ಇನ್ಮುಂದೆ ವಾಟ್ಸಾಪ್ ಕೇವಲ ಚಾಟಿಂಗ್, ಫೋಟೋ-ವಿಡಿಯೋ ಹಂಚಿಕೊಳ್ಳಲು ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ನಿಮ್ಮ ದೈನಂದಿನ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಕೂಡ ಬಳಸಬಹುದು. ಈಗಾಗಲೇ ವಾಟ್ಸಾಪ್‌ನಲ್ಲಿ ಯುಪಿಐ (UPI) ಪಾವತಿ ಸೌಲಭ್ಯವಿದ್ದು, ಇನ್ನು ಮುಂದೆ ವಿದ್ಯುತ್, ಗ್ಯಾಸ್, ನೀರಿನ ಬಿಲ್, ಕ್ರೆಡಿಟ್ ಕಾರ್ಡ್ ಬಿಲ್ ಹಾಗೂ ಸಾಲದ ಇಎಂಐಗಳನ್ನು ಸುಲಭವಾಗಿ ಪಾವತಿಸುವ ಹೊಸ ಸೇವೆಯನ್ನು ವಾಟ್ಸಾಪ್ ಪರಿಚಯಿಸಿದೆ.
ಇದರಿಂದಾಗಿ ಬಳಕೆದಾರರು ಬೇರೆ ಪೇಮೆಂಟ್ ಆ್ಯಪ್‌ಗಳನ್ನು ಬಳಸುವ ಅಗತ್ಯವಿಲ್ಲದೆ, ನೇರವಾಗಿ ವಾಟ್ಸಾಪ್‌ನಲ್ಲೇ ಕ್ಷಣಾರ್ಧದಲ್ಲಿ ಬಿಲ್ ಪಾವತಿ ಮಾಡಬಹುದು. ಭಾರತದಲ್ಲಿರುವ ಆಂಡ್ರಾಯ್ಡ್ ಹಾಗೂ ಐಒಎಸ್ (iOS) ಬಳಕೆದಾರರಿಗೆ ಈ ಸೇವೆಯು ಹಂತ ಹಂತವಾಗಿ ಲಭ್ಯವಾಗಲಿದೆ.
ಈ ಹೊಸ ವೈಶಿಷ್ಟ್ಯವು ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (BBPS) ನೆಟ್‌ವರ್ಕ್ ಮೂಲಕ ಕಾರ್ಯನಿರ್ವಹಿಸುತ್ತದೆ. ವಿದ್ಯುತ್, ಗ್ಯಾಸ್, ಫಾಸ್ಟ್ಯಾಗ್ ರೀಚಾರ್ಜ್, ವಿಮಾ ಪ್ರೀಮಿಯಂ, ನೀರಿನ ಬಿಲ್ ಸೇರಿದಂತೆ 30ಕ್ಕೂ ಹೆಚ್ಚು ವಿಭಾಗಗಳ 22,722ಕ್ಕೂ ಅಧಿಕ ಬಿಲ್ ಪೂರೈಕೆದಾರರಿಗೆ ಈ ವ್ಯವಸ್ಥೆಯು ಬೆಂಬಲ ನೀಡುತ್ತದೆ.
ವಾಟ್ಸಾಪ್ ಮೂಲಕ ಬಿಲ್ ಪಾವತಿಸುವುದು ಹೇಗೆ?
ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಓಪನ್ ಮಾಡಿ.
ಮೇಲ್ಭಾಗದಲ್ಲಿ ಕಾಣಿಸುವ ರೂಪಾಯಿ (₹) ಐಕಾನ್ ಮೇಲೆ ಕ್ಲಿಕ್ ಮಾಡಿ.
ನಂತರ ‘ಬಿಲ್ ಪೇಮೆಂಟ್ಸ್’ (Bill Payments) ಆಯ್ಕೆಯನ್ನು ಆರಿಸಿ.
ನೀವು ಪಾವತಿಸಬೇಕಾದ ಬಿಲ್ ವಿಭಾಗವನ್ನು (ಕರೆಂಟ್, ಗ್ಯಾಸ್, ನೀರು ಇತ್ಯಾದಿ) ಆಯ್ಕೆಮಾಡಿ.
ನಿಮ್ಮ ಗ್ರಾಹಕ ಐಡಿ ಅಥವಾ ಬಿಲ್ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ಯುಪಿಐ ಪಿನ್ (UPI PIN) ನಮೂದಿಸಿ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕವೂ ಪಾವತಿ ಸಾಧ್ಯ
ಬ್ಯಾಂಕ್ ಖಾತೆಯಷ್ಟೇ ಅಲ್ಲದೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕವೂ ಬಿಲ್ ಪಾವತಿಸುವ ಅವಕಾಶವನ್ನು ನೀಡಲಾಗಿದೆ. ಈಗಾಗಲೇ ವಾಟ್ಸಾಪ್‌ನಲ್ಲಿ ಮೆಟ್ರೋ ಟಿಕೆಟ್ ಬುಕಿಂಗ್ ಸೌಲಭ್ಯ ಚಾಲ್ತಿಯಲ್ಲಿದ್ದು, ಈಗ ಬಿಲ್ ಪಾವತಿ ಸೇವೆಯೂ ಸೇರ್ಪಡೆಯಾಗಿದೆ. ಜೊತೆಗೆ, ಬಳಕೆದಾರರು ಈ ಹಿಂದೆ ಪಾವತಿಸಿದ ಬಿಲ್‌ಗಳ ವಿವರ ಹಾಗೂ ಬಾಕಿ ಇರುವ ಬಿಲ್‌ಗಳನ್ನು ಕೂಡ ಇದರಲ್ಲಿ ಪರಿಶೀಲಿಸಬಹುದು. ಭಾರತದಲ್ಲಿ 60 ಕೋಟಿಗೂ ಅಧಿಕ ವಾಟ್ಸಾಪ್ ಬಳಕೆದಾರರಿದ್ದು, ಈ ಹೊಸ ಫೀಚರ್ ಡಿಜಿಟಲ್ ಪಾವತಿಯನ್ನು ಮತ್ತಷ್ಟು ಸರಳಗೊಳಿಸಲಿದೆ.













