ಮಳೆಗಾಲ ಆರಂಭವಾಯಿತೆಂದರೆ ಸಾಕು, ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಬಾಗಿಲು, ಕಿಟಕಿಗಳನ್ನು ತೆರೆದ ತಕ್ಷಣ ಸೊಳ್ಳೆಗಳು ಮನೆ ಹೊಕ್ಕು ಕಿರಿಕಿರಿ ಉಂಟುಮಾಡುತ್ತವೆ. ಸೊಳ್ಳೆ ಕಡಿತದಿಂದ ಕಡಿತ, ಚರ್ಮದ ದದ್ದುಗಳು ಬರುವುದಲ್ಲದೆ ಡೆಂಗ್ಯೂ, ಮಲೇರಿಯಾ, ಚಿಕೂನ್ಗುನ್ಯಾದಂತಹ ಅಪಾಯಕಾರಿ ಕಾಯಿಲೆಗಳು ಹರಡುವ ಆತಂಕವೂ ಇರುತ್ತದೆ. ಹೀಗಾಗಿ ಹೆಚ್ಚಿನವರು ಕಾಯಿಲ್ಗಳು, ಲಿಕ್ವಿಡ್ ರಿಪೆಲ್ಲೆಂಟ್ಗಳು ಅಥವಾ ಸ್ಪ್ರೇಗಳನ್ನು ಬಳಸುತ್ತಾರೆ. ಆದರೆ ರಾಸಾಯನಿಕಗಳ ಮೇಲೆಯೇ ಸಂಪೂರ್ಣ ಅವಲಂಬಿತರಾಗದೆ, ಮನೆಯಲ್ಲೇ ಸಿಗುವ ಕೆಲ ನೈಸರ್ಗಿಕ ವಿಧಾನಗಳ ಮೂಲಕವೂ ಸೊಳ್ಳೆಗಳನ್ನು ನಿಯಂತ್ರಿಸಬಹುದು.
ಬೇವಿನ ಎಣ್ಣೆ: ಬೇವಿನ ಎಣ್ಣೆಯಲ್ಲಿ ನೈಸರ್ಗಿಕ ಕೀಟನಾಶಕ ಗುಣಗಳಿವೆ. ಬೇವಿನ ಎಣ್ಣೆಯನ್ನು ಬಳಸುವುದರಿಂದ ಸೊಳ್ಳೆಗಳನ್ನು ದೂರವಿಡಬಹುದು. ಆದರೆ, ಬೇವಿನ ಎಣ್ಣೆಯನ್ನು ನೇರವಾಗಿ ಸುಡುವುದು ಅಥವಾ ಅದರ ಹೊಗೆಯನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ವಿಶೇಷವಾಗಿ ಮಕ್ಕಳು, ವೃದ್ಧರು ಅಥವಾ ಉಸಿರಾಟದ ತೊಂದರೆ ಇರುವವರು ಈ ಬಗ್ಗೆ ಜಾಗ್ರತೆ ವಹಿಸಬೇಕು.

ನಿಂಬೆಹಣ್ಣು ಮತ್ತು ಲವಂಗ: ನಿಂಬೆಹಣ್ಣನ್ನು ಅರ್ಧ ಭಾಗ ಕತ್ತರಿಸಿ, ಅದರಲ್ಲಿ ಕೆಲವು ಲವಂಗಗಳನ್ನು ಚುಚ್ಚಿ ಕೋಣೆಯಲ್ಲಿ ಇಡುವ ಪದ್ಧತಿ ಹಲವರ ಮನೆಗಳಲ್ಲಿದೆ. ಈ ನೈಸರ್ಗಿಕ ಸುವಾಸನೆಯಿಂದ ಸೊಳ್ಳೆಗಳು ದೂರ ಉಳಿಯುತ್ತವೆ ಎಂದು ನಂಬಲಾಗಿದೆ. ಆದರೆ ಇದು ಸಂಪೂರ್ಣ ಶಾಶ್ವತ ಪರಿಹಾರವಲ್ಲ ಎಂಬುದನ್ನೂ ನೆನಪಿನಲ್ಲಿಡಬೇಕು.
ಪುದೀನಾ ಅಥವಾ ನೀಲಗಿರಿ (ಯೂಕಲಿಪ್ಟಸ್) ಎಣ್ಣೆ: ಪುದೀನಾ ಹಾಗೂ ನೀಲಗಿರಿ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಕಿಟಕಿ ಮತ್ತು ಬಾಗಿಲುಗಳ ಸುತ್ತ ಸ್ಪ್ರೇ ಮಾಡುವುದರಿಂದ ಸೊಳ್ಳೆಗಳ ಪ್ರವೇಶವನ್ನು ತಡೆಗಟ್ಟಬಹುದು. ಆದರೆ ಈ ಎಸೆನ್ಷಿಯಲ್ ಎಣ್ಣೆಗಳನ್ನು ನೇರವಾಗಿ ಚರ್ಮಕ್ಕೆ ಹಚ್ಚಬಾರದು.
ಬೆಳ್ಳುಳ್ಳಿ ನೀರು: ಬೆಳ್ಳುಳ್ಳಿಯ ತೀಕ್ಷ್ಣ ವಾಸನೆಗೆ ಕೀಟಗಳು ದೂರ ಓಡುತ್ತವೆ. ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ನೀರಿನಲ್ಲಿ ಕುದಿಸಿ, ಆ ನೀರು ತಣ್ಣಗಾದ ಮೇಲೆ ಮನೆಯ ಸುತ್ತಮುತ್ತ ಲಘುವಾಗಿ ಸಿಂಪಡಿಸಬಹುದು.
ಮನೆಯಂಗಳದಲ್ಲಿ ಔಷಧೀಯ ಗಿಡಗಳು: ಬಾಲ್ಕನಿ ಅಥವಾ ಕಿಟಕಿಗಳ ಬಳಿ ತುಳಸಿ, ಪುದೀನಾ, ಲೆಮನ್ಗ್ರಾಸ್ನಂತಹ ಗಿಡಗಳನ್ನು ಬೆಳೆಸುವುದರಿಂದ ಪರಿಸರ ಸುಂದರವಾಗುವುದರ ಜೊತೆಗೆ, ಅವುಗಳ ಸುವಾಸನೆ ಸೊಳ್ಳೆಗಳನ್ನು ದೂರವಿಡಲು ಸಹಕರಿಸುತ್ತದೆ.
ಲ್ಯಾವೆಂಡರ್ ಎಣ್ಣೆ: ಲ್ಯಾವೆಂಡರ್ ಸುವಾಸನೆ ನಮಗೆ ಹಿತವೆನಿಸಿದರೂ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ಲ್ಯಾವೆಂಡರ್ ಆಧಾರಿತ ರಿಪೆಲ್ಲೆಂಟ್ಗಳು ಸೊಳ್ಳೆಗಳನ್ನು ಓಡಿಸಲು ನೆರವಾಗುತ್ತವೆ. ಇದನ್ನು ಚರ್ಮದ ಮೇಲೆ ಬಳಸುವ ಮುನ್ನ ತೆಳುವಾಗಿಸುವುದು (ಡೈಲ್ಯೂಟ್ ಮಾಡುವುದು) ಮುಖ್ಯ.
ಸೊಳ್ಳೆ ನಿಯಂತ್ರಣದಲ್ಲಿ ಇದು ಅತಿ ಮುಖ್ಯ:
ಕೇವಲ ನೈಸರ್ಗಿಕ ಪರಿಹಾರಗಳನ್ನು ನಂಬುವುದಷ್ಟೇ ಅಲ್ಲದೆ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯ. ಏರ್ ಕೂಲರ್ಗಳು, ಹೂವಿನ ಕುಂಡಗಳು, ಹಳೆಯ ಟೈರ್ಗಳು ಹಾಗೂ ತೆಂಗಿನ ಚಿಪ್ಪುಗಳಲ್ಲಿ ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ನಿಂತ ನೀರನ್ನು ತಕ್ಷಣ ತೆರವುಗೊಳಿಸುವುದು, ಕಿಟಕಿಗಳಿಗೆ ಜಾಲರಿಗಳನ್ನು (ಮೆಶ್) ಅಳವಡಿಸುವುದು ಹಾಗೂ ಅಗತ್ಯವಿದ್ದಾಗ ಸೂಕ್ತ ಸೊಳ್ಳೆ ನಿವಾರಕಗಳನ್ನು ಬಳಸುವುದರಿಂದ ಸೊಳ್ಳೆಗಳ ಕಾಟಕ್ಕೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಬಹುದು.












