ದೆಹಲಿ. ಸೆಪ್ಟೆಂಬರ್. 24: ಎಲ್ಪಿಜಿ (LPG) ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ಗಳನ್ನು ಪಡೆಯಲು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು (e-KYC) ಕಡ್ಡಾಯಗೊಳಿಸಲಾಗಿದ್ದು, ಈ ನಿಯಮ ಅಕ್ಟೋಬರ್ 1, 2026 ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ.
ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ಸೌಲಭ್ಯ ನೇರವಾಗಿ ತಲುಪಬೇಕು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ದೇಶಾದ್ಯಂತ ಈಗಾಗಲೇ ಶೇ. 89.9 ರಷ್ಟು, ಅಂದರೆ ಸುಮಾರು 27.43 ಕೋಟಿ ಗ್ಯಾಸ್ ಸಂಪರ್ಕಗಳಿಗೆ ಆಧಾರ್ ಜೋಡಣೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಹಕರ ಅನುಕೂಲಕ್ಕಾಗಿ ತೈಲ ಕಂಪನಿಗಳು ಆಧಾರ್ ಪರಿಶೀಲನೆಗೆ ಸುಲಭ ವಿಧಾನಗಳನ್ನು ಕಲ್ಪಿಸಿವೆ.

ಗ್ಯಾಸ್ ಸಿಲಿಂಡರ್ ಮನೆಗೆ ತಲುಪಿಸುವ ಡೆಲಿವರಿ ಬಾಯ್ ಮೂಲಕ
ನೇರವಾಗಿ ನಿಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ
ಸಂಬಂಧಿತ ಕಂಪನಿಯ ಮೊಬೈಲ್ ಆ್ಯಪ್ಗಳ ಮೂಲಕ
ಈಗಾಗಲೇ ಆಧಾರ್ ದೃಢೀಕರಣ (KYC) ಪೂರ್ಣಗೊಳಿಸಿರುವ ಗ್ರಾಹಕರು ಮತ್ತೊಮ್ಮೆ ಮಾಡಿಸುವ ಅಗತ್ಯವಿಲ್ಲ. ಆದರೆ, ಇದುವರೆಗೆ ಪ್ರಕ್ರಿಯೆ ಮುಗಿಸದ ಗ್ರಾಹಕರು ಯಾವುದೇ ಅಡೆತಡೆ ಇಲ್ಲದೆ ಸಬ್ಸಿಡಿ ಸಿಲಿಂಡರ್ ಪಡೆಯಲು ತಕ್ಷಣವೇ ಈ ಪರಿಶೀಲನೆಯನ್ನು ಪೂರ್ಣಗೊಳಿಸಿಕೊಳ್ಳುವಂತೆ ತೈಲ ಕಂಪನಿಗಳು ಮನವಿ ಮಾಡಿವೆ.










