ದೆಹಲಿ.ಸೆಪ್ಟೆಂಬರ್. 20: ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಎಚ್ಚರಿಕೆ. ದೇಶಾದ್ಯಂತ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಳ್ಳಲಿವೆ. ವಾರದಲ್ಲಿ 5 ದಿನಗಳ ಕೆಲಸದ ದಿನ ಜಾರಿ ಮಾಡುವುದು ಸೇರಿದಂತೆ ಹಲವು ಬಾಕಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರು ಮತ್ತೊಮ್ಮೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ತಿಂಗಳಲ್ಲೇ ನೌಕರರು ನಡೆಸುತ್ತಿರುವ ಎರಡನೇ ಮುಷ್ಕರ ಇದಾಗಿದೆ.
ಸೆಪ್ಟೆಂಬರ್ 28, 29 ಮತ್ತು 30ರಂದು ದೇಶಾದ್ಯಂತ ಮುಷ್ಕರ ನಡೆಸುವುದಾಗಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಘೋಷಿಸಿದೆ. ಸೆಪ್ಟೆಂಬರ್ 26 ನಾಲ್ಕನೇ ಶನಿವಾರ ಹಾಗೂ ಸೆಪ್ಟೆಂಬರ್ 27 ಭಾನುವಾರದ ಸಾಮಾನ್ಯ ರಜಾದಿನಗಳಾಗಿದ್ದು, ನಂತರದ ಮೂರು ದಿನ ಮುಷ್ಕರ ನಡೆಯಲಿದೆ. ಹೀಗಾಗಿ ಸತತ ಐದು ದಿನಗಳ ಕಾಲ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ.
ಸತತ ರಜೆಗಳಿಂದಾಗಿ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆಯಿದ್ದು, ಶಾಖೆಗೆ ತೆರಳಿ ಮಾಡಬೇಕಾದ ಕೆಲಸಗಳಿದ್ದರೆ ಮೊದಲೇ ಪೂರ್ಣಗೊಳಿಸಿಕೊಳ್ಳುವುದು ಉತ್ತಮ. ಈ ಮುಷ್ಕರದಿಂದಾಗಿ ಸರ್ಕಾರಿ ಬ್ಯಾಂಕುಗಳು ಮಾತ್ರವಲ್ಲದೆ ಖಾಸಗಿ ಬ್ಯಾಂಕ್ಗಳ ಸೇವೆಗಳ ಮೇಲೂ ಪರಿಣಾಮ ಬೀರಲಿದೆ.
ಗ್ರಾಹಕರಿಗೆ ಎಸ್ಬಿಐ (SBI) ಮಹತ್ವದ ಸಲಹೆ
ಸತತ ರಜೆಗಳ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಗ್ರಾಹಕರಿಗೆ ಮಾಹಿತಿ ಹಂಚಿಕೊಂಡಿದೆ. ಮುಷ್ಕರ ಆರಂಭವಾಗುವ ಮುನ್ನವೇ ಅಗತ್ಯ ವಹಿವಾಟುಗಳನ್ನು ಮುಗಿಸಿಕೊಳ್ಳುವಂತೆ ಹಾಗೂ ತುರ್ತು ನಗದು ಅಗತ್ಯಗಳಿಗಾಗಿ ಎಟಿಎಂ (ATM), ಎಡಿಡಬ್ಲ್ಯುಎಂ (ADWM) ಕೇಂದ್ರಗಳನ್ನು ಬಳಸಿಕೊಳ್ಳುವಂತೆ ಕೋರಿದೆ.
ಜೊತೆಗೆ ಯುಪಿಐ (UPI), ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಗ್ರಾಹಕ ಸೇವಾ ಕೇಂದ್ರಗಳ (CSP) ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿರುವ ಬ್ಯಾಂಕ್, ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.











