ಚಿತ್ರದುರ್ಗ. ಸೆ.05: ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಆಶಯದ ‘ಪ್ರಜಾಸೇವಾ ಆಂದೋಲನಕ್ಕೆ ಹಿರಿಯೂರು ನಗರದ ನೆಹರು ಮೈದಾನದಲ್ಲಿ ಶನಿವಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಟಿ.ರಘುಮೂರ್ತಿ, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಜನಸಾಮಾನ್ಯರಿಗೆ ಸರ್ಕಾರಿ ಇಲಾಖೆಗಳ ಸೇವೆ ತಲುಪಿಸಲು ಈ ಯೋಜನೆ ರೂಪಿಸಲಾಗಿದೆ. ಹಲವು ಬಾರಿ ಜನಸಾಮಾನ್ಯರ ಸಮಸ್ಯೆಗಳು ವಿವಿಧ ಹಂತದಲ್ಲಿ ಸರಿಯಾಗಿ ಬಗೆಹರಿಯುವುದಿಲ್ಲ. ಹಾಗಾಗಿ ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದೆ ಎಂದರು.

ಪ್ರತಿ ತಿಂಗಳ ಮೊದಲನೇ ಹಾಗೂ ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಈ ಪ್ರಜಾಸೇವಾ ಸಭೆಗಳು ನಡೆಯಲಿವೆ. ಸಾರ್ವಜನಿಕರು ತರುವ ಅರ್ಜಿಗಳನ್ನು ನೋಂದಾಯಿಸಿಕೊಂಡು, ಚರ್ಚಿಸಿ ಸ್ಥಳದಲ್ಲೇ ಶಮನಗೊಳಿಸಬಹುದಾದ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಲಾಗುತ್ತದೆ. ಇನ್ನುಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿ ಪರಿಹಾರ ಒದಗಿಸಲಾಗುವುದು ಎಂದರು.
ಪ್ರಜಾಸೇವಾ ಆಂದೋಲನ ನೆಪಮಾತ್ರದ ಸಭೆಯಲ್ಲ. ಈಗಾಗಲೇ ಸ್ಥಳದಲ್ಲಿ ವಿವಿಧ ಇಲಾಖೆಗಳ 13 ಮಳಿಗೆಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡುವುದರ ಜೊತೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಈಗಾಗಲೇ ಬಂದಿರುವ 50ಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ನಿಯಮಾವಳಿಗಳ ಪ್ರಕಾರವೇ ಬರಪೀಡಿತ ತಾಲೂಕು ಘೋಷಣೆ: ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಅನುಗುಣವಾಗಿಯೇ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಉಳಿದ ತಾಲೂಕುಗಳನ್ನೂ ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಮತ್ತು ಹೊಸದುರ್ಗ ತಾಲೂಕುಗಳು ಸೇರಿವೆ. ಉಳಿದ ತಾಲೂಕುಗಳು ತಕ್ಷಣವೇ ಪಟ್ಟಿಗೆ ಸೇರ್ಪಡೆಯಾಗದಿರಲು ಕೇಂದ್ರ ಸರ್ಕಾರ 2020ರಲ್ಲಿ ರೂಪಿಸಿರುವ ಮಾರ್ಗದರ್ಶಿ ನಿಯಮಾವಳಿಗಳೇ ಕಾರಣ ಹೊರತು ರಾಜಕೀಯವಲ್ಲ ಎಂದು ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಮೊಳಕಾಲ್ಮುರು, ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಲಿವೆ ಎಂದು ಭರವಸೆ ನೀಡಿದರು.
ಸೆ.06 ರಿಂದ ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿವು: ರೂ.21,400 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯಡಿ 4 ಜಿಲ್ಲೆಗಳ 12 ತಾಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಚಿತ್ರದುರ್ಗ ಶಾಖಾ ಕಾಲುವೆಯ 134 ಕಿ.ಮೀ. ಪೈಕಿ 114 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಚಿತ್ರದುರ್ಗ ಸಮೀಪದ ಗೋನೂರು ಕೆರೆಗೆ ನೀರು ಹರಿಸಲು ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು 3 ಟಿ.ಎಂ.ಸಿ. ನೀರನ್ನು ಮಂಜೂರು ಮಾಡಿದ್ದಾರೆ. ಭದ್ರಾ ಜಲಾಶಯದಿಂದ ಸೆ.06ರಂದು ಬೆಳಿಗ್ಗೆ 8 ಗಂಟೆಗೆ ನೀರು ಹರಿಸುವ ಕಾರ್ಯ ಆರಂಭವಾಗಲಿದ್ದು, ಸುಮಾರು ಒಂದು ವಾರದಲ್ಲಿ ಗೋನೂರು ಕೆರೆಗೆ ನೀರು ತಲುಪಲಿದೆ. ನೀರು ಬಂದ ನಂತರ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು.
ಚಿಕ್ಕಮಗಳೂರಿನ 2 ತಾಲೂಕು, ಚಿತ್ರದುರ್ಗ ಜಿಲ್ಲೆಯ 6 ತಾಲೂಕು ಹಾಗೂ ದಾವಣಗೆರೆ ಜಿಲ್ಲೆಯ 1 ತಾಲೂಕಿಗೆ ಸಂಬಂಧಿಸಿದಂತೆ ಸುಮಾರು 114 ಕಿಲೋಮೀಟರ್ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಭಾಗಶಃ ಈಡೇರುತ್ತಿದೆ ಎಂದರು.
‘ಪ್ರಜಾಸೇವಾ ಆಂದೋಲನ’ವು ಸಾರ್ವಜನಿಕರ ಪ್ರತಿಯೊಂದು ಸಮಸ್ಯೆಗೂ ಸೂಕ್ತ ಪರಿಹಾರ ಕಂಡುಕೊಳ್ಳುವ ವೇದಿಕೆಯಾಗಿದೆ. ಆಂದೋಲನವು ಅತ್ಯಂತ ಶಾಂತಿಯುತ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಡೆಯಲಿದ್ದು, ಸಾರ್ವಜನಿಕರ ಪ್ರತಿಯೊಂದು ಕುಂದುಕೊರತೆಯನ್ನು ಆಲಿಸಲಾಗುವುದು. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ತಾಲೂಕು ಮಟ್ಟದ ಸಭೆಗಳ ನಂತರ ಹೋಬಳಿ ಮಟ್ಟದಲ್ಲೂ ಜನಸ್ಪಂದನ ಸಭೆಗಳನ್ನು ಆಯೋಜಿಸಲಾಗುವುದು. ಹಿಂದಿನ ಸಭೆಗಳಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಮುಂದಿನ ಸಭೆಗಳಲ್ಲಿ ಪರಾಮರ್ಶಿಸಿ ಪರಿಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, ಸಾರ್ವಜನಿಕರ ಕುಂದುಕೊರತೆ ಹಾಗೂ ಸಮಸ್ಯೆಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಸಾರ್ವಜನಿಕರು ತರುವ ಎಲ್ಲಾ ರೀತಿಯ ಕುಂದುಕೊರತೆ ಅರ್ಜಿಗಳು ಹಾಗೂ ಮನವಿಗಳನ್ನು ಸ್ಥಳದಲ್ಲೇ ಕೌಂಟರ್‍ಗಳಲ್ಲಿ ಸ್ವೀಕರಿಸಲಾಗುತ್ತದೆ. ಈ ಅರ್ಜಿಗಳನ್ನು ಸರ್ಕಾರದ ಐಪಿಜಿಆರ್‍ಎಸ್ ಜಾಲತಾಣದಲ್ಲಿ ದಾಖಲಿಸಿ, ಅರ್ಜಿದಾರರಿಗೆ ತಕ್ಷಣವೇ ರಸೀದಿ ಅಥವಾ ಸ್ವೀಕೃತಿ ನೀಡಲಾಗುವುದು. ಸಾಧ್ಯವಾದಷ್ಟು ಅರ್ಜಿಗಳಿಗೆ ಸ್ಥಳದಲ್ಲೇ ವಿಲೇವಾರಿ ಮಾಡಿ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಪ್ರಜಾಸೇವಾ ಆಂದೋಲನದಲ್ಲಿ ಅರ್ಜಿಗಳ ಮಹಾಪೂರ: ‘ಪ್ರಜಾಸೇವಾ ಆಂದೋಲನ’ ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿಗಳ ಮಹಾಪೂರವೇ ಹರಿದುಬಂದಿತು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 110 ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲಾ 110 ಅರ್ಜಿಗಳು ಬಾಕಿ ಉಳಿದಿವೆ. ಇನ್ನು ತಾಲ್ಲೂಕು ಪಂಚಾಯಿತಿಯಲ್ಲಿ ಸಲ್ಲಿಕೆಯಾದ 65 ಅರ್ಜಿಗಳಲ್ಲಿ 10 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, 55 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ನಗರಸಭೆಗೆ ಬಂದ 18 ಅರ್ಜಿಗಳಲ್ಲಿ 2 ಬಗೆಹರಿದಿದ್ದು, 16 ದೂರುಗಳು ಬಾಕಿ ಉಳಿದಿವೆ. ಪಶುಸಂಗೋಪನೆ ಇಲಾಖೆಗೆ ಬಂದ ಎಲ್ಲಾ 4 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಲ್ಲಿಕೆಯಾದ 18 ಅರ್ಜಿಗಳಲ್ಲಿ 14 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, 4 ಅರ್ಜಿಗಳು ಮಾತ್ರ ಬಾಕಿ ಇವೆ. ಉಳಿದಂತೆ ಕೃಷಿ ಇಲಾಖೆಗೆ ಬಂದ 8 ಹಾಗೂ ತೋಟಗಾರಿಕೆ ಇಲಾಖೆಗೆ ಬಂದ 5 ಅರ್ಜಿಗಳ ಪೈಕಿ ಒಂದೂ ವಿಲೇವಾರಿಯಾಗಿಲ್ಲ. ಸಮಾಜ ಕಲ್ಯಾಣ ಇಲಾಖೆಯ 4, ಸರ್ವೆ ಇಲಾಖೆಯ 4, ಶಿಕ್ಷಣ ಇಲಾಖೆಯ 3, ಬೆಸ್ಕಾಂನ 2 ಮತ್ತು ಆಹಾರ ಇಲಾಖೆಯ 2 ಅರ್ಜಿಗಳು ಪರಿಶೀಲನೆಯ ಹಂತದಲ್ಲೇ ಬಾಕಿ ಉಳಿದಿವೆ. ಇನ್ನೂ ಇತರೆ ಇಲಾಖೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಸಲ್ಲಿಕೆಯಾದವು.
ಇದೇ ಸಂದರ್ಭದಲ್ಲಿ ಸಚಿವ ಟಿ.ರಘುಮೂರ್ತಿ ಅವರು, ಹಿರಿಯೂರು ನಗರಸಭಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಬಾಲಕರು, ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಕಂಪ್ಯೂಟರ್ ಟೇಬಲ್ ವಿತರಣೆ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಾಲಕಿಯರು ಹಾಗೂ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಹಾಸಿಗೆ, ಬೆಡ್, ದಿಂಬು ವಿತರಣೆ, ಪೌರಕಾರ್ಮಿಕರು, ಲೋಡರ್ಸ್, ವಾಹನ ಚಾಲಕರಿಗೆ ಸುರಕ್ಷಾ ಧಿರಿಸು ವಿತರಣೆ ಸೇರಿದಂತೆ ವಿವಿದ ಸೌಲಭ್ಯಗಳ ವಿತರಣೆ ಹಾಗೂ 2026-27ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆಯ ಪ್ರಚಾರ ಕಾರ್ಯಕ್ರಮದ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ವಿಧಾನ ಪರಿಷತ್ ಶಾಸಕ ಡಿ.ಟಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಸ್.ರಮ್ಯ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ತಹಶೀಲ್ದಾರ್ ಸಿದ್ದೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.












