುವಾಗ ಟಾರ್ಚ್ ಲೈಟ್ ಬಳಸುವುದು ಹಾಗೂ ಮನೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಮಾತನಾಡಿ, ಮರಣದ ನಂತರ ಆರೋಗ್ಯಕರ ಅಂಗಾಂಗಗಳನ್ನು ಅಗತ್ಯವಿರುವ ರೋಗಿಗಳಿಗೆ ದಾನ ಮಾಡುವುದು ಮಾನವೀಯ ಕೆಲಸ. ಹೃದಯ, ಮೂತ್ರಪಿಂಡ, ಯಕೃತ್ತು, ಶ್ವಾಸಕೋಶ, ಕಣ್ಣಿನ ಕಾರ್ನಿಯಾ ಮುಂತಾದ ಅಂಗಗಳನ್ನು ದಾನ ಮಾಡಲು ಅಧಿಕೃತ ನೋಂದಣಿ ಮಾಡಿಕೊಳ್ಳಬಹುದು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರುದ್ರಮುನಿ ಅಂಗಾಂಗ ದಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಕವಿತಾ, ಶ್ರೀನಿವಾಸ್, ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ನಾಗರಾಜ್ ನಿರೂಪಿಸಿ, ಸೈಯದ್ ಇಸ್ಮಾಯಿಲ್ ಜಬೀದ್ ಉಲ್ಲಾ ಸ್ವಾಗತಿಸಿ ವಂದಿಸಿದರು.










