Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಯಲುಸೀಮೆಯ ಲಕ್ಷಾಂತರ ಕುಟುಂಬಗಳಿಗೆ ಭದ್ರೆ ಬೆಳಕು: ವೈ. ರವಿಕುಮಾರ್

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ಬಯಲುಸೀಮೆಯ ಲಕ್ಷಾಂತರ ಕುಟುಂಬಗಳಿಗೆ ಭದ್ರೆ ಬೆಳಕಾಗುತ್ತಿದ್ದಾಳೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ವೈ. ರವಿ ಕುಮಾರ್ ತಿಳಿಸಿದರು.

ತಾಪಂ ಕಚೇರಿಯಲ್ಲಿ ಶುಕ್ರವಾರ ಭೋವಿ ಗುರುಪೀರದಿಂದ ಆಯೋಜಿಸಿದ್ದ ಭದ್ರೆ ಸಿಹಿ ಸಂಭ್ರಮ ಕಾರ್ಯಕ್ರಮದಲ್ಲಿ ಸಿಬ್ಬಂದಿಗೆ ಸಿಹಿ ವಿತರಿಸಿ ಮಾತನಾಡಿದ ಅವರು, ಕೃಷಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರೆಯುವುದರಿಂದ ಕೃಷಿ ಉತ್ಪಾದನೆ ಹೆಚ್ಚಿ, ಗ್ರಾಮೀಣ ಭಾಗದ ರೈತರ ಮತ್ತು ಕೃಷಿಕೂಲಿಕಾರರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ತಿಳಿಸಿದರು.

ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯದ ಖಾತ್ರಿ ಮಿಷನ್, ಮತ್ತಿತರ ಅಭಿವೃದ್ಧಿ ಯೋಜನೆಗಳ ಮೂಲಕ ನೀರು ಸಂಗ್ರಹಣಾ ಮೂಲಗಳು, ಕಾಲುವೆ ನಿರ್ಮಾಣ ಹಾಗೂ ಕೆರೆಗಳ ಹೂಳೆತ್ತುವ ಕಾಮಗಾರಿಗಳನ್ನು ಕೈಗೊಂಡು ಯೋಜನೆಯ ಪ್ರಯೋಜನ ಪ್ರತಿಯೊಂದು ಹಳ್ಳಿಗೂ ಪಡೆಯಬೇಕು ಎಂದು ಹೇಳಿದರು.

ಮೂರುವರೆ ದಶಕಗಳ ಕಾಲ ಜಿಲ್ಲೆಯ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ನಿರಂತರ ಹೋರಾಟ ನಡೆಸಿದ ಫಲ ಭದ್ರಾ ಯೋಜನೆ
ಜಾರಿಗೊಂಡಿದೆ ಎಂದು ತಿಳಿಸಿದರು.

ಭದ್ರೆ ನೀರು ಜಿಲ್ಲೆಗೆ ಪ್ರವೇಶಿಸಿದೆ. ನಮ್ಮ ಕುಟುಂಬ, ಸಂಬಂಧಿಕರ ಜಮೀನುಗಳಿಗೆ ನೀರು ಹರಿದುಬರುತ್ತಿದೆ. ಲಕ್ಷಾಂತರ ಕುಟುಂಬಗಳಲ್ಲಿ ಭದ್ರೆ ಬೆಳಕು ಮೂಡಿದೆ. ಗೋನೂರು ಸೇರಿ ವಿವಿಧೆಡೆ ನೀರು ಹರಿಯುವ ದೃಶ್ಯ ಕಣ್ತುಂಬಿಕೊಳ್ಳುವುದೇ ಭಾಗ್ಯವಾಗಿದೆ ಎಂದರು.
ಇಂತಹ ಸೌಂದರ್ಯ, ಸೌಭಾಗ್ಯದ ಹಿಂದೆ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸದಸ್ಯರು, ಮಠಾಧೀಶರು, ರೈತರು ಸೇರಿ ವಿವಿಧ ಕ್ಷೇತ್ರದ ಜನರ ಹೋರಾಟದ ಶ್ರಮ ಅಡಗಿದೆ. ಅವರೆಲ್ಲರನ್ನೂ ನಾವೆಲ್ಲರೂ ಸ್ಮರಿಸಬೇಕೆಂದು ತಿಳಿಸಿದರು.

ಬರಡು ನೆಲವಾಗಿದ್ದ ಚಿತ್ರದುರ್ಗ ಜಿಲ್ಲೆ ಇನ್ನೂ ಕೆಲವೇ ದಿನಗಳಲ್ಲಿ ಹಸಿರಾಗಲಿದೆ. ಇನ್ನಷ್ಟು ತಾಲ್ಲೂಕುಗಳು, ಹಳ್ಳಿಗಳ ಕೆರೆಗಳಿಗೆ ನೀರು ಹರಿಯಬೇಕೆಂಬ ಬೇಡಿಕೆ ಜನರಿಂದ
ಬರುತ್ತಿದ್ದು, ಇದು ಈಡೇರುವ ವಿಶ್ವಾಸವಿದೆ ಎಂದರು.

ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಮಾರುತಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಜನಪ್ರತಿನಿಧಿಗಳು ಯೋಜನೆ ಪರ ಧ್ವನಿಯೆತ್ತಿದರೆ, ಹೋರಾಟಗಾರರು ದಶಕಗಳ ಕಾಲ ಚಳವಳಿ ನಡೆಸಿದ್ದಾರೆ. ಈ ಎರಡು ವರ್ಗದ ಶ್ರಮದ ಫಲ ಜಿಲ್ಲೆಗೆ ಭದ್ರೆ ನೀರು ಬಂದಿದೆ ಎಂದು ತಿಳಿಸಿದರು.

ಜಿಲ್ಲೆಗೆ ಭದ್ರೆ ನೀರು ಹರಿಯುತ್ತಿರುವುದರಿಂದ ಸಂಭ್ರಮ ಮನೆ ಮಾಡಿದೆ, ಇದನ್ನು ಇಮ್ಮಡಿಗೊಳಿಸುವ ಕೆಲಸವನ್ನು ಭೋವಿ ಮಠದ ಶ್ರೀ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ ಲಕ್ಷ
ಸಿಹಿ ಹಂಚಿಕೆ ಮೂಲಕ ಮಾಡುತ್ತಿದ್ದಾರೆ ಎಂದರು. ಭೋವಿ ಸಮಾಜದ ಮುಖಂಡ ಎನ್.ಪಿ ಭರತ್, ವಕೀಲ ಎ.ಎಚ್.ಸುರೇಶ್ ಕಲ್ಲಹಳ್ಳಿ, ಪಿಡಿಒ ಕೆ.ಸಿ.ಸುನೀತಾ, ಗೀತಾ ಪರಶುರಾಮ್ ಮತ್ತಿತರಿದ್ದರು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now