ದೆಹಲಿ.ಸೆಪ್ಟೆಂಬರ್.11: ದೇಶಾದ್ಯಂತ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣವಿಲ್ಲದೆ ಯಾವುದೇ ಹೊಸ ಜಿಎಸ್‌ಟಿ ನೋಂದಣಿಗೆ ಅವಕಾಶ ನೀಡಬಾರದು ಎಂದು ದೆಹಲಿ ಹೈಕೋರ್ಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಅಮಾಯಕ ನಾಗರಿಕರ ಕಳುವಾದ ಅಥವಾ ಸ್ಥಗಿತಗೊಂಡ ಪಾನ್ ಮತ್ತು ಆಧಾರ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ಜಿಎಸ್‌ಟಿ ನೋಂದಣಿ ಪಡೆಯುತ್ತಿರುವ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಅನಿಲ್ ಖೇತ್ರಪಾಲ್ ಮತ್ತು ನ್ಯಾಯಮೂರ್ತಿ ಶೈಲ್ ಜೈನ್ ಅವರಿದ್ದ ವಿಭಾಗೀಯ ಪೀಠವು ಅಮಾಯಕರ ದಾಖಲೆಗಳನ್ನು ಬಳಸಿ ನಡೆಸಲಾದ ನಕಲಿ ಜಿಎಸ್‌ಟಿ ನೋಂದಣಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ. ಸಿಜಿಎಸ್‌ಟಿ ಕಾಯ್ದೆ ಜಾರಿಗೆ ಬಂದು ಸುಮಾರು ಒಂಬತ್ತು ವರ್ಷಗಳು ಕಳೆದರೂ ಇಂತಹ ಅಕ್ರಮಗಳನ್ನು ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ವಂಚನೆಗಳಿಂದಾಗಿ ವ್ಯವಹಾರಕ್ಕೂ ತಮಗೂ ಸಂಬಂಧವೇ ಇಲ್ಲದ ಸಾಮಾನ್ಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದು, ಸರ್ಕಾರಕ್ಕೂ ಭಾರಿ ಪ್ರಮಾಣದ ತೆರಿಗೆ ನಷ್ಟವಾಗುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಂಸತ್ತಿನಲ್ಲಿ ಮಂಡಿಸಲಾದ ಅಂಕಿಅಂಶಗಳ ಪ್ರಕಾರ, 2023-24ರಲ್ಲಿ 15,085 ಕೋಟಿ ರೂಪಾಯಿ ತೆರಿಗೆ ವಂಚನೆಗೆ ಸಂಬಂಧಿಸಿದಂತೆ 2,800 ನಕಲಿ ನೋಂದಣಿಗಳು ಮತ್ತು 2024-25ರಲ್ಲಿ 13,109 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ 1,654 ನಕಲಿ ನೋಂದಣಿಗಳು ಪತ್ತೆಯಾಗಿವೆ. ಈ ಮೊದಲು ಅಪಾಯಕಾರಿ ಎಂದು ಗುರುತಿಸಲಾದ ಪ್ರಕರಣಗಳಿಗೆ ಮಾತ್ರ ಬಯೋಮೆಟ್ರಿಕ್ ತಪಾಸಣೆ ನಡೆಸಲಾಗುತ್ತಿತ್ತು. ಆದರೆ ಈ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಕುರಿತು ಸಚಿವರು ಹೇಳಿಕೆ ನೀಡಿ ವರ್ಷ ಕಳೆದರೂ ಅದನ್ನು ಸಮರ್ಪಕವಾಗಿ ಜಾರಿಗೊಳಿಸದಿರುವುದನ್ನು ನ್ಯಾಯಾಲಯ ಪ್ರಸ್ತಾಪಿಸಿದೆ.
ಸದ್ಯಕ್ಕೆ ದೇಶಾದ್ಯಂತ ಬಯೋಮೆಟ್ರಿಕ್ ಆಧಾರ್ ದೃಢೀಕರಣವಿಲ್ಲದೆ ಯಾವುದೇ ಜಿಎಸ್‌ಟಿ ನೋಂದಣಿ ಮಾಡದಂತೆ ಆದೇಶಿಸಿರುವ ನ್ಯಾಯಪೀಠ, ಈ ನಿರ್ದೇಶನವನ್ನು ಜಾರಿಗೊಳಿಸಲು ಯಾವುದೇ ಪ್ರಾಯೋಗಿಕ ತೊಂದರೆಗಳಿದ್ದರೆ ಆಕ್ಷೇಪಣೆ ಸಲ್ಲಿಸಲು ಅಧಿಕಾರಿಗಳಿಗೆ ಅವಕಾಶ ನೀಡಿದೆ. ಇದರೊಂದಿಗೆ ವೀಡಿಯೊ ಪರಿಶೀಲನೆ, ಮುಖಚಹರೆ ಗುರುತಿಸುವಿಕೆ, ಅರ್ಜಿದಾರರ ಐಪಿ ವಿಳಾಸ ದಾಖಲಿಸುವುದು, ಆದಾಯ ತೆರಿಗೆ ಇಲಾಖೆಯೊಂದಿಗೆ ನೈಜ ಸಮಯದಲ್ಲಿ ಮಾಹಿತಿ ಹಂಚಿಕೆ ಹಾಗೂ ಪಾನ್ ಬಳಕೆದಾರರಿಗೆ ತಕ್ಷಣದ ಎಚ್ಚರಿಕೆ ಸಂದೇಶ ರವಾನಿಸುವಂತಹ ಹಲವು ಸುಧಾರಣಾ ಕ್ರಮಗಳನ್ನು ಪರಿಶೀಲಿಸುವಂತೆ ತಿಳಿಸಿರುವ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ನಿಗದಿಪಡಿಸಿದೆ.










