ಕೊಪ್ಪಳ: ನಾಡಿನ ಹೆಮ್ಮೆಯ ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.
ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಗಣ್ಯರು ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದು ಫಲಪುಷ್ಪ ನೀಡಿ ಗೌರವಪೂರ್ವಕವಾಗಿ ಆಹ್ವಾನ ಪತ್ರಿಕೆ ಸಲ್ಲಿಸಿತು.
ಆಹ್ವಾನ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ದಸರಾ ಮಹೋತ್ಸವ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಶ್ರೀಗಳು ಅಪಾರ ಸಂತಸ ವ್ಯಕ್ತಪಡಿಸಿದ್ದು, ಅತ್ಯಂತ ಪ್ರೀತಿ-ವಿಶ್ವಾಸದಿಂದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ಈ ವಿಚಾರದಲ್ಲಿ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಗವಿಸಿದ್ದೇಶ್ವರ ಶ್ರೀಗಳು ಅತ್ಯಂತ ಸೂಕ್ಷ್ಮ ಸ್ವಭಾವದವರಾಗಿದ್ದು, ಅವರ ಘನತೆಗೆ ಧಕ್ಕೆ ತರುವಂತೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು. ಕಿಡಿಗೇಡಿಗಳಿಗೆ ನೋಟಿಸ್ ಜಾರಿ ಮಾಡಲು ಪೊಲೀಸ್ ಇಲಾಖೆಗೆ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿದ್ದೇನೆ,” ಎಂದು ಎಚ್ಚರಿಸಿದರು.
ಮುಂದುವರಿದು ಮಾತನಾಡಿದ ಅವರು, ಶ್ರೀಗಳು ಯಾವತ್ತೂ ಆಡಂಬರ, ಅದ್ದೂರಿತನವನ್ನು ಬಯಸದವರು. ಈ ಸರಳತೆಯನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಶ್ರೀಗಳ ಅಮೃತ ಹಸ್ತದಿಂದ ನಾಡಹಬ್ಬ ದಸರಾ ಉದ್ಘಾಟನೆಗೊಳ್ಳುತ್ತಿರುವುದು ಕೊಪ್ಪಳ ಜಿಲ್ಲೆಗೆ ಸಂದ ದೊಡ್ಡ ಸೌಭಾಗ್ಯ ಹಾಗೂ ನಮ್ಮ ಸರ್ಕಾರಕ್ಕೆ ಸಿಕ್ಕ ಹೆಮ್ಮೆಯ ವಿಚಾರ. ಪೂಜ್ಯರ ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಾದವು ಈ ಬಾರಿಯ ದಸರಾ ಮಹೋತ್ಸವಕ್ಕೆ ಮತ್ತಷ್ಟು ಶೋಭೆ, ಮೆರುಗು ಮತ್ತು ಪಾವಿತ್ರ್ಯತೆಯನ್ನು ತಂದುಕೊಡಲಿದೆ ಎಂದು ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ನಾಗಪ್ಪ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಹಾಗೂ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.










