ಚಿತ್ರದುರ್ಗ. ಸೆ.18: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರನ್ನು ಹರಿಸುವುದು ಸರ್ಕಾರದ 100 ದಿನಗಳ ಸಾಧನೆಗಳಲ್ಲಿ ಸೇರ್ಪಡೆಗೊಂಡಿದ್ದು, ಇದು ಜನಹಿತಕ್ಕಾಗಿ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ದಿನಾಂಕ: 06-09-2026 ರಿಂದ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಯ ಸರಪಳಿ 0.00 ಕಿ.ಮೀ ನಿಂದ 114.142 ಕಿ.ಮೀ (ಗೋನೂರು ಅಕ್ವಡಕ್ಟ್) ವರೆಗೆ ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗಿರುತ್ತದೆ. ಈ ಯೋಜನೆಯಿಂದ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1,54,000 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸುವ ಹಾಗೂ ಜಿಲ್ಲೆಯ 167 ಕೆರೆಗಳಿಗೆ ನೀರು ತುಂಬಿಸುವ ಪ್ರಮುಖ ಉದ್ದೇಶ ಹೊಂದಲಾಗಿದೆ.
ಪ್ರಾಯೋಗಿಕ ನೀರು ಹರಿಸುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಕಾಲುವೆ ಹಾಗೂ ಕೆರೆಯ ಕೋಡಿ ಹಳ್ಳದ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡುವುದು, ಜನ ಜಾನುವಾರುಗಳನ್ನು ಕಾಲುವೆ ಒಳಗಡೆ ಬಿಡುವುದು, ಕಾಲುವೆ/ಹಳ್ಳಗಳಲ್ಲಿ ಈಜಾಡುವುದು ಹಾಗೂ ಇನ್ನಿತರೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಈ ಸೂಚನೆಗಳನ್ನು ಉಲ್ಲಂಘಿಸುವುದು, ನಿಗಮದ ಆಸ್ತಿಯಾದ ನೀರಾವರಿ ಕಾಲುವೆ, ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್‍ಸೆಟ್‍ಗಳನ್ನು ಅಳವಡಿಸಿ ನೀರನ್ನು ಎತ್ತುವುದು, ನೀರಾವರಿ ಕಾಯ್ದೆಯ ವಿವಿಧ ನಿಯಮಗಳ ಪ್ರಕಾರ ಕಾನೂನು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸಿದವರ ವಿರುದ್ಧ ನೀರಾವರಿ ಕಾಯ್ದೆ ಮತ್ತು ಕಾನೂನು ರಿಚಿvಚಿ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಕೋರಿದ್ದಾರೆ.










