ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ. ದಸರಾ ಅಂಗವಾಗಿ ಅರಮನೆಯಲ್ಲಿ ನಡೆಯಲಿರುವ ರಾಜಮನೆತನದ ಸಾಂಪ್ರದಾಯಿಕ ಖಾಸಗಿ ದರ್ಬಾರ್ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳ ವೇಳಾಪಟ್ಟಿಯನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ಬಿಡುಗಡೆ ಮಾಡಿದ್ದಾರೆ.
ರಾಜಮನೆತನದ ಪರಂಪರೆಯಂತೆ ಈ ಬಾರಿಯೂ ಖಾಸಗಿ ದರ್ಬಾರ್ ಹಾಗೂ ಧಾರ್ಮಿಕ ಆಚರಣೆಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ.
ರಾಜಮನೆತನದ ಆಚರಣೆಗಳಿಗೆ ಪೂರ್ವಭಾವಿಯಾಗಿ ಅರಮನೆಯ ಭದ್ರತಾ ಕೊಠಡಿಯಲ್ಲಿರುವ ಐತಿಹಾಸಿಕ ರತ್ನಖಚಿತ ಸಿಂಹಾಸನವನ್ನು ಅಕ್ಟೋಬರ್ 5ರಂದು ಹೊರತೆಗೆದು ದರ್ಬಾರ್ ಹಾಲ್‌ನಲ್ಲಿ ಜೋಡಿಸಲಾಗುತ್ತದೆ.ಅಕ್ಟೋಬರ್ 11ರಂದು ಬೆಳಿಗ್ಗೆ 11.45ಕ್ಕೆ ನಿಗದಿತ ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಪೋಷಾಕು ಧರಿಸಿ ರತ್ನಖಚಿತ ಸಿಂಹಾಸನವನ್ನು ಆರೋಹಣ ಮಾಡಲಿದ್ದಾರೆ. ಇದರೊಂದಿಗೆ ರಾಜಮನೆತನದ ನವರಾತ್ರಿ ಖಾಸಗಿ ದರ್ಬಾರ್‌ಗೆ ಅಧಿಕೃತ ಚಾಲನೆ ದೊರೆಯಲಿದೆ.
ನವರಾತ್ರಿ ಆಚರಣೆಯ ಅಂಗವಾಗಿ ಅಕ್ಟೋಬರ್ 16ರಂದು ಅರಮನೆಯ ಒಳಾವರಣದಲ್ಲಿ ಸರಸ್ವತಿ ಪೂಜೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತದೆ.ಅಕ್ಟೋಬರ್ 20ರಂದು ಬೆಳಿಗ್ಗೆ 11.35ಕ್ಕೆ ಆಯುಧ ಪೂಜೆ ನಡೆಯಲಿದೆ. ಈ ವೇಳೆ ರಾಜಮನೆತನದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪುರಾತನ ಆಯುಧಗಳು ಹಾಗೂ ರಾಜವಂಶಸ್ಥರು ಬಳಸುವ ವಾಹನಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ.
ಅಕ್ಟೋಬರ್ 21ರಂದು ವಿಜಯದಶಮಿ ಹಿನ್ನೆಲೆಯಲ್ಲಿ ಜಂಬೂಸವಾರಿ ಹಾಗೂ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜಮನೆತನದ ಧಾರ್ಮಿಕ ವಿಧಿವಿಧಾನಗಳು ಮತ್ತು ಮೆರವಣಿಗೆ ಅರಮನೆ ಆವರಣದಿಂದ ಆರಂಭಗೊಂಡು ಬನ್ನಿಮಂಟಪ ತಲುಪುವುದರೊಂದಿಗೆ ದಸರಾ ಆಚರಣೆಯ ಪ್ರಮುಖ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.ರಾಜಮನೆತನದ ಖಾಸಗಿ ದರ್ಬಾರ್ ಸೇರಿದಂತೆ ದಸರಾ ಆಚರಣೆಯ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುವ ನಿರೀಕ್ಷೆಯಿದೆ.










