ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬ್ಯಾಂಕ್ಗಳ ಸ್ಥಿರ ಠೇವಣಿ (Fixed Deposit – FD) ಹಾಗೂ ಬೃಹತ್ ಠೇವಣಿಗಳ (Bulk Deposits) ಮೇಲಿನ ಬಡ್ಡಿದರ ನಿಯಮಗಳಲ್ಲಿ ಮಹತ್ವದ ತಿದ್ದುಪಡಿ ತಂದಿದೆ. ಈ ಪರಿಷ್ಕೃತ ಮಾರ್ಗಸೂಚಿಗಳು 2026ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ.
ಗ್ರಾಹಕರಿಗೆ ಪಾರದರ್ಶಕತೆ ಮತ್ತು ಏಕರೂಪತೆಯ ಲಾಭ ನೀಡುವುದು ಹಾಗೂ ಬ್ಯಾಂಕುಗಳು ತಮ್ಮ ಹಣಕಾಸಿನ ದ್ರವ್ಯತೆಯನ್ನು (Liquidity) ಸುಲಭವಾಗಿ ನಿರ್ವಹಿಸಲು ಅವಕಾಶ ಕಲ್ಪಿಸುವುದು ಈ ಬದಲಾವಣೆಯ ಮುಖ್ಯ ಉದ್ದೇಶವಾಗಿದೆ.
ಈ ನಿಯಮಗಳು ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು (SFB), ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRB), ಸ್ಥಳೀಯ ಬ್ಯಾಂಕುಗಳು, ಪೇಮೆಂಟ್ ಬ್ಯಾಂಕುಗಳು ಹಾಗೂ ನಗರ ಸಹಕಾರಿ ಬ್ಯಾಂಕುಗಳಿಗೆ ಅನ್ವಯವಾಗಲಿವೆ.

ಎಲ್ಲಾ ಶಾಖೆಗಳಲ್ಲೂ ಏಕರೂಪದ ಬಡ್ಡಿದರ
ಒಂದೇ ದಿನದಂದು ಮತ್ತು ಒಂದೇ ಮೊತ್ತದ ಠೇವಣಿ ಇಡುವ ಗ್ರಾಹಕರಿಗೆ, ಬ್ಯಾಂಕಿನ ಯಾವುದೇ ಶಾಖೆಯಲ್ಲಾದರೂ ಒಂದೇ ದರದ ಬಡ್ಡಿಯನ್ನು ನೀಡಬೇಕು. ದೇಶದ ಯಾವುದೇ ಭಾಗದ ಶಾಖೆಯ ಗ್ರಾಹಕನಿಗೂ ಬಡ್ಡಿದರದಲ್ಲಿ ತಾರತಮ್ಯವಾಗಬಾರದು ಎಂಬುದು ಇದರ ಉದ್ದೇಶ. ಒಂದೇ ಬ್ಯಾಂಕಿನ ಬೇರೆ ಬೇರೆ ಶಾಖೆಗಳಿಗೆ ಹೋದಾಗ ವಿಭಿನ್ನ ಬಡ್ಡಿದರ ಸಿಗುವ ಗೊಂದಲ ಇನ್ನು ಇರುವುದಿಲ್ಲ.
ಬಡ್ಡಿದರಗಳ ಮುಂಚಿತ ಪ್ರಕಟಣೆ

ಬ್ಯಾಂಕುಗಳು ತಮ್ಮ ಎಲ್ಲಾ ಠೇವಣಿಗಳ ಮೇಲಿನ ಬಡ್ಡಿದರವನ್ನು ಮುಂಚಿತವಾಗಿಯೇ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ವಿಶೇಷವಾಗಿ ₹3 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಬೃಹತ್ ಠೇವಣಿಗಳಿಗೆ (Bulk Deposits), ಪ್ರತಿ ವ್ಯವಹಾರ ದಿನದಂದು ಬೆಳಗ್ಗೆ 10:00 ಗಂಟೆಗೆ (10 ನಿಮಿಷಗಳ ರಿಯಾಯಿತಿ ಕಾಲಾವಕಾಶದೊಂದಿಗೆ) ಅಧಿಕೃತ ವೆಬ್ಸೈಟ್ನಲ್ಲಿ ಬಡ್ಡಿದರವನ್ನು ಪ್ರಕಟಿಸುವುದು ಕಡ್ಡಾಯವಾಗಿದೆ.
ಬೃಹತ್ ಠೇವಣಿ ಮತ್ತು ಬ್ಯಾಂಕುಗಳಿಗೆ ವಿನಾಯಿತಿ
ಬೃಹತ್ ಠೇವಣಿಗಳ ವಿಷಯದಲ್ಲಿ ಬ್ಯಾಂಕುಗಳು ತಮ್ಮ ದ್ರವ್ಯತಾ ಕವರೇಜ್ ಅನುಪಾತದ (Liquidity Coverage Ratio – LCR) ಅಪಾಯಕ್ಕೆ ಅನುಗುಣವಾಗಿ ವಿಭಿನ್ನ ಬಡ್ಡಿದರಗಳನ್ನು ನಿಗದಿಪಡಿಸಲು ಆರ್ಬಿಐ ಸ್ವಾತಂತ್ರ್ಯ ನೀಡಿದೆ. ಅನಿವಾಸಿ ಭಾರತೀಯರ (NRI) ರೂಪಾಯಿ ಠೇವಣಿಗಳಿಗೂ ಇದೇ ನಿಯಮ ಅನ್ವಯವಾಗಲಿದ್ದು, ಬ್ಯಾಂಕುಗಳು ತಮ್ಮ ಹಣಕಾಸಿನ ಅಗತ್ಯಕ್ಕೆ ತಕ್ಕಂತೆ ದರ ನಿರ್ಧರಿಸಲು ಸಹಕಾರಿಯಾಗಲಿದೆ.

ಈ ಹೊಸ ನಿಯಮಗಳಿಂದ ಚಿಲ್ಲರೆ ಹೂಡಿಕೆದಾರರಿಗೆ ಹೆಚ್ಚಿನ ಪಾರದರ್ಶಕತೆ ಸಿಗಲಿದ್ದು, ಬ್ಯಾಂಕುಗಳಿಗೂ ನಗದು ನಿರ್ವಹಣೆಯಲ್ಲಿ ಸ್ಪಷ್ಟತೆ ಸಿಗಲಿದೆ.










