ಖಾರ್ಟೂಮ್: ಈಶಾನ್ಯ ಸುಡಾನ್‌ನ ಚಿನ್ನದ ಗಣಿಯೊಂದರಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 11 ಗಣಿ ಕಾರ್ಮಿಕರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಣಿಯ ಸುರಂಗ ಹಠಾತ್ ಕುಸಿದುಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.
ಕೆಂಪು ಸಮುದ್ರ (ರೆಡ್ ಸೀ) ರಾಜ್ಯದ ದೂರದ ‘ಓನಿ’ ಪ್ರದೇಶದಲ್ಲಿ ಶನಿವಾರ ರಾತ್ರಿಯೇ ಗಣಿ ಕುಸಿಯಲು ಆರಂಭಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾನುವಾರದ ವೇಳೆಗೆ 11 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 30 ಕಾರ್ಮಿಕರನ್ನು ರಕ್ಷಿಸಲಾಗಿದೆ. ಅವಶೇಷಗಳಡಿ ಸಿಲುಕಿರುವ ಇತರ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸುಡಾನೀಸ್ ಮಿನರಲ್ ರಿಸೋರ್ಸಸ್ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಡಾನ್‌ನಲ್ಲಿ ಗಣಿ ಕುಸಿತದ ಘಟನೆಗಳು ಹೆಚ್ಚಾಗುತ್ತಿದ್ದು, ಕೇವಲ ಒಂದು ವಾರದ ಅವಧಿಯಲ್ಲಿ ನಡೆದಿರುವ ಎರಡನೇ ದೊಡ್ಡ ದುರಂತ ಇದಾಗಿದೆ. ಕಳೆದ ಭಾನುವಾರವಷ್ಟೇ ದೇಶದ ಪಶ್ಚಿಮ ಭಾಗದ ಚಿನ್ನದ ಗಣಿಯೊಂದರ ಹಲವು ಸುರಂಗಗಳು ಕುಸಿದು ಬಿದ್ದು ಬರೋಬ್ಬರಿ 82 ಮಂದಿ ಸಾವನ್ನಪ್ಪಿದ್ದರು.
ದುರಂತಕ್ಕೆ ಕಾರಣವೇನು?
ಸುಡಾನ್‌ನಲ್ಲಿ ಸಾವಿರಾರು ಸಣ್ಣ ಮತ್ತು ಅನಧಿಕೃತ ಗಣಿಗಳಿವೆ. ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಭೀಕರ ಅಂತರ್ಯುದ್ಧ ಮತ್ತು ಕ್ಷಾಮದಂತಹ ಕಠಿಣ ಪರಿಸ್ಥಿತಿಯಿಂದಾಗಿ, ಜನರು ಜೀವದ ಹಂಗು ತೊರೆದು ಇಂತಹ ಅಪಾಯಕಾರಿ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಗಣಿಗಳಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ಇಂತಹ ಸರಣಿ ದುರಂತಗಳಿಗೆ ಮುಖ್ಯ ಕಾರಣವಾಗಿದೆ.
ಪ್ರಸ್ತುತ ದುರಂತ ಸಂಭವಿಸಿರುವ ಪ್ರದೇಶವು ಸೇನೆಯ ವಿರುದ್ಧ ಹೋರಾಡುತ್ತಿರುವ ಅರೆಸೈನಿಕ ಪಡೆ ‘ರಾಪಿಡ್ ಸಪೋರ್ಟ್ ಫೋರ್ಸಸ್’ (ಆರ್‌ಎಸ್‌ಎಫ್) ನಿಯಂತ್ರಣದಲ್ಲಿದೆ. ಏಪ್ರಿಲ್ 2023 ರಿಂದ ಆರಂಭವಾದ ಈ ಸಂಘರ್ಷದಲ್ಲಿ ಇದುವರೆಗೆ 59,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆರ್‌ಎಸ್‌ಎಫ್ ಪಡೆ ತನ್ನ ಸೇನಾ ವೆಚ್ಚಕ್ಕಾಗಿ ದೇಶದ ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ತಜ್ಞರು ಈ ಹಿಂದೆಯೇ ವರದಿ ಮಾಡಿದ್ದಾರೆ.











