ದೆಹಲಿ.ಸೆಪ್ಟೆಂಬರ್. 20: ರಿಯಾಯಿತಿ ದರದಲ್ಲಿ ಮತ್ತು ಸಬ್ಸಿಡಿಯೊಂದಿಗೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಪಡೆಯುವ ಗ್ರಾಹಕರಿಗೆ 2026ರ ಅಕ್ಟೋಬರ್ 1ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಅಡುಗೆ ಅನಿಲದ ದುರ್ಬಳಕೆ ತಡೆಯುವುದು, ನಕಲಿ ಸಂಪರ್ಕಗಳನ್ನು ರದ್ದುಪಡಿಸುವುದು ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ತಲುಪುವಂತೆ ಪಾರದರ್ಶಕತೆ ತರುವುದು ಈ ಹೊಸ ನಿಯಮದ ಮುಖ್ಯ ಉದ್ದೇಶವಾಗಿದೆ.
ಸೆಪ್ಟೆಂಬರ್ 19ರ ವರೆಗಿನ ಅಂಕಿಅಂಶಗಳ ಪ್ರಕಾರ, ದೇಶದ ಸಕ್ರಿಯ ಗೃಹಬಳಕೆ ಗ್ರಾಹಕರಲ್ಲಿ ಶೇಕಡಾ 89.9 ರಷ್ಟು ಮಂದಿ, ಅಂದರೆ ಸುಮಾರು 27.43 ಕೋಟಿ ಗ್ರಾಹಕರು ಈಗಾಗಲೇ ಬಯೋಮೆಟ್ರಿಕ್ ಪರಿಶೀಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈಗಾಗಲೇ ಈ ಪ್ರಕ್ರಿಯೆ ಮುಗಿಸಿದ ಗ್ರಾಹಕರಿಗೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ. ಆದರೆ ನಿಗದಿತ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸದ ಗ್ರಾಹಕರಿಗೆ ಸಬ್ಸಿಡಿ ಸಿಲಿಂಡರ್ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದ್ದು, ಆಧಾರ್ ದೃಢೀಕರಣ ಮುಗಿದ ನಂತರವೇ ಮತ್ತೆ ಸೇವೆ ಪುನರಾರಂಭಗೊಳ್ಳಲಿದೆ.
ಗ್ರಾಹಕರು ಈ ಪರಿಶೀಲನೆಯನ್ನು ಸುಲಭವಾಗಿ ಪೂರ್ಣಗೊಳಿಸಲು ತೈಲ ಕಂಪನಿಗಳು ಹಲವು ಮಾರ್ಗಗಳನ್ನು ಒದಗಿಸಿವೆ. ಸಿಲಿಂಡರ್ ವಿತರಣೆ ಮಾಡುವ ಡೆಲಿವರಿ ಸಿಬ್ಬಂದಿಯ ಮೂಲಕ ಸ್ಥಳದಲ್ಲೇ ಬಯೋಮೆಟ್ರಿಕ್ ಮಾಡಿಸಬಹುದು ಅಥವಾ ಸ್ಥಳೀಯ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಇದಲ್ಲದೆ ಇಂಡಿಯನ್ ಆಯಿಲ್ ಒನ್, ಹಲೋ ಬಿಪಿಸಿಎಲ್ ಹಾಗೂ ಎಚ್ಪಿ ಪೇ ಮೊಬೈಲ್ ಆ್ಯಪ್ಗಳ ಮೂಲಕ ಮನೆಯಲ್ಲೇ ಕುಳಿತು ಸ್ವತಂತ್ರವಾಗಿ ಡಿಜಿಟಲ್ ಪರಿಶೀಲನೆ ಮುಗಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.
ಬಯೋಮೆಟ್ರಿಕ್ ಆಧಾರ್ ದೃಢೀಕರಣ ಮಾಡಿಕೊಳ್ಳಲು ಇಷ್ಟವಿಲ್ಲದ ಅಥವಾ ಸಾಧ್ಯವಾಗದ ಗ್ರಾಹಕರಿಗೂ ಅಡುಗೆ ಅನಿಲ ಸಂಪರ್ಕ ಲಭ್ಯವಿರಲಿದೆ. ಆದರೆ ಅಂತಹ ಗ್ರಾಹಕರು ಯಾವುದೇ ಸರ್ಕಾರಿ ಸಬ್ಸಿಡಿ ಇಲ್ಲದೆ ಸಂಪೂರ್ಣ ಮಾರುಕಟ್ಟೆ ದರ ಪಾವತಿಸಿ 5 ಕೆಜಿ ಅಥವಾ 10 ಕೆಜಿ ಸಿಲಿಂಡರ್ಗಳನ್ನು ಮಾತ್ರ ಪಡೆಯಲು ಸಾಧ್ಯವಾಗಲಿದ್ದು, ಇದಕ್ಕಾಗಿ ಆಯಾ ಕಂಪನಿಗಳ ಪೋರ್ಟಲ್ ಅಥವಾ ವಾಟ್ಸಾಪ್ ಮೂಲಕ ತಮ್ಮ ಆಯ್ಕೆಯನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಈ ಹಿಂದೆ ಹಲವು ಬಾರಿ ಗಡುವು ವಿಸ್ತರಿಸಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೋಟ್ಯಂತರ ಎಸ್ಎಂಎಸ್ ಹಾಗೂ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆ ಏರಿಳಿತಗಳಿಂದಾಗಿ ತೈಲ ಕಂಪನಿಗಳು ಎದುರಿಸುತ್ತಿರುವ ನಷ್ಟವನ್ನು ತಗ್ಗಿಸಲು ಮತ್ತು ಸಬ್ಸಿಡಿ ಸೋರಿಕೆಯನ್ನು ತಡೆಯಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಲಾಗಿದ್ದು, ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ಗ್ರಾಹಕರು 1800 2333 555 ಉಚಿತ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.











