Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಣೇಶೋತ್ಸವಕ್ಕೆ ಸಾಮಾಜಿಕ ಕಳಕಳಿ: ಮೋದಕಪ್ರಿಯ ಗೆಳೆಯರ ಬಳಗದಿಂದ ರಕ್ತದಾನ ಶಿಬಿರ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಸೆ. 17 : ರಕ್ತದಾನ ಮಾಡುವ ಮೂಲಕ ಮತ್ತೊಂದು ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ಆರೋಗ್ಯ ವಂತರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಕಾಗಜ್ ಫೌಂಡೇಶನ್ ಸಂಸ್ಥಾಪಕಿ ಕವಿತಾ ರೆಡ್ಡಿ ಹೇಳಿದರು.

ನಗರದ ಐಯುಡಿಪಿ ಲೇಔಟ್‍ನ ಆದಿಜಾಂಬವ ಬಡಾವಣೆಯಲ್ಲಿ ಮೋದಕಪ್ರಿಯ ಗೆಳೆಯರ ಬಳಗದ ನಾಲ್ಕನೇ ವರ್ಷದ ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು. ರಕ್ತದಾನ ಮಾಡುವುದರಿಂದ ಆರೋಗ್ಯವಂತ ವ್ಯಕ್ತಿ ನಿಶ್ಯಕ್ತನಾಗುತ್ತಾನೆ ಎಂಬ ತಪ್ಪು ಕಲ್ಪನೆ ಯಾರಲ್ಲಿಯೂ ಇರಬಾರದು. ಸೂಕ್ತ ಆರೋಗ್ಯ ಹೊಂದಿರುವವರು ರಕ್ತದಾನ ಮಾಡುವುದರಿಂದ ಅಗತ್ಯವಿರುವವರಿಗೆ ಸಮಯಕ್ಕೆ ಸರಿಯಾಗಿ ರಕ್ತ ದೊರೆಯುವಂತಾಗುತ್ತದೆ. ರಕ್ತದಾನದಿಂದ ಹೊಸ ರಕ್ತಕಣಗಳ ಉತ್ಪತ್ತಿಗೆ ಸಹಕಾರಿಯಾಗುವುದರ ಜೊತೆಗೆ, ಸಾವು? ಬದುಕಿನ ನಡುವೆ ಹೋರಾಡುತ್ತಿರುವ ರೋಗಿಗಳ ಜೀವ ಉಳಿಸಲು ನೆರವಾಗುತ್ತದೆ ಎಂದು ತಿಳಿಸಿದರು.

ಅಪಘಾತಗಳು, ಹೆರಿಗೆ ಸಂದರ್ಭಗಳು, ಶಸ್ತ್ರಚಿಕಿತ್ಸೆಗಳು ಹಾಗೂ ವಿವಿಧ ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಯಾವುದೇ ಜೀವಕ್ಕೆ ತೊಂದರೆಯಾಗದಂತೆ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿ ಯುವಜನರು ದುಶ್ಚಟಗಳಿಂದ ದೂರವಿದ್ದು, ತಮ್ಮ ಶಕ್ತಿ ಮತ್ತು ಸಮಯ ವನ್ನು ಸಮಾಜಮುಖಿ ಚಟುವಟಿಕೆ ಗಳಿಗೆ ಬಳಸಿಕೊಳ್ಳಬೇಕು. ಗಣೇಶ ಹಬ್ಬವೆಂದರೆ ಕೇವಲ ಸಂಭ್ರಮ, ಕುಣಿದು ಕುಪ್ಪಳಿಸುವುದಕ್ಕೆ ಸೀಮಿತವಾಗ ಬಾರದು. ಸಮಾಜಕ್ಕೆ ಉಪಯೋಗವಾಗುವ ರಕ್ತದಾನ, ಸ್ವಚ್ಛತೆ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಪರೋಪಕಾರಿ ಕಾರ್ಯಗಳಲ್ಲಿ ಯುವಕರು ತೊಡಗಿಸಿಕೊಂಡಾಗ ಹಬ್ಬಕ್ಕೆ ಮತ್ತಷ್ಟು ಅರ್ಥ ಬರುತ್ತದೆ ಎಂದು ಕವಿತಾ ರೆಡ್ಡಿ ಹೇಳಿದರು.

ಯುವ ಮುಖಂಡ ರವಿಚಿನ್ನು ಮಾತನಾಡಿ, ಮೋದಕಪ್ರಿಯ ಗೆಳೆಯರ ಬಳಗದವರು ಗಣೇಶ ಪ್ರತಿಷ್ಠಾಪನೆಯ ಆರಂಭಿಕ ವರ್ಷದಿಂದಲೇ ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾನವೀಯತೆ ಮೆರೆದಿರುವುದು ಸಂತೋಷದ ಸಂಗತಿ ರಕ್ತಕ್ಕೆ ಪರ್ಯಾಯವಿಲ್ಲ. ಅಪಘಾತ, ಹೆರಿಗೆ ಹಾಗೂ ಆಪರೇಷನ್ ಸೇರಿದಂತೆ ಹಲವು ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕೆ ಅನುಗುಣವಾಗಿ ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗ ಬೇಕು. “ರಕ್ತದಾನ ಶ್ರೇಷ್ಠದಾನ” ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.

ಗಣೇಶೋತ್ಸವವನ್ನು ಸಾಮಾಜಿಕ ಕಳಕಳಿಯೊಂದಿಗೆ ಆಚರಿಸುವ ಮೂಲಕ ಯುವಜನರಿಗೆ ಉತ್ತಮ ಸಂದೇಶ ನೀಡುತ್ತಿರುವ ಮೋದಕಪ್ರಿಯ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮೋದಕಪ್ರಿಯ ಗೆಳೆಯರ ಬಳಗದ ಅಭಿಷೇಕ್, ವರ್ಧನ್, ಸಲೀಂ, ವರುಣ್, ಸಚಿನ್, ದೈವಿಕ, ದ್ರುವಕುಮಾರ್ ಸೇರಿದಂತೆ ಬಳಗದ ಸದಸ್ಯರು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now