ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 01 : ಕನಿಷ್ಟ ವೇತನ ಹಾಗೂ ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಸಿಐಟಿಯು. ವತಿಯಿಂದ ಸೆ.8 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಎಂ.ಡಿ.ಮಲಿಯಪ್ಪ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಬಿಜೆಪಿ. ಸರ್ಕಾರ ನಾಲ್ಕು ಕಾರ್ಮಿಕ ಕಾಯಿದೆಗಳನ್ನು ಜಾರಿಗೆ ತಂದು 29 ಕಾಯಿದೆಗಳನ್ನು ವಿಲೀನಗೊಳಿಸಿ ಕಾರ್ಮಿಕರ ರಕ್ಷಣಾ ಕಚವನ್ನು ಕಿತ್ತು ಹಾಕಿದೆ. ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರಲು ಹೊರಟಿರುವುದರ ವಿರುದ್ದ ಹಮ್ಮಿಕೊಂಡಿರುವ ವಿಧಾನಸೌಧ ಚಲೋದಲ್ಲಿ ಜಿಲ್ಲೆಯಿಂದ ಒಂದುವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಲಿದ್ದಾರೆಂದು ಹೇಳಿದರು.
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಷನ್ನ ಸಿ.ಕೆ.ಗೌಸ್ಪೀರ್ ಮಾತನಾಡಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂದಕ್ಕೆ ಪಡೆದು ಅಧಿಸೂಚಿತ ಕನಿಷ್ಟ ವೇತನ ತಡೆ ಹಿಡಿದಿರುವ ಕ್ರಮವನ್ನು ರದ್ದುಪಡಿಸಿ ಕನಿಷ್ಟ ಕೂಲಿ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಪಿಂಚಣಿ, ಉಚಿತ ಚಿಕಿತ್ಸೆ ದೊರಕಿಸಬೇಕು
ಸ್ಕೀಂ ನೌಕರರನ್ನು ಖಾಯಂಗೊಳಿಸಿ ಗುತ್ತಿಗೆ ಹೊರ ಗುತ್ತಿಗೆ ಪದ್ದತಿಯನ್ನು ರದ್ದುಪಡಿಸುವುದು ಸೇರಿದಂತೆ 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು. ಸಿಐಟಿಯು ರಾಜ್ಯ ಉಪಾಧ್ಯಕ್ಷ ಸೈಯದ್ ಮುಜೀಬ್, ಟಿ.ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಬಿಸಿಯೂಟ ನೌಕರರ ಸಂಘದ ನಿಂಗಮ್ಮ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.










