ನ್ಯೂಯಾರ್ಕ್: ಶತಮಾನಗಳಿಂದ ಬಳಕೆಯಲ್ಲಿರುವ ಮರ್ಕೇಟರ್ ವಿಶ್ವ ನಕ್ಷೆ (Mercator Projection) ಬದಲಿಗೆ ಭೂಭಾಗಗಳ ನಿಜವಾದ ಗಾತ್ರವನ್ನು ಹೆಚ್ಚು ನಿಖರವಾಗಿ ತೋರಿಸುವ ‘ಈಕ್ವಲ್ ಅರ್ಥ್’ (Equal Earth) ನಕ್ಷೆ ವಿನ್ಯಾಸವನ್ನು ಅಳವಡಿಸಿಕೊಳ್ಳಲು ವಿಶ್ವಸಂಸ್ಥೆ ಬೆಂಬಲ ವ್ಯಕ್ತಪಡಿಸಿದೆ.
ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, 164 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ಅಮೆರಿಕ ಮಾತ್ರ ವಿರೋಧವಾಗಿ ಮತ ಹಾಕಿದ್ದು, ಆರು ದೇಶಗಳು ಮತದಾನದಿಂದ ದೂರ ಉಳಿದಿವೆ. ಅಮೆರಿಕದ ಪ್ರತಿನಿಧಿ ಈ ನಿರ್ಣಯವನ್ನು ‘ಅಗತ್ಯವಿಲ್ಲದ ಕ್ರಮ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಸಂಸ್ಥೆಯ ನಿರ್ಣಯಗಳು ಕಾನೂನುಬದ್ಧವಾಗಿ ಕಡ್ಡಾಯವಲ್ಲ. ಹೀಗಾಗಿ ಯಾವುದೇ ದೇಶ ಅಥವಾ ಸಂಸ್ಥೆ ಮರ್ಕೇಟರ್ ನಕ್ಷೆಯನ್ನು ತಕ್ಷಣ ಕೈಬಿಟ್ಟು ಹೊಸ ನಕ್ಷೆಯನ್ನೇ ಬಳಸಬೇಕೆಂಬ ನಿಯಮ ಇಲ್ಲ. ಆದರೆ ಶಾಲೆಗಳು, ತಂತ್ರಜ್ಞಾನ, ಸರ್ಕಾರಿ ನಕ್ಷೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮರ್ಕೇಟರ್ ನಕ್ಷೆ ವ್ಯಾಪಕವಾಗಿ ಬಳಕೆಯಾಗುತ್ತಿರುವುದರಿಂದ ಈ ನಿರ್ಣಯದ ಪರಿಣಾಮ ಮುಂದಿನ ದಿನಗಳಲ್ಲಿ ಗೋಚರಿಸುವ ಸಾಧ್ಯತೆ ಇದೆ.
ಆಫ್ರಿಕಾದ ನಿಜವಾದ ಗಾತ್ರಕ್ಕೆ ಒತ್ತು
ಈ ಅಭಿಯಾನವನ್ನು ಆಫ್ರಿಕನ್ ಯೂನಿಯನ್ ಪರವಾಗಿ ಟೋಗೊ ಮುನ್ನಡೆಸಿತ್ತು. ಮರ್ಕೇಟರ್‌ನಂತಹ ನಕ್ಷೆಗಳು ಆಫ್ರಿಕಾ ಸೇರಿದಂತೆ ಹಲವು ಪ್ರದೇಶಗಳ ಗಾತ್ರದ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಿವೆ ಎಂದು ಟೋಗೊ ವಾದಿಸಿದೆ.
ಇಂತಹ ನಕ್ಷೆಗಳ ಪರಿಣಾಮ ಶಿಕ್ಷಣ, ಸಂಸ್ಕೃತಿ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳ ಮೇಲೂ ಆಗಿದೆ ಎಂದು ಟೋಗೊ ಹೇಳಿದೆ. ಟೋಗೊದ ವಿದೇಶಾಂಗ ಸಚಿವ ರಾಬರ್ಟ್ ಡಸ್ಸಿ ಅವರು ಇದು ಅಭಿಪ್ರಾಯದ ವಿಚಾರವಲ್ಲ, ವೈಜ್ಞಾನಿಕ ಸಾಕ್ಷ್ಯಾಧಾರಗಳ ಮೇಲೆ ಆಧಾರಿತ ವಿಷಯ ಎಂದು ಹೇಳಿದ್ದಾರೆ.
ಮರ್ಕೇಟರ್ ನಕ್ಷೆಯಲ್ಲಿ ಏಕೆ ಗಾತ್ರ ತಪ್ಪಾಗಿ ಕಾಣುತ್ತದೆ?
ಫ್ಲಾಂಡರ್ಸ್‌ನ ನಕ್ಷಾಶಾಸ್ತ್ರಜ್ಞ ಜೆರಾರ್ಡಸ್ ಮರ್ಕೇಟರ್ 1569ರಲ್ಲಿ ಸಮುದ್ರಯಾನಕ್ಕೆ ಅನುಕೂಲವಾಗುವಂತೆ ಈ ನಕ್ಷಾ ವಿನ್ಯಾಸವನ್ನು ಅಭಿವೃದ್ಧಿಪಡಿಸಿದ್ದರು. ನಂತರ ಸುಮಾರು 500 ವರ್ಷಗಳ ಕಾಲ ಇದು ವಿಶ್ವದ ಅತ್ಯಂತ ಪ್ರಚಲಿತ ನಕ್ಷೆಗಳಲ್ಲಿ ಒಂದಾಗಿ ಉಳಿದಿದೆ.
ಭೂಮಿಯ ಗೋಳಾಕಾರದ ಆಕಾರವನ್ನು ಸಮತಟ್ಟಾದ ಕಾಗದದ ಮೇಲೆ ತೋರಿಸುವ ಸಂದರ್ಭದಲ್ಲಿ ಭೂಭಾಗಗಳ ಗಾತ್ರದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಸಮಭಾಜಕ ರೇಖೆಯ ಸಮೀಪದ ಪ್ರದೇಶಗಳು ಚಿಕ್ಕದಾಗಿ ಕಾಣಿಸಿದರೆ, ಧ್ರುವ ಪ್ರದೇಶಗಳತ್ತ ಇರುವ ಭೂಭಾಗಗಳು ಹೆಚ್ಚು ದೊಡ್ಡದಾಗಿ ಕಾಣಿಸುತ್ತವೆ.
ಇದಕ್ಕೆ ಪ್ರಮುಖ ಉದಾಹರಣೆಯೆಂದರೆ ಆಫ್ರಿಕಾ ಮತ್ತು ಗ್ರೀನ್‌ಲ್ಯಾಂಡ್. ಮರ್ಕೇಟರ್ ನಕ್ಷೆಯಲ್ಲಿ ಇವೆರಡೂ ಬಹುತೇಕ ಒಂದೇ ಗಾತ್ರದಂತೆ ಕಾಣಿಸಬಹುದು. ಆದರೆ ವಾಸ್ತವದಲ್ಲಿ ಆಫ್ರಿಕಾ ಗ್ರೀನ್‌ಲ್ಯಾಂಡ್‌ಗಿಂತ ಸುಮಾರು 14 ಪಟ್ಟು ದೊಡ್ಡದಾಗಿದೆ.
‘Correct the Map’ ಅಭಿಯಾನ
ಮರ್ಕೇಟರ್ ನಕ್ಷೆಯಲ್ಲಿನ ಗಾತ್ರದ ವ್ಯತ್ಯಾಸವನ್ನು ಸರಿಪಡಿಸುವ ಉದ್ದೇಶದಿಂದ #CorrectTheMap ಅಭಿಯಾನವೂ ನಡೆದಿದ್ದು, ಇದಕ್ಕೆ ಸಂಬಂಧಿಸಿದ Change.org ಅರ್ಜಿಗೆ 11 ಸಾವಿರಕ್ಕೂ ಹೆಚ್ಚು ಸಹಿಗಳು ಬಂದಿವೆ.
ಈ ಅಭಿಯಾನದ ಪ್ರಕಾರ, ಅಮೆರಿಕ, ಚೀನಾ, ಭಾರತ, ಜಪಾನ್, ಮೆಕ್ಸಿಕೊ ಹಾಗೂ ಯುರೋಪಿನ ಬಹುಭಾಗವನ್ನು ಒಟ್ಟಾಗಿ ಆಫ್ರಿಕಾದ ನಿಜವಾದ ಭೂಪ್ರದೇಶದೊಳಗೆ ಸೇರಿಸಿದರೂ ಇನ್ನೂ ಸ್ಥಳ ಉಳಿಯುತ್ತದೆ.
ಆಫ್ರಿಕನ್ ಯೂನಿಯನ್ 2025ರ ಆಗಸ್ಟ್‌ನಲ್ಲಿ ಈ ಅಭಿಯಾನಕ್ಕೆ ಬೆಂಬಲ ನೀಡಿತ್ತು. ಬಳಿಕ ವಿಶ್ವಸಂಸ್ಥೆಯಲ್ಲಿ ಈ ವಿಚಾರವನ್ನು ಮುಂದಿಡುವ ಜವಾಬ್ದಾರಿಯನ್ನು ಟೋಗೊಗೆ ವಹಿಸಿತ್ತು.
ಮರ್ಕೇಟರ್ ಬದಲಿಗೆ ಹೊಸ ನಕ್ಷೆಗಳತ್ತ ಫ್ರಾನ್ಸ್
ವಿಶ್ವಸಂಸ್ಥೆಯ ಮತದಾನಕ್ಕೂ ಮುನ್ನ ಫ್ರಾನ್ಸ್ ಕೂಡ ಮರ್ಕೇಟರ್ ನಕ್ಷೆಯಿಂದ ದೂರ ಸರಿಯುವ ಸೂಚನೆ ನೀಡಿದೆ. ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್-ನೋಯೆಲ್ ಬರೋಟ್ ಅವರು ಪ್ಯಾರಿಸ್‌ನ ಸೊರ್ಬೋನ್‌ನಲ್ಲಿ ಮಾತನಾಡುವ ವೇಳೆ ಈ ಬದಲಾವಣೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ಫ್ರಾನ್ಸ್ ಮುಂದಿನ ದಿನಗಳಲ್ಲಿ Eckert IV ನಕ್ಷಾ ಪ್ರಕ್ಷೇಪಣೆಯನ್ನು ಬಳಸಲು ಮುಂದಾಗಿದೆ. ಇದು ವಿಶ್ವಸಂಸ್ಥೆ ಬೆಂಬಲಿಸಿರುವ Equal Earth ವಿನ್ಯಾಸಕ್ಕೆ ಹೋಲಿಕೆಯಾಗುತ್ತದೆ.
ನಕ್ಷೆಯಲ್ಲೂ ‘ಪಾಶ್ಚಿಮಾತ್ಯ ದೃಷ್ಟಿಕೋನ’ವೇ?
ಮರ್ಕೇಟರ್ ನಕ್ಷೆಯ ಕುರಿತು ಭೂಗೋಳಶಾಸ್ತ್ರಜ್ಞರು ಮತ್ತು ಇತಿಹಾಸಕಾರರ ನಡುವೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಕೆಲವರು ಇದು ಜಗತ್ತನ್ನು ಪಾಶ್ಚಿಮಾತ್ಯ ದೃಷ್ಟಿಕೋನದಿಂದ ತೋರಿಸುತ್ತದೆ ಎಂದು ವಾದಿಸಿದ್ದಾರೆ.
ಭೂಮಧ್ಯರೇಖೆಯ ಸಮೀಪದ ರಾಷ್ಟ್ರಗಳನ್ನು ಚಿಕ್ಕದಾಗಿ ಹಾಗೂ ಉತ್ತರ ಗೋಳಾರ್ಧದ ರಾಷ್ಟ್ರಗಳನ್ನು ದೊಡ್ಡದಾಗಿ ತೋರಿಸುವುದರಿಂದ ಜಾಗತಿಕ ಅಸಮಾನತೆಗಳ ಬಗ್ಗೆ ಜನರ ಮನೋಭಾವದ ಮೇಲೂ ಪರಿಣಾಮ ಬೀರಿರಬಹುದು ಎಂಬುದು ವಿಮರ್ಶಕರ ಅಭಿಪ್ರಾಯ.
ಶಿಕ್ಷಣದಲ್ಲಿ ವಿಶ್ವ ಭೂಗೋಳದ ಬೋಧನೆ, ಅಭಿವೃದ್ಧಿ ನೆರವು, ಜಾಗತಿಕ ವ್ಯಾಪಾರ ಮತ್ತು ಇತಿಹಾಸದ ಕುರಿತು ಜನರ ಗ್ರಹಿಕೆಯ ಮೇಲೂ ನಕ್ಷೆಗಳ ಪ್ರಭಾವ ಇರಬಹುದು ಎಂದು ಅವರು ಹೇಳಿದ್ದಾರೆ.
















