Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

30 ವರ್ಷಗಳ ನಿರಂತರ ಹೋರಾಟದ ಫಲದಿಂದ ಚಿತ್ರದುರ್ಗಕ್ಕೆ ನಾಳೆ ಭದ್ರೆ ಆಗಮನ : ಜಿಲ್ಲಾ ನೀರಾವರಿ ಹೋರಾಟ ಸಮಿತಿಯಿಂದ ಸಂಭ್ರಮಾಚರಣೆ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆ. 06: ಬಹು ದಶಕಗಳ ಕನಸು, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನಿರಂತರ ನಡೆಸಿದ ಹೋರಾಟದ ಫಲ ಭದ್ರೆ ಯೋಜನೆ ಜಾರಿಗೊಂಡಿದ್ದು, ಅಧಿಕೃತವಾಗಿ ಸೆ.6ರಂದು ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿಸುವ ಕಾರ್ಯ ಆರಂಭವಾಗಲಿದೆ.

ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಸಂಜೆ ಪ್ರವಾಸಿ ಮಂದಿರ ಆವರಣದಲ್ಲಿ ಸಂಭ್ರಮೋತ್ಸವ ಆಚರಿಸಲಾಯಿತು.
ನೆರೆದಿದ್ದವರೆಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಬರಡು ನೆಲಕ್ಕೆ ನೀರುಣಿಸಬೇಕೆಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ 30 ವರ್ಷ ನಡೆಸಿದ
ಹೋರಾಟದ ಫಲ ಜಿಲ್ಲೆಗೆ ಭದ್ರೆ ನೀರು ಹರಿಯುತ್ತಿದೆ. ಸುಸಂದರ್ಭವನ್ನು ಸ್ಮರಣೀಯಗೊಳಿಸಲು ತುರ್ತಾಗಿ ಸಂಭ್ರಮೋತ್ಸವ ಆಯೋಜಿಸಿರುವುದು ಸಮಯೋಜಿತ ಎಂದರು.

ಪ್ರತಿ ಜೀವಸಂಕುಲಕ್ಕೆ ನೀರು ಅಗತ್ಯ. ಆದರೆ, ನೂರಾರು ವರ್ಷಗಳ ಕಾಲ ಬರಗಾಲಕ್ಕೆ ಸಿಲುಕಿ ಬಳಲಿದ ಜಿಲ್ಲೆಯ ಜನರಿಗೆ ಭದ್ರೆ ನೀರೊಂದೇ ಆಶ್ರಯವಾಗಿತ್ತು. ಅದನ್ನು
ಪಡೆದುಕೊಳ್ಳುವಲ್ಲಿ ಅನೇಕರ ಶ್ರಮ, ಹೋರಾಟ, ಛಲ ಇದೆ. ಪಿ.ಕೋದಂಡರಾಮಯ್ಯ, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಸೋಮಗುದ್ದು ರಂಗಸ್ವಾಮಿ ಹೀಗೆ ಸಹಸ್ರಾರು ಜನರು ಹೋರಾಟದ ಹಾದಿ ಸವಿಸಿದ್ದಾರೆ ಎಂದು ಸ್ಮರಿಸಿದರು.

ಹೋರಾಟ ಸಮಿತಿ ಹುಟ್ಟಿ ಚಲನೆ ಪಡೆದುಕೊಂಡಾಗ ನೋಡಿ ನಕ್ಕುವರೇ ಹೆಚ್ಚು. ಭದ್ರಾ ಮೇಲ್ದಂಡೆ ಯೋಜನೆಯೆಂಬುದು ಗಗನಕುಸುಮ. ಇದು ಸಾಧ್ಯವಿಲ್ಲದ ಯೋಜನೆಯೆಂದೇ
ಅಭಿಪ್ರಾಯಪಟ್ಟರು. ಆದರೂ ಭ್ರಮನಿರಸನಗೊಳ್ಳದೆ ಹೋರಾಟ ಮುಂದುವರಿಸಿ, ಯೋಜನೆ ಜಾರಿಗೆ ಶ್ರಮಿಸಿದ ಚಳವಳಿಗಾರರ ನಡೆ ಮಾದರಿ ಆಗಿದೆ ಎಂದರು.

ಸಂಚಾಲಕ ಚಳ್ಳಕೆರೆ ಬಸವರಾಜ್ ಮಾತನಾಡಿ, ಬಂಜಗೆರೆ ಜಯಪ್ರಕಾಶ್ ಸೇರಿ ಅನೇಕರು ಮೊದಲ ಬಾರಿಗೆ ಅಧ್ಯಯನ ಕೈಗೊಂಡು, ಯೋಜನೆ ಸಾಧಕ-ಬಾಧಕ ಮನದಟ್ಟು ಮಾಡಿಕೊಂಡ ಬಳಿಕವೇ ಹೋರಾಟಕ್ಕೆ ಧುಮುಕಿದ್ದು ಎಂದು ತಿಳಿಸಿದರು. ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಬಯಲುಸೀಮೆಗೆ ನೀರುಣಿಸುವ ಹೋರಾಟದಲ್ಲಿ ಜಿಲ್ಲೆಯ
ಜನರಿಗೆ ಗೆಲುವು ಸಿಕ್ಕಿದೆ. ಶಾಂತಿಯುತ ಮಾರ್ಗದಲ್ಲಿ ನಡೆದ ಹೋರಾಟ ಇಡೀ ನಾಡಿಗೆ ಮಾದರಿ ಎಂದು ಬಣ್ಣಿಸಿದರು.
ದಸಂಸ ಮುಖಂಡ ಕೆ.ರಾಜು ಮಾತನಾಡಿ, ಆರಂಭದಿಂದಲೂ ಚಳವಳಿಗಾಗಿ ಬದುಕು ಮೀಸಲಿಟ್ಟವರ ಸ್ಮರಣೆ ಮಾಡಬೇಕು. ಚಳವಳಿ ಗೆದ್ದಾಗ ಅದರ ಲಾಭ ಪಡೆಯಲು ಸಾವಿರಾರು ಮಂದಿ ಕಳ್ಳದಾರಿಯಲ್ಲಿ ಬರುತ್ತಾರೆ. ಅದಕ್ಕೆ ಅವಕಾಶ ಕೊಡದೆ ನೈಜ ಹೋರಾಟಗಾರರನ್ನು ಸ್ಮರಿಸಬೇಕೆಂದು ತಿಳಿಸಿದರು.

ರೈತಸಂಘದ ಮುಖಂಡ ಬಸ್ತಿಹಳ್ಳಿ ಸುರೇಶಬಾಬು ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಜಾರಿ
ವಿಷಯದಲ್ಲಿ ಜಿಲ್ಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಹೋರಾಟ ಸಮಿತಿ ನಡೆಸಿದ ಚಳವಳಿ ಐತಿಹಾಸಿಕವಾಗಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋರಾಟದ ರಥವನ್ನೇಳೆದು ಯಶಸ್ಸು
ಪಡೆದಿರುವುದು ಸಂತಸವಾಗಿದೆ ಎಂದರು.

ವಕೀಲ ಸಿ.ಶಿವುಯಾದವ್ ಮಾತನಾಡಿ, ಹೋರಾಟದ ನೇತೃತ್ವವನ್ನು ವಹಿಸಿಕೊಂಡ ಮುನ್ನಡೆಸಿದ ಪತ್ರಕರ್ತರ ಜಾಣ್ಮೆ ವಿಸ್ಮಯ. ಭದ್ರಾ ಯೋಜನೆ ಸಾಧ್ಯವೇ ಇಲ್ಲವೆಂಬ ಅಭಿಪ್ರಾಯ
ಗಟ್ಟಿಯಾಗಿ ಬೇರೂರಿದ್ದ ವೇಳೆ ಹೋರಾಟ ಕೈಗೆತ್ತಿಕೊಂಡು ಜಾರಿಯವರೆಗೂ ವಿರಮಿಸದಿರುವುದು ಪ್ರಮುಖ ಕಾರಣ ಎಂದು ತಿಳಿಸಿದರು. ಸಂಚಾಲಕ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ, ಯೋಜನೆ ಜಾರಿ ಹೋರಾಟದಲ್ಲಿ ಜಿಲ್ಲೆಯ ಎಲ್ಲ ಮಠಾಧೀಶರು, ರಾಜಕಾರಣಿಗಳು, ನೂರಾರು ಸಂಘಟನೆಗಳ ಪದಾಧಿಕಾರಿಗಳು, ಎಲ್ಲ ಪಕ್ಷಗಳ ಸದಸ್ಯರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅದರ ಫಲವೇ ಯೋಜನೆ ಜಾರಿಗೊಂಡಿದೆ ಎಂದರು.

ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು, ಮುಖಂಡರಾದ ಜಿ.ಯು.ನಾಗರಾಜ್ ಗೌನಹಳ್ಳಿ,
ಎಂ.ಜೆ.ಪ್ರಸನ್ನ, ವೀಣಾ ಗೌರಮ್ಮ, ಕುಂಚಿಗನಾಳ್ ಮಹಾಲಿಂಗಪ್ಪ, ಅನಂತ್, ತಿಮ್ಮಪ್ಪನಹಳ್ಳಿ ಮಂಜುನಾಥ್, ಲಕ್ಷ್ಮೀ ಕಾಂತ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್,
ಏಕಾಂತಪ್ಪ, ಕೆಪಿಎಂ ಗಣೇಶಯ್ಯ, ಶ್ರೀನಿವಾಸ ನಾಯ್ಕ್, ಮಹಾಂತೇಶ್, ಪ್ರದೀಪ್‌ಕುಮಾರ್,
ಪ್ರಹ್ಲಾದ್, ಗೌನಹಳ್ಳಿ ಗೋವಿಂದಪ್ಪ, ಪುರುಷೋತ್ತಮ ತೋರಣಕಟ್ಟೆ ಇತರರಿದ್ದರು.

ಸರ್ವರ ಪ್ರಯತ್ನದ ಫಲ :
ಶ್ರೀ ಮುರುಘಾ ಶರಣರು, ಶ್ರೀ ಪಂಡಿತಾರಾಧ್ಯ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಭೋವಿ, ಲಂಬಾಣಿ, ಮಾದಾರ ಚನ್ನಯ್ಯ, ಆದಿಜಾಂಬವ, ಕಬೀರಾನಂದಾ ಸೇರಿ ಜಿಲ್ಲೆಯ ಅನೇಕ ಮಠಗಳ ಮಠಾಧೀಶರು ಹಾಗೂ ಜಿಲ್ಲೆಯ ಹಾಲಿ-ಮಾಜಿ ಜನಪ್ರತಿನಿಧಿಗಳು, ನೂರಾರು ಸಂಘಟನೆಗಳು, ಎಲ್ಲ ಪಕ್ಷಗಳ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ
ನೇತೃತ್ವದಲ್ಲಿ ನಡೆದ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದರಿಂದ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದೆ ಎಂದು ಸಮಿತಿ ಮುಖಂಡರು ಅಭಿಪ್ರಾಯಪಟ್ಟರು. ಎಲ್ಲರನ್ನೊಳಗೊಂಡು ಬೃಹತ್ ಮಟ್ಟದಲ್ಲಿ ಸಂಭ್ರಮೋತ್ಸವ ಶೀಘ್ರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now