ನಾಗಾಲ್ಯಾಂಡ್ನಲ್ಲಿ ನಕಲಿ (ಕಲಬೆರಕೆ) ಮದ್ಯ ಸೇವಿಸಿ ಕನಿಷ್ಠ 19 ಜನರು ಸಾವನ್ನಪ್ಪಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಲ್ಲಿ ಮೊಕೊಕ್ಚುಂಗ್ ಜಿಲ್ಲೆಯಲ್ಲಿ ಎಂಟು ಹಾಗೂ ಟ್ಯೂಯೆನ್ಸಾಂಗ್ ಜಿಲ್ಲೆಯಲ್ಲಿ 11 ಜನರು ಅಸ್ವಸ್ಥಗೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಜ್ಯದಲ್ಲಿ 1990 ರಿಂದಲೇ ಮದ್ಯ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಅಕ್ರಮವಾಗಿ ಮದ್ಯ ಸರಬರಾಜು ಆಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ದುರಂತದ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು ರಾಜ್ಯಾದ್ಯಂತ ಹಲವೆಡೆ ದಾಳಿ ನಡೆಸಿ 19 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಸುಮಾರು 3,000 ಅಕ್ರಮ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ನಿಖರ ಕಾರಣ ಹಾಗೂ ಅಕ್ರಮ ಮದ್ಯದ ಮೂಲ ಮತ್ತು ಪೂರೈಕೆ ಜಾಲವನ್ನು ಪತ್ತೆಹಚ್ಚಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ. ಬುಂಗ್ಲಾಂಗ್ ಚಾಂಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಸಾವಿನ ಹಿಂದಿನ ವೈಜ್ಞಾನಿಕ ಕಾರಣ ತಿಳಿಯಲು ಮದ್ಯದ ಮಾದರಿಗಳನ್ನು ಗುವಾಹಟಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅನುಮಾನಾಸ್ಪದ ಅಥವಾ ಲೇಬಲ್ ರಹಿತ ಮದ್ಯವನ್ನು ಸೇವಿಸದಂತೆ ಎಚ್ಚರಿಕೆ ನೀಡಿರುವ ಪೊಲೀಸ್ ಇಲಾಖೆ, ಮದ್ಯ ಸೇವಿಸಿದ ನಂತರ ತಲೆಸುತ್ತು, ದೃಷ್ಟಿ ಮಂದವಾಗುವುದು, ಉಸಿರಾಟದ ತೊಂದರೆ ಅಥವಾ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.









