ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಬಾಲ್ಯದಲ್ಲಿ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಕ್ಷೇತ್ರದಲ್ಲಿ ನಡೆದ ಪವಾಡ ಸದೃಶ ಘಟನೆಯೊಂದನ್ನು ಸ್ಮರಿಸಿದ್ದಾರೆ. ಭೀಕರ ಬರಗಾಲದ ಸಂದರ್ಭದಲ್ಲಿ 18 ಹಳ್ಳಿಗಳ ಜನರು ಒಗ್ಗೂಡಿ ದೇವರಿಗೆ ಸಹಸ್ರ ಕುಂಭಾಭಿಷೇಕ ನೆರವೇರಿಸಿದ ಬಳಿಕ ಐದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.
ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಪ್ರಸಿದ್ಧ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ದೇವೇಗೌಡರು, ಕ್ಷೇತ್ರದ ಮಹಿಮೆ ಹಾಗೂ ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡರು.
ಮಾವಿನಕೆರೆ ಕ್ಷೇತ್ರ ಅತ್ಯಂತ ಪುರಾತನ ಹಾಗೂ ಜಾಗೃತ ಪವಿತ್ರ ಕ್ಷೇತ್ರವಾಗಿದೆ. ತಮ್ಮ ಬಾಲ್ಯದಲ್ಲಿ ಈ ಭಾಗದಲ್ಲಿ ತೀವ್ರ ಬರಗಾಲ ಎದುರಾಗಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಮಳೆಯಿಲ್ಲದೆ ಜನರು ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಸುತ್ತಮುತ್ತಲಿನ 18 ಹಳ್ಳಿಗಳ ಗ್ರಾಮಸ್ಥರು ಒಗ್ಗೂಡಿ ಶ್ರೀ ರಂಗನಾಥ ಸ್ವಾಮಿಗೆ ಸಹಸ್ರ ಕುಂಭಾಭಿಷೇಕ ಮಾಡಲು ನಿರ್ಧರಿಸಿದ್ದರು ಎಂದು ಹೇಳಿದರು.
ಗ್ರಾಮಸ್ಥರು ವಿವಿಧ ಊರುಗಳಿಂದ ಬಿಂದಿಗೆಗಳಲ್ಲಿ ನೀರು ತಂದು ಬೆಟ್ಟದ ಮೇಲಿರುವ ದೇವಸ್ಥಾನದ ಗೋಪುರಕ್ಕೆ ಭಕ್ತಿಯಿಂದ ಅಭಿಷೇಕ ಮಾಡಿದ್ದರು. ಇದೇ ವೇಳೆ ಊರುಗಳಿಂದ ತಿಂಡಿ-ತಿನಿಸುಗಳನ್ನು ತಂದು ಬೆಟ್ಟದ ಮೇಲೆ ಸೇರಿಸಲಾಗಿತ್ತು ಎಂದು ದೇವೇಗೌಡರು ನೆನಪಿಸಿಕೊಂಡರು.

ಕುಂಭಾಭಿಷೇಕ ನಡೆಯುತ್ತಿದ್ದ ಸಂದರ್ಭದಲ್ಲಿ ದೇವಸ್ಥಾನದ ಗೋಪುರದ ಮೇಲ್ಭಾಗದಲ್ಲಿ ಚಾಪೆಯಗಲದಷ್ಟು ಸಣ್ಣ ಕಪ್ಪು ಮೋಡ ಕಾಣಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಆಕಾಶವೆಲ್ಲಾ ಮೋಡ ಕವಿದು, ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಿರಂತರ ಧಾರಾಕಾರ ಮಳೆ ಸುರಿಯಿತು ಎಂದು ಅವರು ವಿವರಿಸಿದರು.
ಮಳೆ ಸಂಪೂರ್ಣವಾಗಿ ನಿಂತ ಬಳಿಕವೇ ಎಲ್ಲರೂ ಬೆಟ್ಟದಿಂದ ತಮ್ಮ ಮನೆಗಳಿಗೆ ಮರಳಿದ್ದೆವು. ಈ ಘಟನೆ ತಮ್ಮ ಬಾಲ್ಯದ ಮರೆಯಲಾಗದ ಅನುಭವಗಳಲ್ಲಿ ಒಂದಾಗಿದೆ ಎಂದು ದೇವೇಗೌಡರು ಹೇಳಿದರು.
ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಗೆ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ. ಈ ಸ್ವಾಮಿಯನ್ನು ಕುಲದೇವರನ್ನಾಗಿ ಆರಾಧಿಸುವವರು ವಿದೇಶಗಳಲ್ಲಿದ್ದರೂ ಶ್ರಾವಣ ಮಾಸದಲ್ಲಿ ತಮ್ಮ ಮನೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಬೇಕು ಎಂದು ದೇವೇಗೌಡರು ಭಕ್ತರಿಗೆ ಕರೆ ನೀಡಿದರು.ತಾವು ಪ್ರತಿ ವರ್ಷವೂ ಮಾವಿನಕೆರೆಗೆ ಭೇಟಿ ನೀಡಿ ಶ್ರೀ ರಂಗನಾಥ ಸ್ವಾಮಿಯ ಆಶೀರ್ವಾದ ಪಡೆಯುತ್ತೇನೆ ಎಂದು ಅವರು ಹೇಳಿದರು.













