ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ , ಸೆಪ್ಟೆಂಬರ್. 19 : ಹಿರಿಯೂರು ತಾಲ್ಲೂಕಿನ ಪಿಲಾಜನಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ 8, 9 ಮತ್ತು 10 ನೇ ತರಗತಿಯ 92 ಮಕ್ಕಳಿಗೆ ರೋಟರಿ ನಂದಿನಿ ಬೆಂಗಳೂರು ಟ್ರಸ್ಟ್ ನವರು ಉಚಿತವಾಗಿ ಬೈಸಿಕಲ್ಗಳನ್ನು ವಿತರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಂ.ಆರ್.ಮಂಜುನಾಥ್ ಬೈಸಿಕಲ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ರೋಟರಿ ಬೆಂಗಳೂರು ನಂದಿನಿ ಟ್ರಸ್ಟ್ನವರು ಸೈಕಲ್ಗಳನ್ನು ವಿತರಿಸಿರುವುದು ಸುತ್ತಮುತ್ತಲಿನ ಐದಾರು ಕಿ.ಮೀ. ದೂರದಿಂದ ಬರುವ ಮಕ್ಕಳಿಗೆ ಅನುಕೂಲವಾಗಲಿದೆಯಲ್ಲದೆ ಶ್ರಮ ಮತ್ತು ಸಮಯ ಉಳಿತಾಯವಾಗುತ್ತದೆ. ಸರ್ಕಾರದ ಜೊತೆ ಖಾಸಗಿಯವರು ನೀಡುವ ಇಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣವಂತರಾಗುವಂತೆ ಮಕ್ಕಳಿಗೆ ಕರೆ ನೀಡಿದರು.
ರೋಟರಿ ಬೆಂಗಳೂರು ನಂದಿನಿ ಟ್ರಸ್ಟ್ನವರು ಪಿಲಾಜನಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ಗುರುತಿಸಿ ಮಕ್ಕಳಿಗೆ ಬೈಸಿಕಲ್ಗಳನ್ನು ನೀಡಿ ಉದಾರತನ ಮೆರೆದಿದ್ದಾರೆಂದು ಶ್ಲಾಘಿಸಿದರು. ರೋಟರಿ ಬೆಂಗಳೂರು ನಂದಿನಿ ಟ್ರಸ್ಟ್ ಅಧ್ಯಕ್ಷರಾರ ಡಾ.ಬಸವರಾಜ್, ಕಾರ್ಯದರ್ಶಿ ಕೆ.ರಂಗನಾಥ್, ಗೌರವಾಧ್ಯಕ್ಷರಾದ ಡಾ.ಪ್ರಕಾಶ್ ಹಾಗೂ ಪಿಲಾಜನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್.ಟಿ.ಚಂದ್ರಣ್ಣ ಮತ್ತು ಶಿಕ್ಷಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











