ಮುಂಬೈ.ಸೆಪ್ಟೆಂಬರ್.11: ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಟ್ರಕ್ ಹಾಗೂ ಪಿಕಪ್ ವ್ಯಾನ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಈ ದುರಂತ ನಡೆದಿದೆ. ಅಪಘಾತದ ರಭಸಕ್ಕೆ ಪಿಕಪ್ ವ್ಯಾನ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರ ಪೈಕಿ ಮೂವರು ಮಕ್ಕಳೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಕ್ಷಣಾ ತಂಡಗಳು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.










