Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾತ್ರಿ ಪದೇಪದೆ ಎಚ್ಚರವಾಗುತ್ತಿದೆಯೇ? ನಿರ್ಲಕ್ಷ್ಯ ಮಾಡಬೇಡಿ.. ಆರೋಗ್ಯದ ಮೇಲೆ ಪರಿಣಾಮ ಬೀರಬಹುದು!

---Advertisement---

ರಾತ್ರಿ ಮಲಗಿದ ನಂತರ ಪದೇಪದೇ ಎಚ್ಚರವಾಗುವುದು, ಎಷ್ಟೇ ಪ್ರಯತ್ನಿಸಿದರೂ ನಿದ್ದೆ ಬಾರದಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದನ್ನು ಸಣ್ಣ ವಿಷಯವೆಂದು ನಿರ್ಲಕ್ಷಿಸಿದರೆ ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಾನಸಿಕ ಒತ್ತಡ ಮತ್ತು ಆತಂಕ ನಿದ್ರೆಯ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತವೆ. ದಿನವಿಡೀ ಕಾಡುವ ಯೋಚನೆಗಳು ಮಲಗುವಾಗಲೂ ಮುಂದುವರಿದರೆ ಶಾಂತಿಯುತ ನಿದ್ರೆ ಅಸಾಧ್ಯ. ಇದರೊಂದಿಗೆ ಮಲಗುವ ಕೋಣೆಯಲ್ಲಿ ಹೆಚ್ಚು ಬೆಳಕು, ಶಬ್ದ, ಅತಿಯಾದ ತಂಪು ಅಥವಾ ಸೆಕೆ ಹಾಗೂ ಸೌಕರ್ಯವಿಲ್ಲದ ಹಾಸಿಗೆ-ದಿಂಬುಗಳು ನಿದ್ರಾಭಂಗಕ್ಕೆ ಕಾರಣವಾಗಬಹುದು. ಸಂಜೆ ಅಥವಾ ರಾತ್ರಿಯ ವೇಳೆ ಕಾಫಿ, ಚಹಾ ಮುಂತಾದ ಕೆಫಿನ್ ಅಂಶವಿರುವ ಪಾನೀಯಗಳು ಮತ್ತು ಮದ್ಯಪಾನ ಸೇವನೆಯು ನಿದ್ರೆಯ ಸರಪಳಿಯನ್ನು ತುಂಡರಿಸುತ್ತದೆ. ಜೊತೆಗೆ ಪದೇಪದೇ ಮೂತ್ರವಿಸರ್ಜನೆ, ಮೈಕೈ ನೋವು ಹಾಗೂ ಕೆಲವು ಔಷಧಿಗಳ ಅಡ್ಡಪರಿಣಾಮಗಳೂ ಇದಕ್ಕೆ ಕಾರಣವಾಗಿರಬಹುದು.

ನಿದ್ರಾಹೀನತೆ (ಇನ್ಸೋಮ್ನಿಯಾ) ಎಂದರೆ ಕೇವಲ ನಿದ್ರೆ ಬಾರದಿರುವುದು ಮಾತ್ರವಲ್ಲ; ರಾತ್ರಿ ಎಚ್ಚರವಾದ ನಂತರ ಮತ್ತೆ ಮಲಗಲು ಸಾಧ್ಯವಾಗದಿರುವುದು ಹಾಗೂ ಮುಂಜಾನೆ ಬೇಗನೆ ಎಚ್ಚರವಾಗಿ ನಿದ್ರೆ ಬಾರದಿರುವುದು ಕೂಡ ಇದರಲ್ಲಿ ಸೇರಿದೆ. ಈ ಸಮಸ್ಯೆ ಮುಂದುವರಿದರೆ ಹಗಲಿನಲ್ಲಿ ಅತಿಯಾದ ಆಯಾಸ, ಸಿಡುಕುತನ, ನೆನಪಿನ ಶಕ್ತಿ ಕುಂದುವುದು ಮತ್ತು ಏಕಾಗ್ರತೆಯ ಕೊರತೆ ಕಾಡಬಹುದು.

ಸ್ಲೀಪ್ ಆಪ್ನಿಯಾ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ರಾತ್ರಿ ಅತಿಯಾದ ಗೊರಕೆ, ನಿದ್ರೆಯಲ್ಲೇ ಉಸಿರು ಕಟ್ಟಿದಂತಾಗುವುದು, ಉಸಿರಾಟಕ್ಕೆ ತೊಂದರೆಯಾಗಿ ಏಕಾಏಕಿ ಎಚ್ಚರಗೊಳ್ಳುವುದು ಸ್ಲೀಪ್ ಆಪ್ನಿಯಾ (Sleep Apnea) ಕಾಯಿಲೆಯ ಪ್ರಮುಖ ಲಕ್ಷಣಗಳಾಗಿರಬಹುದು. ಇದರ ಪರಿಣಾಮವಾಗಿ ಬೆಳಿಗ್ಗೆ ತಲೆನೋವು ಮತ್ತು ಹಗಲಿನಲ್ಲಿ ಅತಿಯಾದ ನಿದ್ರೆ ತೂಕಡಿಕೆ ಕಂಡುಬರುತ್ತದೆ.

ಉತ್ತಮ ನಿದ್ರೆಗಾಗಿ ತಜ್ಞರ ಸಲಹೆಗಳು

ಪ್ರತಿದಿನ ನಿಗದಿತ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಬೆಳೆಸಿಕೊಳ್ಳಿ.

ಹಗಲಿನ ವೇಳೆಯಲ್ಲಿ ನಿಯಮಿತ ದೈಹಿಕ ವ್ಯಾಯಾಮ ಇರಲಿ.

ಮಲಗುವ ಮುನ್ನ ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಮುಂತಾದ ಡಿಜಿಟಲ್ ಪರದೆಗಳಿಂದ ದೂರವಿರಿ.

ಸಂಜೆಯ ನಂತರ ಚಹಾ, ಕಾಫಿ ಸೇವನೆಯನ್ನು ಕಡ್ಡಾಯವಾಗಿ ಮಿತಿಗೊಳಿಸಿ.

ಮಲಗುವ ಕೋಣೆ ಶಾಂತ, ಕತ್ತಲೆ ಹಾಗೂ ಆರಾಮದಾಯಕ ಉಷ್ಣಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ.

ನಿದ್ರೆಯ ಸಮಸ್ಯೆಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ, ಸ್ವಯಂಪ್ರೇರಿತರಾಗಿ ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

Join WhatsApp

Join Now

Join Telegram

Join Now