ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್, 11 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಚಿತ್ರದುರ್ಗ ಹಾಗೂ ಬಸವೇಶ್ವರ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ “ಮಣ್ಣಿನ ಗಣೇಶನ ಮೂರ್ತಿಯನ್ನು ಪೂಜಿಸೋಣ, ಜಲ ಮೂಲವನ್ನು ಉಳಿಸೋಣ” ಎಂಬ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮವನ್ನು ನಗರದ ಬಸವೇಶ್ವರ ಆಸ್ಪತ್ರೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪರಿಸರ ಅಧಿಕಾರಿಗಳಾದ ಶ್ರೀಮತಿ ಪಲ್ಲವಿ ಅವರು, “ಭಾರತೀಯ ಸಂಪ್ರದಾಯದಲ್ಲಿ ಗಣೇಶನಿಗೆ ಪ್ರಥಮ ಪೂಜೆ ಸಲ್ಲುತ್ತದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರನ್ನು ಒಂದೆಡೆ ಸೇರಿಸಲು ಗಣೇಶೋತ್ಸವವನ್ನು ಮಾಧ್ಯಮವಾಗಿ ಬಳಸಲಾಗುತ್ತಿತ್ತು. ಆದರೆ ಇಂದು ಪರಿಸರ ಪ್ರಜ್ಞೆ ಮೂಡಿಸಲು ನಾವು ಒಂದೆಡೆ ಸೇರಬೇಕಾದ ಸನ್ನಿವೇಶ ಬಂದೊದಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಹಾಗೂ ರಾಸಾಯನಿಕ ಬಣ್ಣ ಬಳಸಿ ತಯಾರಿಸಿದ ಗಣೇಶನ ಮೂರ್ತಿಗಳಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ದೇವರ ಹೆಸರಿನಲ್ಲಿ ನಿಸರ್ಗ ನಾಶ ಮಾಡುವುದು ಸರಿಯಲ್ಲ. ಬದಲಾಗಿ ಮಣ್ಣು, ಅರಿಶಿನ ಹಾಗೂ ಧಾನ್ಯಗಳಿಂದ ಮಾಡಿದ ಪರಿಸರ ಸ್ನೇಹಿ ಗಣಪತಿಯನ್ನು ಪೂಜಿಸಿ, ಆಡಂಬರ ಮತ್ತು ಪ್ಲಾಸ್ಟಿಕ್ ಮುಕ್ತವಾಗಿ ಹಬ್ಬವನ್ನು ಆಚರಿಸೋಣ” ಎಂದು ಕರೆ ನೀಡಿದರು.
ಉಪ ಪರಿಸರಾಧಿಕಾರಿ ಶ್ರೀ ರಾಜೇಶ್ ಅವರು ಮಾತನಾಡಿ, “ಹಿಂದೆ ಸ್ವಾಭಾವಿಕ ಮಣ್ಣಿನ ಗಣಪತಿಯನ್ನಷ್ಟೇ ಪೂಜಿಸಲಾಗುತ್ತಿತ್ತು. ಆದರೆ ಇಂದು ಕೆಮಿಕಲ್ ಯುಕ್ತ PoP ಹಾಗೂ ಬಣ್ಣದ ಗಣೇಶ ಮೂರ್ತಿಗಳನ್ನು ಸ್ಥಾಪಿಸುತ್ತಿರುವುದು ವಿಷಾದನೀಯ” ಎಂದರು.
ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ (AWE) ಜಾಫರ್ ಅವರು ಮಾತನಾಡಿ, “PoP ಗಣೇಶನಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ತಿಳಿದಿದ್ದರೂ ಜನರು ರಾಸಾಯನಿಕ ಗಣಪತಿಯನ್ನು ಖರೀದಿಸುತ್ತಿದ್ದಾರೆ. ಚಿತ್ರದುರ್ಗ ನಗರಸಭೆಯು ಗಣೇಶ ವಿಸರ್ಜನೆಗಾಗಿಯೇ ಚಂದ್ರವಳ್ಳಿಯಲ್ಲಿ ಪ್ರತ್ಯೇಕ ಬಾವಿಯನ್ನು ನಿರ್ಮಿಸಿದ್ದು, ಸಾರ್ವಜನಿಕರು ಆ ಬಾವಿಯಲ್ಲೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಿ ಜಲಮೂಲಗಳನ್ನು ರಕ್ಷಿಸಬೇಕು” ಎಂದು ಮನವಿ ಮಾಡಿದರು.
ಬಸವೇಶ್ವರ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗೇಂದ್ರಗೌಡ ಅವರು ಮಾತನಾಡಿ, “ಪ್ರಾಚೀನ ಕಾಲದಲ್ಲಿ ಹಸುವಿನ ಸಗಣಿ ಹಾಗೂ ಗರಿಕೆಯಿಂದ ಪರಿಸರ ಸ್ನೇಹಿ ಗಣಪತಿ ಮಾಡಿ ಪೂಜಿಸಲಾಗುತ್ತಿತ್ತು. ಇಂದು ಕೆಮಿಕಲ್ ಬಳಕೆಯಿಂದ ಪರಿಸರ ಹಾಳಾಗಿ ನಾವು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಯುವಜನರು ಜಾಗೃತರಾಗಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಮುಂದಾಗಬೇಕು” ಎಂದು ತಿಳಿಸಿದರು. ಶ್ರೀ ಹಾಲಸ್ವಾಮಿ ಎನ್.ಎಸ್. ರವರು ಮಾತನಾಡಿ, “ನಾವು ನಿಸರ್ಗಕ್ಕೆ ಏನು ಕೊಡುತ್ತೇವೆಯೋ, ಪರಿಸರ ನಮಗೆ ಅದನ್ನೇ ಮರಳಿ ನೀಡುತ್ತದೆ. ಆದ್ದರಿಂದ ನಮ್ಮ ಆಲೋಚನೆ ಉನ್ನತವಾಗಿರಲಿ” ಎಂದರು.
ಸಭೆಯಲ್ಲಿ ಶ್ರೀಮತಿ ಮಂಜುಳಾ ಸ್ವಾಗತ ಕೋರಿದರು. ಶ್ರೀಮತಿ ಸಿದ್ದಗಂಗಮ್ಮ ಕಾರ್ಯಕ್ರಮ ನಿರೂಪಿಸಿದರು, ಹಾಗೂ ಹೇಮಲತಾ ಜಿ ಪ್ರಾರ್ಥನೆ ಮತ್ತು ಧನ್ಯವಾದ ಸಮರ್ಪಣೆ ಮಾಡಿದರು.










