ದಾವಣಗೆರೆ, ಸೆಪ್ಟೆಂಬರ್ 02 : ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಕಚೇರಿಗಳಿಂದ ಕಚೇರಿಗೆ ಅಲೆಯುವ ದಿನಗಳಿಗೆ ಈಗ ತೆರೆಬಿದ್ದಿದೆ. ನಾಗರಿಕರ ದೂರುಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಅಥವಾ ನಿರ್ದಿಷ್ಟ ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ‘ಪ್ರಜಾಸೇವಾ ಅಭಿಯಾನ’ ಎಂಬ ಏಕೀಕೃತ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮವು ಬರುವ ಸೆಪ್ಟೆಂಬರ್ 5, 2026 (ಶನಿವಾರ) ರಂದು ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ಹಾಗೂ ಹೋಬಳಿ ಮಟ್ಟದ ಆಂದೋಲನವು ಚನ್ನಗಿರಿ ತಾಲೂಕಿನ ಸಂತೇಬೆನ್ನೂರು 1ನೇ ಹೋಬಳಿಯ ಸಂತೇಬೆನ್ನೂರು ಗ್ರಾಮದಲ್ಲಿ ಜರುಗಲಿದೆ.

ಪ್ರಜಾಸೇವಾ ಅಭಿಯಾನವು ಸಣ್ಣಪುಟ್ಟ ಕೆಲಸಗಳಿಗೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಜನರಿದ್ದಲ್ಲಿಗೇ ಆಡಳಿತ ತಲುಪಿಸುವುದು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಸ್ವೀಕರಿಸಿ, ನಿಗದಿತ ಕಾಲಮಿತಿಯಲ್ಲಿ ಪರಿಹರಿಸುವುದು. ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರುವುದು.
ನೂತನವಾಗಿ ರಚಿಸಲಾದ ಪ್ರಜಾಸೇವಾ ಇಲಾಖೆಯಡಿ ಪ್ರತಿ ಶನಿವಾರ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಪರ್ಯಾಯವಾಗಿ ಅಭಿಯಾನದ ಸಭೆಗಳನ್ನು ಆಯೋಜಿಸಲಾಗುತ್ತದೆ.
ತಾಲ್ಲೂಕು ಮಟ್ಟದ ಸಭೆ: ತಿಂಗಳ 1ನೇ ಮತ್ತು 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ.
ತಾಲ್ಲೂಕು/ಹೋಬಳಿ ಮಟ್ಟದ ಸಭೆ: ತಿಂಗಳ 2ನೇ ಮತ್ತು 4ನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಜರುಗುತ್ತದೆ.
ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆ ನಡೆಯುವಾಗ ಪ್ರತ್ಯೇಕ ಹೋಬಳಿ ಮಟ್ಟದ ಸಭೆ ಇರುವುದಿಲ್ಲ. ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಚಿವರ ಸಭೆಯಲ್ಲೇ ಭಾಗವಹಿಸಲಿದ್ದಾರೆ.
ಸಭೆ ನಡೆಯುವ ಕನಿಷ್ಠ 15 ದಿನಗಳ ಮುಂಚಿತವಾಗಿ ಪೂರ್ವಮುದ್ರಿತ ಅರ್ಜಿ ಹಾಗೂ ದಾಖಲೆಗಳ ಪರಿಶೀಲನಾ ಪಟ್ಟಿ ಒಳಗೊಂಡ ಕರಪತ್ರಗಳನ್ನು ಮನೆ-ಮನೆಗೆ ವಿತರಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಸಾರ್ವಜನಿಕರಿಗೆ ಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿ ನೀಡಲು ಸ್ವಯಂಚಾಲಿತ ಕರೆಗಳನ್ನು ಮಾಡಲಾಗುತ್ತದೆ. ಸಾರ್ವಜನಿಕರು ಸಭೆಗೂ ಮುನ್ನವೇ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಸಭಾ ಸ್ಥಳದಲ್ಲೂ ಕಂಪ್ಯೂಟರ್, ಇಂಟರ್ನೆಟ್ ಒಳಗೊಂಡ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ.
ಮೊದಲ ಬಾರಿಗೆ ದೂರು ನೋಂದಾಯಿಸುವವರಿಗೆ ಹಾಗೂ ಸಕಾಲ, CSC ಅಥವಾ IPGRS ನಲ್ಲಿ ನೋಂದಾಯಿಸಿ 21 ದಿನ ಕಳೆದರೂ ಪರಿಹಾರ ಸಿಗದ ದೂರುದಾರರಿಗೆ ಆದ್ಯತೆ ನೀಡಿ, ಜನಪ್ರತಿನಿಧಿಗಳೊಂದಿಗೆ ನೇರ ಸಂವಹನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಹಾಗೂ ದೃಢೀಕರಣ ಪತ್ರಗಳನ್ನು ಸ್ಥಳದಲ್ಲೇ ವಿತರಿಸಲಾಗುತ್ತದೆ. ಸಭೆಯಲ್ಲಿ ಸ್ವೀಕರಿಸಲಾದ ಪ್ರತಿಯೊಂದು ಅರ್ಜಿಯನ್ನು ಪ್ರತಿ ಬುಧವಾರ 3 ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ:
ಬೆಳಿಗ್ಗೆ 9:00 – 11:00: ತಾಲ್ಲೂಕು ಮಟ್ಟದ ಪರಿಶೀಲನೆ (ತಹಶೀಲ್ದಾರ್ & ಇಒ) , ಬೆಳಿಗ್ಗೆ 11:00 – ಮಧ್ಯಾಹ್ನ 1:00: ಉಪವಿಭಾಗ ಮಟ್ಟದ ಪರಿಶೀಲನೆ (ಎಸಿ) ,ಮಧ್ಯಾಹ್ನ 3:00 – ಸಂಜೆ 5:00: ಜಿಲ್ಲಾ ಮಟ್ಟದ ಪರಿಶೀಲನೆ (ಜಿಲ್ಲಾಧಿಕಾರಿಗಳು)
ಈ ಪರಿಶೀಲನೆ ಸುಸೂತ್ರವಾಗಿ ನಡೆಯಲು ಶನಿವಾರ ಮತ್ತು ಬುಧವಾರದಂದು ರಾಜ್ಯ, ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಬೇರೆ ಯಾವುದೇ ಸರ್ಕಾರಿ ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಲು ಮತ್ತು ನೈಜ-ಸಮಯದ (Real-time) ಪ್ರಗತಿ ತಿಳಿಯಲು ಏಕೀಕೃತ ವ್ಯವಸ್ಥೆಯನ್ನು ರೂಪಿಸಲಾಗಿದೆ:
ಸಹಾಯವಾಣಿ ಸಂಖ್ಯೆ: 1902 , ಅಧಿಕೃತ ಪೋರ್ಟಲ್: ipgrs.karnataka.gov.in ಸಾಮಾಜಿಕ ಜಾಲತಾಣ: @prajasevaabhiyana
ನಿಗದಿತ ಅವಧಿಯಲ್ಲಿ ವಿಲೇವಾರಿಯಾಗದ ಅರ್ಜಿಗಳು ಸ್ವಯಂಚಾಲಿತವಾಗಿ (Auto-escalation) ಇಲಾಖಾ ಮುಖ್ಯಸ್ಥರಿಗೆ ವರ್ಗಾವಣೆಯಾಗುತ್ತವೆ. ಪ್ರತಿ ಜಿಲ್ಲೆಗೆ ನೇಮಕಗೊಂಡಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ 1ನೇ ಮತ್ತು 3ನೇ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಲಿದ್ದು, ಮುಖ್ಯ ಕಾರ್ಯದರ್ಶಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಮಟ್ಟದಲ್ಲಿ ಮಾಸಿಕ ಪ್ರಗತಿ ಪರಿಶೀಲನೆ ನಡೆಯಲಿದೆ.
ಜನರಿಂದ, ಜನರಿಗಾಗಿ, ಜನರಿಗೋಸ್ಕರ ರೂಪಿಸಿರುವ ಸರ್ಕಾರದ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬೇಕು. ಇದು ಸರ್ಕಾರದ ಯೋಜನೆಗಳ ಜಾಗೃತಿಗೆ ಹಾಗೂ ಸಾರ್ವಜನಿಕರ ಸಲಹೆ-ಸೂಚನೆ ಪಡೆಯಲು ಒಂದು ‘ಅನುಭವ ಮಂಟಪ’ವಾಗಿ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದ್ದಾರೆ.













