Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೈಕ್ ಬಿಟ್ಟು ಮಣ್ಣಿಗೆ ಮುತ್ತಿಕ್ಕಿದ ಪತ್ರಕರ್ತ: ಬಯಲುಸೀಮೆ ನೀರಾವರಿ ಹೋರಾಟದ ಕಹಳೆ ಮೊಳಗಿಸಿದ ಲಕ್ಷ್ಮಣ್ ಹೂಗಾರ್

---Advertisement---

ವಿಶೇಷ ವರದಿ :

ಗೌನಹಳ್ಳಿ ಗೋವಿಂದಪ್ಪ,
ಸಂಪಾದಕರು, ಜನಾಶಯ ಪ್ರಭ
ಚಿತ್ರದುರ್ಗ, ಮೊ : 88809 99001

ಸುದ್ದಿಒನ್,  ಚಿತ್ರದುರ್ಗ, ಸೆಪ್ಟೆಂಬರ್. 26: ಟಿವಿ 9 ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರ, ಚಕ್ರವ್ಯೂಹದಲ್ಲಿ ದಿಗ್ಗಜ ರಾಜಕಾರಣಿಗಳ ಮುಖಾಮುಖಿ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿದ್ದ ಲಕ್ಷ್ಮಣ್ ಹೂಗಾರ್, ಬಯಲುಸೀಮೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಹೋರಾಟ ನಡೆಸಿದ ದಿನಗಳು ಸ್ಮರಣೀಯ.

ಪತ್ರಕರ್ತ ವೃತ್ತಿಗೆ ರಾಜೀನಾಮೆ ಕೊಟ್ಟು, ಹಿರಿಯೂರಿನ ಸಮೀಪದ ಜಮೀನಿನಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದ ವೇಳೆ ನೀರಿನ ಸಮಸ್ಯೆ ಅರಿವು ಬಂದಿತ್ತು. ಅದೇ ಸಂದರ್ಭ ಕಮರೇಶ್, ಕಸವನಹಳ್ಳಿ ರಮೇಶ್, ಸಿದ್ದರಾಮಣ್ಣ, ಹೊರಕೇರಪ್ಪ ಹೀಗೆ ಹಿರಿಯೂರು ತಾಲ್ಲೂಕಿನ ಅನೇಕ ರೈತಮುಖಂಡರು ಆಗಮಿಸಿ ನಿಮ್ಮಂತಹವರು ಹೋರಾಟಕ್ಕೆ ಆಗಮಿಸಿದರೇ ಸರ್ಕಾರ ಗಮನಹರಿಸಲಿದೆ ಎಂದು ಮನದಟ್ಟು ಮಾಡಿಕೊಟ್ಟಿದ್ದರು. ಪರಿಣಾಮ ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆ ಒಳಗೊಂಡು ಬಯಲುಸೀಮೆ ಪ್ರದೇಶ ಹಸಿರಾಗಬೇಕೆಂದು ಕನಸು ಕಟ್ಟಿಕೊಂಡು ಹೋರಾಟಕ್ಕೆ ಧುಮುಕಿದರು.

ಬಯಲುಸೀಮೆ ನೀರಾವರಿ ಹೋರಾಟ ಸಮಿತಿ ಸ್ಥಾಪಿಸಿ, ಜಿಲ್ಲಾದ್ಯಂತ ಚಳವಳಿ ನಡೆಸಿದ್ದಷ್ಟೇ ಅಲ್ಲದೆ ಬೆಳಗಾವಿಯಲ್ಲಿ ಅಧಿವೇಶನದ ವೇಳೆ ಧರಣಿ ಕುಳಿತು ಗಮನಸೆಳೆದಿದ್ದರು. ಅಂದು ಅನೇಕ ಸಚಿವರು, ಶಾಸಕರು ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸುವ ಜೊತೆಗೆ ಹೂಗಾರ್ ಅವರಲ್ಲಿ ಸುಪ್ತವಾಗಿದ್ದ ಚಳವಳಿಯ ಮನಸ್ಸು ಕಂಡು ಬೆರಗಾಗಿದ್ದರು.

ಮುರುಘ ಮಠದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ರೈತಮುಖಂಡರು, ಹೋರಾಟಗಾರರನ್ನು ಮುಖಾಮುಖಿಯನ್ನಾಗಿಸಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಜಿಲ್ಲೆಯ ಚಳವಳಿಗಾರರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ನಡೆಸಿದರು. ಸಮಾರಂಭದಲ್ಲಿ ಮುರುಘ ಶರಣರು ಸೇರಿ ಅನೇಕ ಮಠಾಧೀಶರು ಹಾಗೂ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಪಾಲ್ಗೊಂಡಿದ್ದರು. ಅದಾದ ನಂತರ ವಿಧಾನಸಭೆ ಅಧಿವೇಶನದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಪುಟ್ಟಣ್ಣಯ್ಯ ಧ್ವನಿಯಾದರು.

ಕಾಮ್ರೆಡ್ ಜಿ.ಚಂದ್ರಪ್ಪ, ಅಖಿಲ ಭಾರತ ಕಿಸಾನ್ ಮಹಾಸಭಾದ ಗೋಪಾಲ್, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ಮುರುಘ ರಾಜೇಂದ್ರ ಒಡೆಯರ್, ರೆಡ್ಡಿಹಳ್ಳಿ ವೀರಣ್ಣ, ಬಸ್ತಿಹಳ್ಳಿ ಸುರೇಶಬಾಬು, ನರೇನಹಳ್ಳಿ ಅರುಣ್‌ಕುಮಾರ್, ದಗ್ಗೆ ಶಿವಪ್ರಕಾಶ್, ಚಳ್ಳಕೆರೆ ಬಸವರಾಜ್ ಸೇರಿ ಅನೇಕರು ಚಳವಳಿಗೆ ಶಕ್ತಿತುಂಬುವ ಕೆಲಸ ಮಾಡಿದ್ದನ್ನು ಹೂಗಾರ್ ಸ್ಮರಿಸಿಕೊಳ್ಳುತ್ತಾರೆ.

ಮುಖ್ಯವಾಗಿ ಭದ್ರಾ ಯೋಜನೆ ಜಾರಿಗಾಗಿ ಬೆಂಗಳೂರಿನ ಸೆನೆಟ್ ಹಾಲ್‌ನಲ್ಲಿ ಎರಡು ಸಾವಿರ ಜನರನ್ನು ಸೇರಿಸಿ ಪ್ರಥಮ ಬಾರಿಗೆ ಸಮಾವೇಶ ಸಂಘಟಿಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದು ವಿಶೇಷ. ಸಮಾವೇಶದಲ್ಲಿ ಎಚ್.ಆಂಜನೇಯ, ಟಿ.ಬಿ.ಜಯಚಂದ್ರ, ಪ್ರೊ.ರವಿವರ್ಮಕುಮಾರ್ ಪಾಲ್ಗೊಂಡು ಹೋರಾಟದ ಕಿಚ್ಚು ಹೆಚ್ಚಲು ಸ್ಫೂರ್ತಿ ತುಂಬಿದರು.

ಈ ರೀತಿ ಜಿಲ್ಲೆ ಸೇರಿ ವಿವಿಧೆಡೆ ಚಳವಳಿ, ಸಮಾವೇಶ, ಸಭೆ ನಡೆಯುತ್ತಿದ್ದ ವೇಳೆ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯ ವೆಚ್ಚವನ್ನು ೬ ಸಾವಿರ ಕೋಟಿ ರೂಪಾಯಿಯಿಂದ ೧೨ ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸಿದ್ದು ಗಮನಿಸಬಹುದಾಗಿದೆ. ಪ್ರಥಮ ಬಾರಿಗೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಭಾವಚಿತ್ರವನ್ನು ಭದ್ರಾ ಮೇಲ್ದಂಡೆ ಹೋರಾಟಕ್ಕೆ ಬಳಸಿ ಗಮನಸೆಳೆದರು.

ಅದಾದ ನಂತರ ಹಿರಿಯೂರಿನ ಶಾಸಕರ ಪರಿಶ್ರಮದೊಂದಿಗೆ ವಾಣಿ ವಿಲಾಸ ಸಾಗರ ಜಲಾಶಯದ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್, ಮತ್ತು ಅವರ ತಾಯಿ ಮಹಾರಾಣಿ ಕೆಂಪನಂಜಮ್ಮಣಿ ವಾಣಿ ವಿಲಾಸ ಸನ್ನಿಧಾನ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಯಿತು.

17 ದಿನ ಬಳ್ಳಾರಿ ಜೈಲುವಾಸ : 

ಉತ್ತರಕರ್ನಾಟಕದ ಕಲಬುರುಗಿ ಜಿಲ್ಲೆಯ ಲಕ್ಷ್ಮಣ್ ಹೂಗಾರ್, ಐಟಿಐ ಓದುವಾಗ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಐಟಿಐ ನಂತರ ಕಾಮ್ರೆಡ್ ಅನಂತಸುಬ್ಬರಾವ್ ಅವರ ಮಾರ್ಗದರ್ಶನದಲ್ಲಿ ಪೂರ್ಣಾವಧಿ ಹೋರಾಟಗಾರರಾಗಿ ಚಳವಳಿ ಪ್ರವೇಶಿಸಿದರು.

ಆ ಕಾಲಘಟ್ಟದಲ್ಲಿ ಬಾಗೂರು ನವಿಲೆ ಚಳವಳಿಯಲ್ಲಿ ಒಂದೂವರೇ ವರ್ಷಕ್ಕೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದರು. ರಾಜ್ಯಮಟ್ಟದ ಹೋರಾಟದಲ್ಲಿ ಸಕ್ರಿಯತೆ ಹೊಂದಿದರು.  1997 ರಲ್ಲಿ ಕೆಎಸ್‌ಆರ್‌ಟಿಸಿ ಖಾಸಗೀಕರಣ ವಿರೋಧಿಸಿ ನಡೆದಂತಹ ಹೋರಾಟದಲ್ಲಿ 17 ದಿನಗಳಿಗೂ ಹೆಚ್ಚು ಕಾಲ ಬಳ್ಳಾರಿಯ ಜೈಲುವಾಸ ಅನುಭವಿಸಿದ್ದರು. ಜೈಲಿನಲ್ಲಿದ್ದರೂ ಕಾರ್ಮಿಕರ ಒಗ್ಗಟ್ಟು, ನೈತಿಕತೆ ಕುಗ್ಗದಂತೆ ಹೂಗಾರ್ ಅವರನ್ನು ಆವರಿಸಿಕೊಂಡಿತ್ತು.

ಭದ್ರಾವತಿಯ ರೈತ ಮತ್ತು ಕಾರ್ಮಿಕರ ಹೋರಾಟಗಳಿಗೆ ಸಕ್ರಿಯವಾಗಿ ಭಾಗವಹಿಸಿ ಹಳ್ಳಿ ಹಳ್ಳಿಗಳನ್ನು ಸುತ್ತಿದರು. ಹೀಗೆ ಹೋರಾಟದ ಹಾದಿಯಲ್ಲಿ ಹೆಜ್ಜೆ ಹಾಕಿದ ಬಳಿಕ ಹೊಟ್ಟೆಪಾಡಿಗಾಗಿ ಪತ್ರಿಕೆ, ದೃಶ್ಯಮಾಧ್ಯಮದಲ್ಲಿ 21 ವರ್ಷ ಕಾರ್ಯನಿರ್ವಹಿಸಿ ಕೃಷಿಚಟುವಟಿಕೆಯತ್ತ ವಾಲಿದ ಹೂಗಾರ್, ತಮ್ಮ ಹೋರಾಟದ ಅವಧಿಯಲ್ಲಿ ಪರಿಚಯವಾಗಿದ್ದ ಬೀರೇನಹಳ್ಳಿ ರಾಮಣ್ಣ ಅವರ ಊರಿಗೆ ಹತ್ತಿರದಲ್ಲಿ ಕೊಡಿಸಿದ ಜಮೀನಿನನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಆದರೂ ಹೋರಾಟದಿಂದ ವಿಶ್ರಮಿಸದೆ ನಿರಂತರವಾಗಿ ಜನಪರ, ಕಾರ್ಮಿಕ, ನೀರಾವರಿ ಹೋರಾಟಗಳಲ್ಲಿ ಸದಾ ಚಟುವಟಿಕೆಯಲ್ಲಿದ್ದಾರೆ.

===

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now