Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹನುಮಂತಪ್ಪನವರ ತತ್ವಾದರ್ಶಗಳು ಎಲ್ಲರಿಗೂ ಮಾರ್ಗದರ್ಶಕ : ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಸುದ್ದಿಒನ್, ಚಿತ್ರದುರ್ಗ ಸೆ. 27 : ಹಿರಿಯ ಮುತ್ಸದ್ದಿ, ದಲಿತ ಹಾಗೂ ಹಿಂದುಳಿದ ವರ್ಗಗಳ ಗಟ್ಟಿ ಧ್ವನಿಯಾಗಿದ್ದ ಹಾಗೂ ಸಂವಿಧಾನಬದ್ಧ ಸಂಸ್ಥೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹನುಮಂತಪ್ಪನವರ ಅಗಲಿಕೆ ಸಮಾಜಕ್ಕೆ ಭರಿಸಲಾರದ ನಷ್ಟವಾಗಿದ್ದು, ಅವರ ತತ್ವಾದರ್ಶಗಳು ಮತ್ತು ನಡೆದು ಬಂದ ದಾರಿ ನಮಗೆ ಸದಾ ಮಾರ್ಗದರ್ಶಕ ವಾಗಿರಲಿವೆ ಎಂದು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ತಿಳಿಸಿದರು.

ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಾಂಧೀವಾದಿ, ಹಿರಿಯ ರಾಜಕೀಯ ಮುತ್ಸದ್ಧಿ, ರಾಜ್ಯಸಭಾ ಮಾಜಿ ಸದಸ್ಯರಾದ ದಿವಂಗತ ಹೆಚ್. ಹನುಮಂತಪ್ಪನವರ ಸ್ಮರಣಾರ್ಥ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿಯ ನಿಯಮದಂತೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಮಣ್ಣಿಗೆ ಸೇರಲೇಬೇಕು. ಆದರೆ ಆ ವ್ಯಕ್ತಿಯ ಜೀವಿತಾವಧಿಯ ಪಯಣ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳು ಮುಖ್ಯವಾಗುತ್ತವೆ ಎಂದು ಪ್ರತಿಪಾದಿಸಿದರು.

ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಸಣ್ಣಪುಟ್ಟ ಲೋಪಗಳನ್ನು ಬದಿಗಿಟ್ಟು ಪ್ರೀತಿಸುವುದನ್ನು ಕಲಿಯಬೇಕು. ಈ ಗುಣ ಹನುಮಂತಪ್ಪನವರಲ್ಲಿ ಇತ್ತು. ಅವರದ್ದು ಕೇವಲ ಅಧಿಕಾರದ ನಾಯಕತ್ವವಾಗಿರದೆ, ಸಾಂಸ್ಕೃತಿಕ ಹಾಗೂ ಗುಣಾತ್ಮಕ ನಾಯಕತ್ವವಾಗಿತ್ತು ಎಂದು ಬಣ್ಣಿಸಿ ಹನುಮಂತಪ್ಪನವರು ಭಾರತೀಯ ಸೇವಾದಳ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಭಾವೈಕತೆ, ಅಸ್ಪೃಶ್ಯತೆ ನಿವಾರಣೆ ಮತ್ತು ದೇಶದ ಅಭಿವೃದ್ಧಿಯ ಕನಸುಗಳನ್ನು ಹೊತ್ತು, ಆ ತತ್ವಾದರ್ಶಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಬಂದಿದ್ದರು ಎಂದರು.

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪನವರ ನಿಕಟವರ್ತಿಯಾಗಿದ್ದ ಅವರು, ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ, ರಾಜ್ಯಸಭೆಯ ಉಪಾಧ್ಯಕ್ಷರಾಗಿ ಹಾಗೂ ವಿವಿಧ ಪಾರ್ಲಿಮೆಂಟರಿ ಕಮಿಟಿಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೆ, ರೈಲ್ವೆ ಬೋರ್ಡ್, ರೇಷ್ಮೆ ಮಂಡಳಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ಎಸ್‍ಸಿ/ಎಸ್‍ಟಿ ಕಮಿಷನ್ ಅಧ್ಯಕ್ಷರಾಗಿ ಕಾನೂನಾತ್ಮಕವಾಗಿ ಹಿಂದುಳಿದವರ ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಡಿದ್ದರು.ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಹನುಮಂತಪ್ಪನವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯಲ್ಲಿರುವ ಸಮಾನತೆ, ಘನತೆ ಹಾಗೂ ಅವಕಾಶಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ತಮ್ಮ ಬುದ್ಧಿಶಕ್ತಿ ಹಾಗೂ ಐನ್ ಪದವಿಯ (ನ್ಯಾಯಾಂಗ) ಜ್ಞಾನವನ್ನು ಬಳಸಿದರು. ಭದ್ರಾ ಮೇಲ್ದಂಡೆ ಯೋಜನೆ (ಅಪ್ಪರ್ ಭದ್ರಾ), ಈ ಭಾಗಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವುದು, ಭೀಕರ ಅಭಾವ ಎದುರಿಸುವ ಜಿಲ್ಲೆಯ ರೈತರು, ಕಾರ್ಮಿಕರು ಹಾಗೂ ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರು. 94ರ ಇಳಿವಯಸ್ಸಿನಲ್ಲೂ ನಿಜಲಿಂಗಪ್ಪನವರ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು ಎಂದು ಅವರ ಶ್ರಮವನ್ನು ಸ್ಮರಿಸಿದರು.

ಹನುಮಂತಪ್ಪನವರ ಅಗಲಿಕೆಯಿಂದ ದಲಿತ ಹಾಗೂ ಶೋಷಿತ ಸಮುದಾಯಗಳು ಗಟ್ಟಿ ನಾಯಕತ್ವ ವೊಂದನ್ನು ಕಳೆದುಕೊಂಡು ಹಿನ್ನಡೆ ಅನುಭವಿಸುವಂತಾಗಿದೆ. ಮಂತ್ರಿಗಿರಿ ಇಲ್ಲದಿದ್ದರೂ ನಾಯಕತ್ವವಿಲ್ಲದಿದ್ದರೆ ಸಮಾಜ ಅನಾಥವಾಗುತ್ತದೆ. ಆದ್ದರಿಂದ ಹನುಮಂತಪ್ಪನವರು ನಡೆದು ಬಂದ ಸವಾಲಿನ ಹಾದಿಯಲ್ಲಿ ಸಾಗಿ, ಅವರು ನೀಡಿರುವ ಮಾರ್ಗದರ್ಶನದಂತೆ ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಹಾಗೂ ವೈಚಾರಿಕ ನಾಯಕತ್ವವನ್ನು ಗಟ್ಟಿಗೊಳಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ನಮನ ಎಂದು ಮಹೇದೇವಪ್ಪ ಭಾವನಾತ್ಮಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ಮಾತನಾಡಿ, 1932ರಲ್ಲಿ ಜನಿಸಿ 94 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿದ ಹನುಮಂತಪ್ಪನವರು ತಮ್ಮದೇ ಆದ ಇತಿಹಾಸ ನಿರ್ಮಿಸಿದ್ದಾರೆ ಆರಂಭದಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವು ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ಯಜಮಾನರಂತಿದ್ದ ಅವರು ರಾಜಕೀಯ ಭೀಷ್ಮನಂತೆ ಪಕ್ಷವನ್ನು ಸುದೀರ್ಘ ಕಾಲ ಮುನ್ನಡೆಸಿದರು ಎಂದರು.

ಚಳ್ಳಕೆರೆಯ ಬೆಳಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಾಜದ ಕಟ್ಟೆಮನೆಯಲ್ಲಿ ನಡೆಯುತ್ತಿದ್ದ ಸಭೆಗಳಿಗೆ ನಿಯಮಿತವಾಗಿ ಆಗಮಿಸುತ್ತಿದ್ದ ಅವರು, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಮಾರ್ಗದರ್ಶನ ನೀಡುತ್ತಿದ್ದರು ಭದ್ರಾ ಜಲಾಶಯದಿಂದ 164 ಕಿ.ಮೀ. ದೂರದ ಚಿತ್ರದುರ್ಗ ಜಿಲ್ಲೆಗೆ ನೀರು ಹರಿದುಬರಲು ಮತ್ತು ಇತ್ತೀಚೆಗೆ ಪ್ರಾಯೋಗಿಕವಾಗಿ ಕೆರೆಗಳನ್ನು ತುಂಬಿಸುವ ಕಾರ್ಯ ಯಶಸ್ವಿಯಾಗಲು ಅವರ ಆರಂಭಿಕ ಹೋರಾಟವೇ ಅಡಿಪಾಯ ಅಪರ ಭದ್ರಾ ಮೇಲ್ದಂಡೆ ಯೋಜನೆಗೆ ನೀರಾವರಿ ಹೋರಾಟ ಸಮಿತಿಯ ಮೊದಲ ಅಧ್ಯಕ್ಷರಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು

ಜನಪ್ರತಿನಿಧಿಗಳ ಹುದ್ದೆಗಳು ಶಾಶ್ವತವಲ್ಲ, ಆದರೆ ಹನುಮಂತಪ್ಪನವರಂತೆ ಮಾಡಿದ ಸಮಾಜಮುಖಿ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಮಾಜಿ ಪ್ರಧಾನಿಗಳಾದ ದಿವಂಗತ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಜಾಫರ್ ಶರೀಫ್ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರೂ, ಅವರು ಎಂದೂ ತಮ್ಮ ಕುಟುಂಬಕ್ಕೆ ರಾಜಕೀಯ ಸ್ಥಾನಮಾನ ಕೋರಲಿಲ್ಲ ಆದ್ದರಿಂದ ಕಾಂಗ್ರೆಸ್ ಪಕ್ಷವು ಅವರ ಸುಪುತ್ರ ಮೋಹನ್ ಹಾಗೂ ಕುಟುಂಬಕ್ಕೆ ಸೂಕ್ತ ಗುರುತಿಸುವಿಕೆ ಮತ್ತು ಬೆಂಬಲ ನೀಡಬೇಕೆಂದು ಆಶಿಸಿದ ಸಚಿವರು. ಹನುಮಂತಪ್ಪನವರ ನಿಧನದಿಂದ ಅವರ ಅಪಾರ ಶಿಷ್ಯವೃಂದ ಹಾಗೂ ಬೆಂಬಲಿಗರಿಗೆ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

ಮಾಜಿ ಸಚಿವ ಸೋಮಶೇಖರ್ ಮಾತನಾಡಿ, ಹನುಮಂತಪ್ಪನವರು ತಮ್ಮ ಸುಮಾರು 54 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಪ್ರೀತಿ-ವಿಶ್ವಾಸ ಗಳಿಸಿದ್ದರು ಅವರು ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ, ರೈಲ್ವೇ ಇಲಾಖೆ, ಎಸ್‍ಸಿ/ಎಸ್‍ಟಿ ಕಮಿಷನ್ ಹಾಗೂ ಪ್ಲಾನಿಂಗ್ ಕಮಿಷನ್ ಸೇರಿದಂತೆ ಕೇಂದ್ರದ ಪ್ರಮುಖ ಮಂಡಳಿಗಳಲ್ಲಿ ಬುದ್ಧಿವಂತ ರಾಜಕಾರಣಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು ಎಂದು ಶ್ಲಾಘಿಸಿ ದಲಿತ ರಾಜಕಾರಣದಲ್ಲಿ ನಾಯಕತ್ವದ ಕೊರತೆ ಹಾಗೂ ಪ್ರಜಾತಾಂತ್ರಿಕ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಕುಸಿತದ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲೆಯಿಂದ ಬಿ. ಬಸವಲಿಂಗಪ್ಪ, ಕೆ.ಎಸ್. ರಂಗನಾಥ್ ಹಾಗೂ ಹನುಮಂತಪ್ಪನವರಂತಹ ಮೂವರು ಪ್ರಭಾವಿ ದಲಿತ ನಾಯಕರು ಹೊರಹೊಮ್ಮಿದ್ದರು. ಈ ಮೂವರಿಗೂ ರಾಜ್ಯದ ಮುಖ್ಯಮಂತ್ರಿಯಾಗುವ ಅರ್ಹತೆ ಹಾಗೂ ಅವಕಾಶಗಳಿದ್ದರೂ, ರಾಜಕೀಯ ಏರಿಳಿತಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಪ್ರಸ್ತುತ ದಲಿತ ಸಮುದಾಯದಲ್ಲಿ ಗಟ್ಟಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟು ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ‘ಒಬ್ಬ ಮನುಷ್ಯ – ಒಂದು ಮತ – ಒಂದು ಮೌಲ್ಯ’ ಎಂಬ ಪ್ರಜಾಸತ್ತಾತ್ಮಕ ಹಕ್ಕನ್ನು ನೀಡಲಾಗಿದೆ. ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ದಲಿತರು ಮತ್ತು ಹಿಂದುಳಿದವರು ಶಿಕ್ಷಣ ಪಡೆದಿದ್ದರೂ ಸಹ ತಮ್ಮ ಮತದ ನೈಜ ಮೌಲ್ಯವನ್ನು ಅರ್ಥೈಸಿಕೊಳ್ಳದೆ, ಸಣ್ಣಪುಟ್ಟ ಆಸೆಗಳಿಗೆ ಬಲಿಯಾಗಿ ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ದಲಿತ ರಾಜಕಾರಣ ಎಂದರೆ ಪ್ರಜಾತಾತ್ರಿಕ, ಮೌಲ್ಯಾಧಾರಿತ ಹಾಗೂ ಪ್ರಾಮಾಣಿಕ ರಾಜಕಾರಣವಾಗಿರಬೇಕು. ದಲಿತರು ಮತ್ತು ಹಿಂದುಳಿದ ವರ್ಗದವರು ಇತರರ ಮೇಲಿನ ಅವಲಂಬನೆಯನ್ನು ಬಿಟ್ಟು ಸ್ವತಂತ್ರ, ಗಟ್ಟಿ ನಾಯಕತ್ವ ಹಾಗೂ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿ ಹನುಮಂತಪ್ಪನವರಂತಹ ನಿಸ್ವಾರ್ಥ ನಾಯಕರು ಯಾವುದೇ ಸ್ವಾರ್ಥ ಅಥವಾ ಕುಟುಂಬದ ಹಿತಾಸಕ್ತಿಗೆ ಸರ್ಕಾರವನ್ನು ಬಳಸಿಕೊಳ್ಳದೆ ನಿಷ್ಠೆಯಿಂದ ರಾಷ್ಟ್ರಮಟ್ಟದಲ್ಲಿ ಸಮಾಜ ಸೇವೆ ಮಾಡಿದ್ದಾರೆ.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಮುರುಘಾ ಮಠದ ಶ್ರೀ ಡಾ. ಬಸವ ಕುಮಾರಸ್ವಾಮಿಗಳು ತಮ್ಮ ಆರ್ಶೀವಚನದಲ್ಲಿ ಮಾಜಿ ಸಂಸದ ಹಾಗೂ ಹಿರಿಯ ರಾಜಕಾರಣಿ ಹೆಚ್. ಹನುಮಂತಪ್ಪ ಅವರ ನೆನಪಿನಲ್ಲಿ ಅಭಿನಂದನಾ ಗ್ರಂಥವನ್ನು ಹೊರತರಲು ಹಾಗೂ ಮುಂಬರುವ ಮುರುಘಾಮಠದ ಉತ್ಸವದಲ್ಲಿ ಅವರ ಕುರಿತು ವಿಶೇಷ ವಿಚಾರಸಂಕಿರಣವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠಕ್ಕೂ ಹೆಚ್. ಹನುಮಂತಪ್ಪ ಅವರಿಗೂ ದಶಕಗಳಿಂದಲೂ ಇದ್ದ ಅವಿನಾಭಾವ ಬಾಂಧವ್ಯವನ್ನು ಸ್ಮರಿಸಿದರು. ಹನುಮಂತಪ್ಪ ಅವರು ಸೂಕ್ಷ್ಮಮತಿಗಳು, ತರ್ಕಶಾಸ್ತ್ರ ಪ್ರವೀಣರು ಹಾಗೂ ಸಂದರ್ಭಕ್ಕೆ ತಕ್ಕಂತೆ ಹಾಸ್ಯಪ್ರಜ್ಞೆ ಉಳ್ಳವರಾಗಿದ್ದರು ಎಂದು ಬಣ್ಣಿಸಿದರು.

ಹೆಚ್. ಹನುಮಂತಪ್ಪ ಅವರ ಸ್ಮರಣೆಯನ್ನು ಜೀವಂತವಾಗಿಡಲು ಚಲವಾದಿ ಸಂಘ ಮತ್ತು ಚಲವಾದಿ ಗುರುಪೀಠದ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಅಭಿನಂದನಾ ಗ್ರಂಥವನ್ನು ತರಲು ನಿರ್ಧರಿಸಲಾಗಿದೆ. ಇದಲ್ಲದೆ, ಮುಂಬರುವ ಮಠದ ಉತ್ಸವದಲ್ಲಿ ಜಿ.ಎಸ್. ಶಿವರುದ್ರಪ್ಪ, ಫಾ.ಗೂ. ಹಳಕಟ್ಟಿ ಹಾಗೂ ವೈ.ಎನ್. ಕೆ. ಅವರ ಜನ್ಮಶತಮಾನೋತ್ಸವದ ವಿಚಾರಸಂಕಿರಣಗಳ ಸಾಲಿನಲ್ಲಿ ಹೆಚ್. ಹನುಮಂತಪ್ಪ ಅವರ ಕುರಿತಾಗಿಯೂ ಒಂದು ದಿನದ ವಿಶೇಷ ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸ ಲಾಯಿತು. ಹಿರಿಯರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಶರಣರು, ಸಿದ್ದಯ್ಯನ ಕೋಟಯ ಶ್ರೀ ಬಸವಲಿಂಗ ಸ್ವಾಮೀಜಿ ವಹಿಸಿದ್ದರು ಅಧ್ಯಕ್ಷತೆಯನ್ನು ಶ್ರೀ ಛಲವಾದಿ ಮಹಾಸಂಸ್ಥಾನ ಗುರುಪೀಠ ಟ್ರಸ್ಟ್ (ರಿ)ನ ಅಧ್ಯಕ್ಷರಾದ ಎನ್.ಲಕ್ಷ್ಮೀನರಸಯ್ಯ ವಹಿಸಿದ್ದರು, ಶಾಸಕರಾದ ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾಧ ಎಸ್.ಕೆ.ಬಸವರಾಜನ್, ಅಧಿ ಜಾಂಬವ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಧ ಎಂ.ಕೆ.ತಾಜ್ ಪೀರ್, ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ಮೆಹಬೂಬ್ ಪಾಷ, ಸಫಾಯಿ ಕರ್ಮಚಾರಿ ಅಯೋಗದ ಅಧ್ಯಕ್ಷರಾಧ ರಘು, ಕೆಇಬಿ ಷಣ್ಮುಖಪ್ಪ, ನ್ಯಾಯಾವಾದಿ ಶಶಾಂಕ್ ಲಿಡ್ಕರ್ ಮಾಜಿ ಅಧ್ಯಕ್ಷ ಓ ಶಂಕರ್, ಜಯರಾಮ್, ಸಿದ್ದರಾಜು, ಬಾಲಕೃಷ್ಣ ಯಾದವ್, ದೊಡ್ಡ ಮಲ್ಲಯ್ಯ, ಟಿಪ್ಪುಖಾಸಿಂ ಆಲಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಸಮಾಜದ ಮುಖಂಡರು ನಗರಸಭೆಯ ಮಾಜಿ ಅಧ್ಯಕ್ಷರು ಶ್ರೀ ಛಲವಾದಿ ಮಹಾಸಂಸ್ಥಾನ ಗುರುಪೀಠ ಟ್ರಸ್ಟ್ (ರಿ)ನ ಖಂಜಾಚಿಗಳಾದ ನಿರಂಜನ ಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರೆ, ನಿರ್ದೇಶಕರಾದ ಎಸ್.ವಿ.ಗುರುಮೂರ್ತಿ ಸಂವಿಧಾನ ಪೀಠಿಕೆಯನ್ನು ಓದಿದರು. ಶ್ರೀ ಛಲವಾದಿ ಮಹಾಸಂಸ್ಥಾನ ಗುರುಪೀಠ ಟ್ರಸ್ಟ್ (ರಿ)ನ ಜಂಟಿ ಕಾರ್ಯದರ್ಶಿಗಳಾದ ನಟರಾಜ್, ಕಾರ್ಯದರ್ಶಿ ಮೋಹನ್, ನಾಗರಾಜ್, ಬಸವರಾಜು, ಮಂಜುಳಮ್ಮ ಜಯರಾಮ, ಪ್ರಹ್ಲಾದ್ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now