ವಿಶೇಷ ಲೇಖನ :
ಚೇತನ್ ಚನ್ನಮಲ್ಲಪ್ಪ
ಅಂಕಣ ಬರಹಗಾರರು
ಚಿತ್ರದುರ್ಗ, ಮೊ : 88675 58649
ಸುದ್ದಿಒನ್, ಸೆಪ್ಟೆಂಬರ್. 05 : ತಾನು ಕಲಿಸಿದ ಮಕ್ಕಳು ತನಗಿಂತ ಹೆಚ್ಚು ಸಾಧನೆ ಮಾಡಿದರೆ ಅಸೂಯೆ ಪಟ್ಟುಕೊಳ್ಳದೇ, ‘ನನ್ನ ವಿದ್ಯಾರ್ಥಿ’ ಎಂದು ಬೀಗುವುದರಲ್ಲಿ ಶಿಕ್ಷಕರ ಸಾರ್ಥಕತೆ ಇದೆ. ‘ಶಿಕ್ಷಕರು’ ಅಂತ ಕರೆಸಿಕೊಳ್ಳುವವರು ನಿಜಕ್ಕೂ ಅದೃಷ್ಟವಂತರು. ತಾನು ಏನನ್ನು ಸಾಧಿಸಲು ಸಾಧ್ಯವಾಗಲಿಲ್ಲವೋ ಅದನ್ನು ತನ್ನ ವಿದ್ಯಾರ್ಥಿಯ ಮೂಲಕ ಸಾಧಿಸಲು ಪ್ರೇರಣೆ ನೀಡುವುದು, ಉತ್ತಮ ಮೌಲ್ಯಗಳನ್ನು ಬಿತ್ತುವುದರ ಮೂಲಕ ವಿದ್ಯಾರ್ಥಿಯನ್ನು ದೊಡ್ಡ ಶಕ್ತಿಯನ್ನಾಗಿ ಪರಿವರ್ತಿಸಲು ಸಾಧ್ಯವಿರುವುದು ಈ ಶಿಕ್ಷಕರಿಗೆ ಮಾತ್ರ.
ತಮಗೆ ಪಾಠಗಳನ್ನು ಕಲಿಸಿದ ಶಿಕ್ಷಕರಿಗೆ ಗೌರವ ಸಲ್ಲಿಸೋಕೆ, ವಿಶೇಷ ಉಡುಗೊರೆ ಸಿದ್ಧ ಮಾಡಿಕೊಂಡು ಅದನ್ನು ತಮ್ಮ ಶಿಕ್ಷಕರಿಗೆ ನೀಡಿ, ಅದಕ್ಕೆ ಅವರು ನೀಡುವ ಪ್ರತಿಕ್ರಿಯೆಯೇ ಮಕ್ಕಳಿಗೆ ಸಂಭ್ರಮ, ಸಡಗರ, ಇವರು ನನ್ನ ಮೆಚ್ಚಿನ ಶಿಕ್ಷಕ, ಶಿಕ್ಷಕಿ ಎಂದು ಬೀಗುವುದರಲ್ಲೂ ಖುಷಿಯಿದೆ. ಪೋಷಕರು ಮಕ್ಕಳು ತಮ್ಮ ಮಾತನ್ನು ಕೇಳದಿದ್ದಾಗ , ‘ನಿಮ್ಮ ಟೀಚರ್ ಗೆ ಹೇಳ್ತಿನಿ ತಡಿ’ ಅಂದರೆ ಸಾಕು ಸುಮ್ಮನಾಗಿಬಿಡುತ್ತಿದ್ದೆವು. ಆಗಾಗ ಪೋಷಕರು ಶಾಲೆಯಲ್ಲಿ, ‘ಸರ್/ಮೇಡಂ ನಿಮ್ಮನ್ನು ಕಂಡರೆ ನಮ್ಮ ಮಗುಗೆ ತುಂಬಾ ಇಷ್ಟ. ನೀವು ಹೇಳಿದರೆ ಅದನ್ನು ಮಕ್ಕಳು ಇಲ್ಲ ಅನ್ನೋದಿಲ್ಲ ಹಾಗಾಗಿ ನಮ್ಮ ಮಗುಗೆ ಒಂದಿಷ್ಟು ಬುದ್ಧಿ ಹೇಳಿ, ನಾನು ನಿಮಗೆ ಹೀಗೆ ಹೇಳಿದೆ ಅಂತ ಮಾತ್ರ ಮಗುಗೆ ಗೊತ್ತಾಗೋದು ಬೇಡ’ ಎನ್ನುವ ಪೋಷಕರು ಕಡಿಮೆ ಇಲ್ಲ. ಈ ಮಾತುಗಳು ಮಕ್ಕಳು ಶಿಕ್ಷಕರ ಬಗೆಗಿರುವ ನಂಬಿಕೆಯ ಬಗ್ಗೆ ತಿಳಿಸುತ್ತದೆ.

ಡಾ.ಎಸ್.ರಾಧಾಕೃಷ್ಣನ್ ಅವರ ಜನುಮದಿನವನ್ನು ಇಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಮೈಸೂರು ವಿಶ್ವವಿದ್ಯಾಲಯದಲ್ಲಿ ಅವರು ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ತರಗತಿ ಶಾಂತ ರೀತಿಯಲ್ಲಿರುತ್ತಿತ್ತು. ಜೊತೆಗೆ ಆ ಇತರ ತರಗತಿಯ ವಿದ್ಯಾರ್ಥಿಗಳು ಆ ತರಗತಿಗೆ ಬಂದು ಪಾಠ ಕೇಳುತ್ತಿದ್ದ ಪರಿಯೇ ಸೋಜಿಗ ಎನಿಸುತ್ತದೆ. (ಕೆಲವೆಡೆ ಇಂದು ಶಿಕ್ಷಕರೇ ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆತಂದು ತರಗತಿಯಲ್ಲಿ ಕೂರಿಸಿಕೊಳ್ಳುವುದು ಉಂಟು) ಅವರು ವರ್ಗಾವಣೆ ಆದಾಗ ಬೇಸರ ಮಾಡಿಕೊಂಡ ವಿದ್ಯಾರ್ಥಿಗಳು ಅವರ ಬೀಳ್ಕೊಡುಗೆಯನ್ನು ಸ್ಮರಣೀಯವಾಗಿಸಲು ಮೆರವಣಿಗೆಯ ಸಾರೋಟಿಗೆ ಕುದುರೆಗಳ ಬದಲು ವಿದ್ಯಾರ್ಥಿಗಳೇ ಅದನ್ನು ಕಾಲೇಜಿನಿಂದ ರೈಲ್ವೇ ನಿಲ್ದಾಣದ ವರೆಗೂ ಎಳೆದು ತಂದರು. ಅವರಿಗಾಗಿ ಕಾಯ್ದಿರಿಸಿದ್ದ ಬೋಗಿಯನ್ನು ಹೂವಿನಿಂದ ಅಲಂಕೃತಗೊಳಿಸಿದ್ದರು. ಒಬ್ಬ ಶಿಕ್ಷಕನಿಗೆ ಇದಕ್ಕಿಂತ ಬೀಳ್ಕೊಡುಗೆ ಸಿಗಲು ಸಾಧ್ಯವೇ?
ಇನ್ನೂ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ನಿಜಕ್ಕೂ ಮಕ್ಕಳ ಪ್ರೀತಿಯ ರಾಷ್ಟ್ರಪತಿ ಮಾತ್ರವಲ್ಲ ಮಾನವೀಯತೆಯ ಶಿಕ್ಷಕ ಕೂಡ. ಅವರು ಮಕ್ಕಳೊಂದಿಗೆ ಸಂವಾದ ನಡೆಸುತ್ತಿದ್ದ ಪರಿ, ಮಕ್ಕಳಿಗೆ ಪ್ರಶ್ನೆ ಕೇಳಲು ಪ್ರೇರೇಪಿಸುತ್ತಿದ್ದ ರೀತಿ, ಮಕ್ಕಳೊಂದಿಗೆ ಮಕ್ಕಳಾಗುತ್ತಿದ್ದ ಸಂದರ್ಭ, ಮಕ್ಕಳು ಕನಸು ಕಾಣುವಂತೆ ಪ್ರೇರೇಪಿಸಿ ಮತ್ತು ಅದನ್ನು ನನಸು ಮಾಡಲು ನೀವು ಸಹಾಯಕರಾಗಿ ಎಂದು ಶಿಕ್ಷಕರ ಜವಾಬ್ದಾರಿಯ ಬಗ್ಗೆ ತಿಳಿಸುತ್ತಿದ್ದ ಮಾತುಗಳು ಎಲ್ಲವೂ ಒಬ್ಬ ಆದರ್ಶ ಶಿಕ್ಷಕನಿಗೆ ಇರಬೇಕಾದ ಗುಣಗಳನ್ನು ಅವರು ಹೊಂದಿದ್ದರು.
ಶಾಲೆಯ ಮಗುವನ್ನು ತನ್ನ ಮಗುವಂತೆ ತಿಳಿದು, ಕಲಿಸುವ, ಕಲಿಯುವ ಶಿಕ್ಷಕರು ಮಕ್ಕಳಿಗೆ ಬಹುಬೇಗ ಇಷ್ಟವಾಗುತ್ತಾರೆ, ಅವರ ಪಾಠಗಳು ಇಷ್ಟವಾಗುತ್ತವೆ, ತನಗೆ ಇಷ್ಟವಿಲ್ಲದ ಶಿಕ್ಷಕರ ಪಾಠವೂ ಅರ್ಥವಾಗುವುದಿಲ್ಲವೆಂದೇ ಮೊದಲೇ ಮಕ್ಕಳು ನಿರ್ಧರಿಸಿರುತ್ತಾರೆ. ಮಕ್ಕಳೇಕೆ ಹೀಗೆ ಎನ್ನುವ ಬದಲು ಆ ಮಕ್ಕಳಿಗೆ ಸಮಯಕೊಡಿ ಆಗ ಅವರು ನಿಮ್ಮನ್ನು, ನಿಮ್ಮ ಪಾಠವನ್ನು ಅರಿಯುತ್ತಾರೆ.
ಇಂದು ಸರ್ಕಾರಿ ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತ ಇತರೆ ಕೆಲಸಗಳೇ ಹೆಚ್ಚಾಗಿವೆ. ಆದರೂ ಪಾಠವನ್ನು ಬಿಟ್ಟಿಲ್ಲ. ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಇನ್ನೂ ಖಾಸಗಿ ಶಾಲಾ ಶಿಕ್ಷಕರದ್ದು ಮತ್ತೊಂದು ರೀತಿಯ ಸಮಸ್ಯೆ. ಮಕ್ಕಳಿಗೆ ಅರ್ಥವಾಗುವಂತೆ ಎಷ್ಟೇ ಹೇಳಿಕೊಟ್ಟರೂ ಸಂಬಳ ಕಡಿಮೆ, ಸೇವಾ ಭದ್ರತೆ ಇಲ್ಲದಿರುವಿಕೆ ಕಾಡುತ್ತದೆ. ಆದರೂ ಅದಾವುದನ್ನು ಮಕ್ಕಳ ಮುಂದೆ ತೋರಿಸಿಕೊಳ್ಳದೇ ನಗುನಗುತ್ತಲೇ ಕಲಿಸುವವರು ಅವರು. ಆದರೆ ಮಕ್ಕಳ ಭವಿಷ್ಯ ಕಟ್ಟಿಕೊಡುವವರ ಭವಿಷ್ಯ…!?
ಮಕ್ಕಳು ಶಿಕ್ಷಕರು ಹೇಳಿದ್ದನ್ನೆಲ್ಲಾ ಕೇಳುತ್ತಾರೆ ಎನ್ನುವಾಗ ಅವರನ್ನ ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಬೇಕಿದೆ, ಅವರ ಕುತೂಹಲವನ್ನು ಹೆಚ್ಚಿಸುವ ರೀತಿ, ಉತ್ತಮ ಗುಣವನ್ನು ಬೆಳಸಿಕೊಳ್ಳವ ಕಥೆಗಳು, ಪ್ರೇರಣದಾಯಕ ಮಾತುಗಳು, ಸ್ವಾತಂತ್ರದ ಕತೆಗಳು, ಸೈನಿಕರ ತ್ಯಾಗ, ದೇಶಪ್ರೇಮವನ್ನು, ಗಣಿತ ಕಷ್ಟವೇ ಅಲ್ಲ ಅನ್ನುವ ರೀತಿ, ವಿಜ್ಞಾನದ ಪ್ರಯೋಗಗಳ ಮೂಲಕ ಬೆರಗನ್ನು ಉಂಟುಮಾಡುವ, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ತಿಳುವಳಿಕೆ, ಎಲ್ಲಕ್ಕೂ ಮೊದಲು ಭಾವನೆ ವ್ಯಕ್ತಪಡಿಸಲು ಮಾತೃಭಾಷೆ ಕನ್ನಡ, ವ್ಯವಹರಿಸಲು ಇಂಗ್ಲೀಷ್, ರಾಷ್ಟ್ರದಾದ್ಯಂತ ಸಂಚಾರಿಸಿದರೆ ಸಮಸ್ಯೆ ಆಗದಂತೆ ಹಿಂದಿ, ದೇವಭಾಷೆ ಸಂಸ್ಕøತ ಹೀಗೆ ಎಲ್ಲವನ್ನೂ ಕಲಿಸುತ್ತ, ಮಕ್ಕಳಿಂದಲ್ಲೂ ಕಲಿಯತ್ತ ಸಾಗಿದಾಗ ಅದರ ಮೂಲಕ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡಲು ಸಾಧ್ಯ. ಸಾಮಾನ್ಯ ಕಲ್ಲನ್ನೂ ಕಡೆದು ಶಿಲೆಯಾಗಿಸುವ ಶಿಕ್ಷಕರ ಶ್ರಮಕ್ಕೆ ಸಲ್ಯೂಟ್…
‘ಬೆಲ್’ ಹೊಡೆಯುವ ತನಕ ಮಾತ್ರ ಪಾಠ ಹೇಳಿಕೊಡುವವರು ಕೇವಲ ಹೆಸರಿಗಷ್ಟೇ ಶಿಕ್ಷಕರಾಗಿ ಅಲ್ಲಿಯೇ ಉಳಿದುಬಿಡುತ್ತಾರೆ. ಅದರಾಚೆಗೂ ಕಲಿಸುವ ಶಿಕ್ಷಕರು ಮಕ್ಕಳ ಮನಸ್ಸಲ್ಲಿ ಹಸಿರಾಗಿ ಉಳಿಯುತ್ತಾರೆ.
‘ಮಕ್ಕಳಿಗೆ ಗದರಿಸಿ ಹೇಳಿದರೆ ನಿಮ್ಮ ಮಾತನ್ನು ಕೇಳುತ್ತಾರೆ. ಭಾವನೆ ತುಂಬಿ ಹೇಳಿ ನಿಮ್ಮ ಮಾತನ್ನೂ, ಅದರಲ್ಲಿ ಇರುವ ಅರ್ಥವನ್ನು ತಿಳಿಯುತ್ತಾರೆ’. ಬದುಕಿನ ಪ್ರತಿಹಂತದಲ್ಲೂ ‘ಪಾಠ’ ಕಲಿಸುವ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.












