ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಶ್ರೀ ಸದ್ಗುರು ಆಶ್ರಮದಲ್ಲಿ ಭಾನುವಾರ ಕರ್ನಾಟಕ ಶ್ರೀ ಪತಂಜಲಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಚಿಂತನ ಕೂಟ ಮತ್ತು ಭೋವಿ ಗುರುಪೀಠದ ಸಿಹಿ ಸಂಭ್ರಮದಲ್ಲಿ ಪತಂಜಲಿ
ಸಂಸ್ಥೆಯ ಪ್ರಾಂತ್ಯೀಯ ಸಂಚಾಲಕರಾದ ಕುಮಾರ್ ಅವರು ಮಾತನಾಡಿದರು.
”ಗೋನೂರು ಕೆರೆಗೆ ಭದ್ರಾ ನೀರು ಹರಿದುಬಂದ ತಕ್ಷಣ ಜಿಲ್ಲೆಯ ಜನತೆ ನೀಡಿದ ಸ್ವಾಗತ ಹಾಗೂ ಸಲ್ಲಿಸಿದ ನಮಸ್ಕಾರವನ್ನು ಕಂಡರೆ, ಈ ಭಾಗದ ಜನರ ಸತ್ಕಾರ ಹಾಗೂ ಕೃತಜ್ಞತಾ ಭಾವ ಎಂಥದ್ದು ಎಂಬುದು ಸ್ಪಷ್ಟವಾಗುತ್ತದೆ. ಬರದ ಸೀಮೆಯ ಜನರ ಬಹುದಿನದ ಕನಸು ಕೊನೆಗೂ ನನಸಾಗಿದ್ದು, ಇದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ” ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಚಿತ್ರದುರ್ಗ ಭಾಗದ ಜನರು ನೀರನ್ನು ಕಂಡು ಅತ್ಯಂತ ಸಂಭ್ರಮಿಸಿದ್ದಾರೆ. “ಈ ನೀರು ನಮಗೆ ಸಿಗುವುದೇ ಇಲ್ಲ” ಎಂದು ನಿರಾಶೆಗೊಂಡಿದ್ದ ಜನರಲ್ಲಿ ಈಗ ಹೊಸ ಆಶಾವಾದ ಮೂಡಿದೆ. ರೈತಾಪಿ ವರ್ಗದಲ್ಲಿ ಉತ್ಸಾಹ ಚಿಗುರೊಡೆದಿದೆ.
ಬಹಳಷ್ಟು ವರ್ಷಗಳಿಂದ ‘ಈ ಭಾಗಕ್ಕೆ ನೀರಾವರಿ ಸಾಧ್ಯವೇ? ಎಂಬ ಅನುಮಾನ ಹಾಗೂ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈಗ ಭದ್ರೆ ಬಂದಿರುವುದರಿಂದ ಆ ಎಲ್ಲಾ ಸಂಶಯಗಳಿಗೂ ಕೊನೆ ಬಿದ್ದಿದೆ. ಸುದೀರ್ಘ ವರ್ಷಗಳ ಪರಿಶ್ರಮ ಹಾಗೂ ಹೋರಾಟಗಾರರ ಸತತ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಭದ್ರಾ ಜಲದ ಆಗಮನದಿಂದ ಜಿಲ್ಲೆಯ ಭೂಮಿ ಹಸಿರಾಗಲಿ, ಪ್ರತಿಯೊಬ್ಬರ ಬದುಕು ಹಸನಾಗಲಿ ಎಂಬ ಆಶಯದೊಂದಿಗೆ ನಾವೆಲ್ಲರೂ ಸಾಗೋಣ” ಎಂದು ಕುಮಾರ್ ಕರೆ ನೀಡಿದರು.
ಭೋವಿ ಸಮಾಜದ ಮುಖಂಡ ಎನ್ ಪಿ ಭರತ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬಂದಿರುವುದು ಬಯಲುಸೀಮೆ ಜನರ ಭಾಗ್ಯ. ಈ ಯೋಜನೆಗಾಗಿ ಅನೇಕ ವರ್ಷಗಳ ಕಾಲ ನಡೆದ ಹೋರಾಟ ಮತ್ತು ಪರಿಶ್ರಮದ ಫಲವಾಗಿ ಹರಿದುಬಂದಿರುವ ನೀರನ್ನು ಬಳಸುವಾಗ ನಾವು ಅತ್ಯಂತ ಜಾಗರೂಕತೆ ವಹಿಸಬೇಕು. ನೀರನ್ನು ಕೃಷಿ ಮತ್ತು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಸಮರ್ಪಕವಾಗಿ ಬಳಸಬೇಕೇ ವಿನಃ, ಯಾವುದೇ ಕಾರಣಕ್ಕೂ ಅನಗತ್ಯವಾಗಿ ಪೋಲು ಮಾಡಬಾರದು. ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಅತ್ಯಂತ ಜವಾಬ್ದಾರಿಯಿಂದ ಬಳಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನೀರಿನ ಮಹತ್ವವನ್ನು ಅರಿತು, ಅದನ್ನು ಕೃಷಿ ಹಾಗೂ ಕುಡಿಯುವ ನೀರಿಗಾಗಿ ಮಾತ್ರ ಮಿತ ಬಳಕೆ ಅತ್ಯಂತ ಅವಶ್ಯಕ ಎಂದು ಹೇಳಿದರು.
ಚಿತ್ರದುರ್ಗ ನಗರ ಸಂಚಾಲಕರಾದ ಹನುಮಂತಣ್ಣ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಸಂಚಾಲಕರಾದ ರಾಮಲಿಂಗಣ್ಣ, ಚಳ್ಳಕೆರೆ ಸಂಚಾಲಕರಾದ ಮಹೇಶ್ ಅಣ್ಣ
ಹಿರಿಯೂರು ಸಂಚಾಲಕರಾದ ಚಂದ್ರಕಾಂತಣ್ಣ
ಹೊಸದುರ್ಗ ಸಂಚಾಲಕರಾದ ರವಿಚಂದ್ರಣ್ಣ
ವಲಯ ಶಿಕ್ಷಣ ಪ್ರಮುಖರಾದ ಮನೋಹರಣ್ಣ, ಭೋವಿಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ ಉಪಸ್ಥಿತರಿದ್ದರು.











