ಮಕ್ಕಳ ಸಮಗ್ರ ಬೆಳವಣಿಗೆ ಹಾಗೂ ಎತ್ತರ ಹೆಚ್ಚಳದಲ್ಲಿ ದೈಹಿಕ ವ್ಯಾಯಾಮ ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತವಾಗಿ ಯೋಗಾಸನಗಳನ್ನು ಮಾಡಿಸುವುದರಿಂದ ಮೂಳೆಗಳ ಬೆಳವಣಿಗೆ ಉತ್ತಮಗೊಂಡು, ದೇಹದ ಭಂಗಿ (ಪೋಸ್ಚರ್) ಸರಿಯಾಗುತ್ತದೆ. ಮಕ್ಕಳ ಎತ್ತರ ಹೆಚ್ಚಿಸಲು ನೆರವಾಗುವ ಪ್ರಮುಖ ಐದು ಯೋಗಾಸನಗಳ ವಿವರ ಇಲ್ಲಿದೆ.
ತಾಡಾಸನ ಮತ್ತು ತಾಡಾಸನ ನಡಿಗೆ:

ಮಕ್ಕಳ ಎತ್ತರ ಹೆಚ್ಚಿಸಲು ತಾಡಾಸನ ಅತ್ಯಂತ ಪರಿಣಾಮಕಾರಿ. ನೇರವಾಗಿ ನಿಂತು, ಎರಡೂ ಕೈಗಳ ಬೆರಳುಗಳನ್ನು ಪರಸ್ಪರ ಬೆಸೆದು ಕೈಗಳನ್ನು ಮೇಲಕ್ಕೆ ಚಾಚಬೇಕು. ದೀರ್ಘವಾಗಿ ಉಸಿರಾಡುತ್ತಾ ಹಿಮ್ಮಡಿಗಳನ್ನು ಮೇಲಕ್ಕೆತ್ತಿ ದೇಹವನ್ನು ಸಂಪೂರ್ಣವಾಗಿ ಎಳೆಯಬೇಕು (ಸ್ಟ್ರೆಚ್). ಇದೇ ಭಂಗಿಯಲ್ಲಿ ಕಾಲ್ಬೆರಳುಗಳ ಮೇಲೆ ನಿಧಾನವಾಗಿ ನಡೆಯುವುದರಿಂದ ಇಡೀ ದೇಹಕ್ಕೆ ಉತ್ತಮ ವಿಸ್ತರಣೆ ಸಿಗುತ್ತದೆ.
ವೃಕ್ಷಾಸನ:
ಈ ಆಸನವು ದೇಹದ ಸಮತೋಲನ ಮತ್ತು ಭಂಗಿಯನ್ನು ಸುಧಾರಿಸುತ್ತದೆ. ನೇರವಾಗಿ ನಿಂತು ಕೈಗಳನ್ನು ಜೋಡಿಸಿ ನಮಸ್ಕಾರ ಮುದ್ರೆಯಲ್ಲಿ ಹಿಡಿಯಬೇಕು. ನಂತರ ಒಂದು ಕಾಲನ್ನು ಮಡಚಿ, ಪಾದವನ್ನು ಇನ್ನೊಂದು ಕಾಲಿನ ತೊಡೆಯ ಒಳಭಾಗಕ್ಕೆ ತಾಗಿಸಿ ಸಮತೋಲನ ಕಾಯ್ದುಕೊಳ್ಳಬೇಕು. ಇದು ಬೆಳವಣಿಗೆಗೆ ಕಾರಣವಾಗುವ ಪಿಟ್ಯುಟರಿ ಗ್ರಂಥಿಯನ್ನು ಸಕ್ರಿಯಗೊಳಿಸಲು ನೆರವಾಗುತ್ತದೆ.
ಭುಜಂಗಾಸನ:

ಹೊಟ್ಟೆಯ ಮೇಲೆ ಮಲಗಿ, ಕೈಗಳ ಆಸರೆಯಿಂದ ಎದೆಯ ಭಾಗ ಹಾಗೂ ತಲೆಯನ್ನು ಮೇಲಕ್ಕೆತ್ತುವ ಈ ಆಸನವು ಬೆನ್ನುಹುರಿ ಮತ್ತು ದೇಹದ ಮೇಲ್ಭಾಗವನ್ನು ಚಾಚುತ್ತದೆ. ಜೊತೆಗೆ ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ, ಸೇವಿಸಿದ ಆಹಾರದ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಒದಗುವಂತೆ ನೋಡಿಕೊಳ್ಳುತ್ತದೆ.
ಪಶ್ಚಿಮೋತ್ತಾನಾಸನ:
ಕಾಲುಗಳನ್ನು ಮುಂದಕ್ಕೆ ಚಾಚಿ ನೇರವಾಗಿ ಕುಳಿತುಕೊಳ್ಳಬೇಕು. ನಂತರ ಮುಂದಕ್ಕೆ ಬಾಗಿ, ಕೈಗಳಿಂದ ಕಾಲ್ಬೆರಳುಗಳನ್ನು ಹಿಡಿದುಕೊಂಡು ಹಣೆ ಅಥವಾ ಗಲ್ಲವನ್ನು ಮೊಣಕಾಲಿಗೆ ತಾಗಿಸಲು ಪ್ರಯತ್ನಿಸಬೇಕು. ಇದು ಬೆನ್ನುಮೂಳೆ ಮತ್ತು ಕಾಲುಗಳ ಸ್ನಾಯುಗಳನ್ನು ಎಳೆಯುವ ಮೂಲಕ ಎತ್ತರ ಬೆಳೆಯಲು ನೆರವಾಗುತ್ತದೆ.

ಹಸ್ತಪಾದಾಸನ:
ಎರಡೂ ಕಾಲುಗಳನ್ನು ಹತ್ತಿರವಿಟ್ಟು ನೇರವಾಗಿ ನಿಲ್ಲಬೇಕು. ಉಸಿರನ್ನು ಬಿಡುತ್ತಾ ಸೊಂಟದ ಭಾಗದಿಂದ ಮುಂದಕ್ಕೆ ಬಾಗಬೇಕು. ಬೆನ್ನನ್ನು ಬಗ್ಗಿಸದೆ ನೇರವಾಗಿಟ್ಟುಕೊಂಡು, ಹಣೆಯನ್ನು ಮೊಣಕಾಲುಗಳಿಗೆ ತಾಗಿಸಲು ಯತ್ನಿಸಬೇಕು. ಈ ಭಂಗಿಯು ದೇಹದ ನಮ್ಯತೆಯನ್ನು ಹೆಚ್ಚಿಸಿ, ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ.










