ಚಿತ್ರದುರ್ಗ. ಆ.31: ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಅಂತ್ಯೋದಯ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿದಾರರ ಕುಟುಂಬದ ಎಲ್ಲಾ ಸದಸ್ಯರು ಈಗಾಗಲೇ ಇ-ಕೆವೈಸಿ ಮಾಡಿಸಿ 05 ವರ್ಷ ಪೂರೈಸಿದವರು ಮಾತ್ರ ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಇ-ಕೆವೈಸಿ (ಬಯೋ ದೃಢೀಕರಣ) ಮಾಡಿಸಿಕೊಳ್ಳಲು ತಿಳಿಸಿದೆ.
ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡುವಾಗ ಇತ್ತೀಚಿನ ಜಾತಿ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಮೊಬೈಲ್ ಹಾಗೂ ರೇಷನ್ ಕಾರ್ಡ್‍ನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.
ಇ-ಕೆವೈಸಿ ಮಾಡಿಸದೇ ಹೋದಲ್ಲಿ ಅಂತಹ ಪಡಿತರ ಚೀಟಿಯ ಫಲಾನುಭವಿಗಳು ಸರ್ಕಾರದ ಸೌಲಭ್ಯದಿಂದ ವಂಚಿತರಾಗಬಹುದು. ಆದ್ದರಿಂದ 2026ರ ಸೆಪ್ಟೆಂಬರ್ 01 ರಿಂದ 15 ರವರೆಗೆ ಇ-ಕೆವೈಸಿ ಕಾರ್ಯ ನಡೆಯಲಿದ್ದು, ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ ತಿಳಿಸಿದ್ದಾರೆ.

ಆಯ್ಕೆಪಟ್ಟಿ ಪ್ರಕಟ :
ಕೃಷೋನ್ನತಿ-ಕೃಷಿ ವಿಸ್ತರಣೆ (ಆತ್ಮ) ಯೋಜನೆಯಡಿ ಖಾಲಿ ಇದ್ದ 7 ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಹೊಸದಾಗಿ 7 ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಳಿಗೆ ನೇರ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳನ್ನು ಭರ್ತಿ ಮಾಡಲು 2026ರ ಆಗಸ್ಟ್ 28ರಂದು ಸಂದರ್ಶನ ನಡೆಸಲಾಗಿತ್ತು. ಸಂದರ್ಶನದ ಆಧಾರದ ಮೇಲೆ ಸಿದ್ಧಪಡಿಸಲಾದ ಆಯ್ಕೆ ಪಟ್ಟಿಯನ್ನು ಚಿತ್ರದುರ್ಗ ನಗರದ ಆರ್‍ಎಂಸಿ ಯಾರ್ಡ್ ರಸ್ತೆಯಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದ್ದಾರೆ.
==========
ಯುವ ಹವಾಮಾನ ಕಾರ್ಯ ನಿಧಿ: ಅರ್ಜಿ ಆಹ್ವಾನ :
ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ಸ್ಥಳೀಯ ಹವಾಮಾನ ಸವಾಲುಗಳನ್ನು ಪರಿಹರಿಸುವ ನವೀನ ಮತ್ತು ಸಮುದಾಯ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯುವ ಹವಾಮಾನ ಕಾರ್ಯ ನಿಧಿ’ ಯೋಜನೆಯಡಿ 15 ರಿಂದ 24 ವರ್ಷ ವಯಸ್ಸಿನ ಯುವಜನರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ.
ಬ್ಲೂಮ್‍ಬರ್ಗ್ ಫಿಲಾಂತ್ರಪೀಸ್ ಬೆಂಬಲಿತ ಈ ಯೋಜನೆಯು ಹಸಿರು, ಆರೋಗ್ಯಕರ ಹಾಗೂ ಹವಾಮಾನ ಸ್ಥಿತಿಸ್ಥಾಪಕ ಚಿತ್ರದುರ್ಗ ನಿರ್ಮಾಣಕ್ಕೆ ಕೊಡುಗೆ ನೀಡುವ ಆಲೋಚನೆಗಳನ್ನು ಹವಾಮಾನ ಪರಿಹಾರಗಳಾಗಿ ರೂಪಿಸಲು ಯುವಜನರಿಗೆ ವೇದಿಕೆ ಕಲ್ಪಿಸಲಿದೆ. ಸಂಘ-ಸಂಸ್ಥೆಗಳು, ಎನ್‍ಜಿಒ ಹಾಗೂ ವಿದ್ಯಾರ್ಥಿ ಸಂಸ್ಥೆಗಳ ಸಹಯೋಗದೊಂದಿಗೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಸಕ್ತರು ಅರ್ಜಿ ಸಲ್ಲಿಸಬಹುದು.
ಆಸಕ್ತರು 2026ರ ಅಕ್ಟೋಬರ್ 15 ರೊಳಗಾಗಿ ಪೌರಾಯುಕ್ತರು, ನಗರಸಭೆ, ಚಿತ್ರದುರ್ಗ ಇವರ ಹೆಸರಿಗೆ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಚೇರಿ ವೇಳೆಯಲ್ಲಿ ಲೆಕ್ಕಪತ್ರ ಶಾಖೆಯ ಜಿ.ಕೆ. ರಘುವೀರ ಹಾಗೂ ಸಮನ್ವಯಾಧಿಕಾರಿ ಕೆ. ಪುಟ್ಟಪ್ಪ ಅವರನ್ನು ನೇರವಾಗಿ ಭೇಟಿ ಮಾಡಬಹುದು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=========










