ದೆಹಲಿ.ಸೆಪ್ಟೆಂಬರ್.19 : 99ನೇ ಅಕಾಡೆಮಿ ಪ್ರಶಸ್ತಿಯ (ಆಸ್ಕರ್ 2027) ‘ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ’ ವಿಭಾಗಕ್ಕೆ ಭಾರತದ ಅಧಿಕೃತ ಸ್ಪರ್ಧಿಯಾಗಿ ಮರಾಠಿ ಚಿತ್ರ ‘ಗೋಂಧಳ್’ ಆಯ್ಕೆಯಾಗಿದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಶುಕ್ರವಾರ ಈ ಮಹತ್ವದ ಘೋಷಣೆ ಮಾಡಿದ್ದು, ಆಯ್ಕೆ ಸಮಿತಿಯ ಅಧ್ಯಕ್ಷ ಪಿ. ಶೇಷಾದ್ರಿ ಅವರ ನೇತೃತ್ವದ ಸಮಿತಿಯು ಒಟ್ಟು 33 ಚಿತ್ರಗಳ ಪಟ್ಟಿಯಿಂದ ಈ ಸಿನಿಮಾವನ್ನು ಅಂತಿಮಗೊಳಿಸಿದೆ. ಈ ಮೂಲಕ ಮರಾಠಿ ಚಿತ್ರರಂಗದ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ಸಂತೋಷ್ ದವಾಖರ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವು ಗ್ರಾಮೀಣ ಮಹಾರಾಷ್ಟ್ರದ ಹಿನ್ನೆಲೆಯನ್ನು ಹೊಂದಿದ್ದು, ನವದಂಪತಿಯ ಸುತ್ತ ನಡೆಯುವ ಸಾಂಪ್ರದಾಯಿಕ ಧಾರ್ಮಿಕ ಆಚರಣೆಯ ರಾತ್ರಿಯ ಕಥಾಹಂದರವನ್ನು ಅನಾವರಣಗೊಳಿಸುತ್ತದೆ. ಚಿತ್ರದಲ್ಲಿ ಸುರೇಶ್ ವಿಶ್ವಕರ್ಮ, ಕೈಲಾಶ್ ವಾಘ್ಮಾರೆ ಮತ್ತು ಮಾಧವಿ ಜುವೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರವು 2025ರ ನವೆಂಬರ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಗಲ್ಲಾಪೆಟ್ಟಿಗೆಯಲ್ಲಿ ಕೇವಲ 90 ಲಕ್ಷ ರೂಪಾಯಿ ಗಳಿಸಲಷ್ಟೇ ಶಕ್ತವಾಗಿತ್ತು. ಆದರೆ ವಿಮರ್ಶಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದ ಈ ಚಿತ್ರ, ಐಎಂಡಿಬಿಯಲ್ಲಿ (IMDb) 10ಕ್ಕೆ 8.9 ರಷ್ಟು ಅತ್ಯುನ್ನತ ರೇಟಿಂಗ್ ಪಡೆದು ಸಿನಿಪ್ರಿಯರ ಗಮನ ಸೆಳೆದಿತ್ತು.
ಆಸ್ಕರ್‌ಗೆ ಚಿತ್ರ ಆಯ್ಕೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ನಿರ್ದೇಶಕ ಸಂತೋಷ್ ದವಾಖರ್, ಇದು ತಮ್ಮ ಇಡೀ ತಂಡಕ್ಕೆ ಸಿಕ್ಕ ಅತ್ಯಂತ ದೊಡ್ಡ ಗೌರವ ಎಂದಿದ್ದಾರೆ. 99ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು 2027ರ ಮಾರ್ಚ್ 14ರಂದು ನಡೆಯಲಿದ್ದು, ಅಂತಿಮ ನಾಮನಿರ್ದೇಶನಗಳ ಪಟ್ಟಿಯು 2027ರ ಜನವರಿ 21ರಂದು ಪ್ರಕಟವಾಗಲಿದೆ. ಭಾರತಕ್ಕೆ ಈ ವಿಭಾಗದಲ್ಲಿ ಇದುವರೆಗೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿಲ್ಲವಾದ್ದರಿಂದ, ‘ಗೋಂಧಳ್’ ಮೇಲೆ ದೇಶಾದ್ಯಂತ ಭಾರಿ ನಿರೀಕ್ಷೆಗಳು ಮೂಡಿವೆ.











