ಬೆಂಗಳೂರು.ಸೆಪ್ಟೆಂಬರ್.11 : ಕರ್ನಾಟಕದಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಕಡಿಮೆ ಅಭಿವೃದ್ಧಿ ಹೊಂದಿರುವ 11 ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದಿಂದ ‘ಉದ್ಯೋಗ ನಿಧಿ’ ಯೋಜನೆ ಪ್ರಸ್ತಾಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಯೋಜನೆಯಡಿ ಅರ್ಹ MSMEಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ನೇಮಕ ಮಾಡಿಕೊಳ್ಳುವ ಪ್ರತಿ ಹೆಚ್ಚುವರಿ ಕಾರ್ಮಿಕರಿಗೆ ತಿಂಗಳಿಗೆ ₹2,500ರಂತೆ, ಗರಿಷ್ಠ 24 ತಿಂಗಳವರೆಗೆ ಪ್ರೋತ್ಸಾಹಧನ ಪಡೆಯಲಿವೆ. ವಾರ್ಷಿಕ ₹305 ಕೋಟಿ ವೆಚ್ಚದ ಈ ಯೋಜನೆಯಡಿ, ಉದ್ಯೋಗ ಸೃಷ್ಟಿ ಹಾಗೂ ವೇತನ ಪಾವತಿಗಳನ್ನು ಪರಿಶೀಲಿಸಿ ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಿಂದ ಉದ್ಯೋಗಗಳನ್ನು ಸೃಷ್ಟಿಸಿ, ಅವುಗಳನ್ನು ನಿರಂತರವಾಗಿ ಉಳಿಸಿಕೊಳ್ಳುವ ಉದ್ಯಮಗಳಿಗೆ ಮಾತ್ರ ಯೋಜನೆಯ ಪ್ರಯೋಜನ ತಲುಪಲಿದೆ ಎಂದು ತಿಳಿಸಿದ್ದಾರೆ.
ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಹಾಗೂ ಬಾಗಲಕೋಟೆ ಸೇರಿದಂತೆ 11 ಜಿಲ್ಲೆಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲು ಮತ್ತು ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಲು ಈ ಯೋಜನೆ ಉತ್ತೇಜನ ನೀಡಲಿದೆ. ‘ಯುವ ನಿಧಿ’ ಯೋಜನೆಯೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಯುವಜನರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಹೂಡಿಕೆ ಮತ್ತು ಉದ್ಯೋಗಗಳನ್ನು ಯುವಜನರ ಮನೆಬಾಗಿಲಿಗೆ ತರುವುದು ನಮ್ಮ ಆದ್ಯತೆ. ತಮ್ಮದೇ ಪ್ರದೇಶದಲ್ಲಿ ಉತ್ತಮ ಅವಕಾಶಗಳನ್ನು ಪಡೆದು, ತಮ್ಮ ಭವಿಷ್ಯವನ್ನು ತಾವೇ ಕಟ್ಟಿಕೊಳ್ಳಲು ರಾಜ್ಯದ ಯುವಜನರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ನಮ್ಮ ಸಂಕಲ್ಪ ಎಂದು ಹೇಳಿದ್ದಾರೆ.










