ಬೆಂಗಳೂರು.ಸೆಪ್ಟೆಂಬರ್.24 : ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿರುವ 24ನೇ ಕಂತಿನ ಆರ್ಥಿಕ ನೆರವು ಪಡೆಯಲು ಬಯೋಮೆಟ್ರಿಕ್ ಅಥವಾ ಮುಖ (ಫೇಸ್) ದೃಢೀಕರಣ ಆಧಾರಿತ ಇ-ಕೆವೈಸಿ (e-KYC) ಪೂರ್ಣಗೊಳಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಯೋಜನೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಹಾಗೂ ನಕಲಿ ಮತ್ತು ಮೃತ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುವುದನ್ನು ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮುಂದಿನ 2,000 ರೂ. ಕಂತಿನ ಹಣ ರೈತರ ಖಾತೆಗೆ ಜಮೆಯಾಗಬೇಕಾದರೆ ಬಾಕಿ ಇರುವ ಎಲ್ಲಾ ಫಲಾನುಭವಿಗಳು ಕೂಡಲೇ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕೆಂದು ಕೋರಲಾಗಿದೆ.
ಆಧಾರ್ ಒಟಿಪಿ ವ್ಯವಸ್ಥೆ ರದ್ದು:
ಈ ಹಿಂದೆ ಚಾಲ್ತಿಯಲ್ಲಿದ್ದ ಆಧಾರ್ ಓಟಿಪಿ (OTP) ಆಧಾರಿತ ಇ-ಕೆವೈಸಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ರದ್ದುಗೊಳಿಸಿದೆ. ಪ್ರಸ್ತುತ ಬಯೋಮೆಟ್ರಿಕ್ (ಬೆರಳಚ್ಚು) ಅಥವಾ ಫೇಸ್ ಅಥೆಂಟಿಕೇಶನ್ (ಮುಖ ದೃಢೀಕರಣ) ಮೂಲಕವೇ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಹಾಗೂ NPCI ಲಿಂಕ್ ಆಗಿದ್ದರೂ ಸಹ ಇ-ಕೆವೈಸಿ ಪ್ರಕ್ರಿಯೆ ಮಾಡಿಸಲೇಬೇಕಾಗುತ್ತದೆ.
ಇ-ಕೆವೈಸಿ ಎಲ್ಲಿ ಮತ್ತು ಹೇಗೆ ಮಾಡಿಸಬೇಕು?
ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ: ಇದನ್ನು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳು (CSC) ಮತ್ತು ಗ್ರಾಮ ಒನ್ / ಕರ್ನಾಟಕ ಒನ್ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದು.
ಗ್ರಾಮ ಮಟ್ಟದಲ್ಲಿ: ಗ್ರಾಮ ಮಟ್ಟದಲ್ಲಿ ವಿ.ಎನ್.ಒ (VNO) ಲಾಗಿನ್ ಮೂಲಕ ಅಥವಾ ಫಲಾನುಭವಿಗಳು ಸ್ವಯಂ ಪ್ರೇರಿತವಾಗಿ ಮೊಬೈಲ್ ಆ್ಯಪ್ ಮೂಲಕ ಇ-ಕೆವೈಸಿ ಮಾಡಬಹುದು.
ಮೊಬೈಲ್ ಆ್ಯಪ್ ಮೂಲಕ ಸ್ವತಃ ಮಾಡಿಕೊಳ್ಳುವ ವಿಧಾನ:
ಗೂಗಲ್ ಪ್ಲೇ ಸ್ಟೋರ್ನಿಂದ ‘ಪಿಎಂ-ಕಿಸಾನ್ ಆ್ಯಪ್’ (PM-KISAN App) ಮತ್ತು ‘ಆಧಾರ್ ಫೇಸ್ ಆ್ಯಪ್’ (Aadhaar Face App) ಡೌನ್ಲೋಡ್ ಮಾಡಿಕೊಳ್ಳಬೇಕು.
ನೋಂದಾಯಿತ ಆಧಾರ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ ಬೆನಿಫಿಷಿಯರಿ ಸ್ಟೇಟಸ್ ಪರಿಶೀಲಿಸಬೇಕು.
ಒಂದು ವೇಳೆ ‘ಇ-ಕೆವೈಸಿ ನೋ (No)’ ಎಂದು ತೋರಿಸಿದರೆ, ಅದರ ಮೇಲೆ ಕ್ಲಿಕ್ ಮಾಡಿ ಮುಖವನ್ನು ಸ್ಕ್ಯಾನ್ ಮಾಡಲು ಒಪ್ಪಿಗೆ ನೀಡಿದರೆ ಇ-ಕೆವೈಸಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.
ಕೇಂದ್ರ ಸರ್ಕಾರದ ಈ ಯೋಜನೆಯಡಿ 24ನೇ ಕಂತಿನ ಹಣವು ನೇರವಾಗಿ ರೈತರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲಿದ್ದು, ಬಯೋಮೆಟ್ರಿಕ್ ಅಥವಾ ಮುಖ ಆಧಾರಿತ ಇ-ಕೆವೈಸಿ ಮಾಡಿಸಿರುವ ಫಲಾನುಭವಿಗಳಿಗೆ ಮಾತ್ರ ಈ ಹಣ ಲಭ್ಯವಾಗಲಿದೆ. ರೈತರು ಪ್ರತಿ ವರ್ಷವೂ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.













