ಚಿತ್ರದುರ್ಗ.ಆ.28 : ಕೇಂದ್ರ ಸರ್ಕಾರದ ‘ಬರ ನಿರ್ವಹಣೆ ಕೈಪಿಡಿ 2020’ ರ ಮಾರ್ಗದರ್ಶಿ ಸೂತ್ರಗಳನ್ನು ಆಧರಿಸಿ ‘ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ’(KSNDMC) ವರದಿ ನೀಡಿದ್ದು, ಇದರ ಆಧಾರದಲ್ಲಿ ರಾಜ್ಯದ 101 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೊಷಿಸಲಾಗಿದೆ. ಇದರಲ್ಲಿ ರಾಜಕೀಯ ಅಥವಾ ಯಾವುದೇ ಪಕ್ಷಪಾತ ನಡೆದಿಲ್ಲ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಸ್ಪಷ್ಟಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ತೀವ್ರ ಮಳೆ ಅಭಾವ ತಲೆದೊರಿದ್ದು ಸರ್ಕಾರ ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಇದರಲ್ಲಿ 89 ತೀವ್ರ ಹಾಗೂ 12 ಸಾಧಾರಣ ಬರ ಪರಸ್ಥಿತಿ ತಲೆದೊರಿದೆ. ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಹಿರಿಯೂರು, ಚಳ್ಳಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳನ್ನು ‘ತೀವ್ರ ಬರಪೀಡಿತ’ ಎಂದು ಗುರುತಿಸಲಾಗಿದೆ. ಚಿತ್ರದುರ್ಗ,ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳು ಪಟ್ಟಿಯಿಂದ ಹೊರಗುಳಿದಿವೆ.
ರಾಜ್ಯದ 25 ಜಿಲ್ಲೆಗಳ 175 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿಯಿದ್ದು, ಕೇಂದ್ರ ಸರ್ಕಾರದ ಮಾನದಂಡಗಳಡಿ 101 ತಾಲ್ಲೂಕುಗಳನ್ನು ಘೋಷಿಸಲಾಗಿದೆ. ಬಿಟ್ಟುಹೋದ ತಾಲ್ಲೂಕುಗಳಲ್ಲಿ ಸತತ ಮೂರು ವಾರಗಳ ಶುಷ್ಕ ವಾತಾವರಣದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮರು ಮೌಲ್ಯಮಾಪನ ನಡೆಸಿ, 2ನೇ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲು ಸರ್ಕಾರ ಸಿದ್ಧವಿದೆ. ಈ ಹಂತದಲ್ಲಿ ಜಿಲ್ಲೆಯ ಉಳಿದ ತಾಲ್ಲೂಕುಗಳನ್ನು ಸಹ ಬರಪೀಡತ ಪಟ್ಟಿಯಲ್ಲಿ ಸೇರಿಸುವ ಭರವಸೆಯನ್ನು ಸಚಿವ ಟಿ.ರಘುಮೂರ್ತಿ ನೀಡಿದರು.
ಮೂರು ತಾಲ್ಲೂಕು ಕೈ ಬಿಡಲು ತಾಂತ್ರಿಕ ಕಾರಣ :
ಕೇಂದ್ರ ಸರ್ಕಾರದ ‘ಬರ ನಿರ್ವಹಣೆ ಕೈಪಿಡಿ 2020’ ರ ಮಾರ್ಗದರ್ಶಿ ನಿಯಮ ಹಾಗೂ ಮಾನದಂಡಗಳಲ್ಲಿ ಮೊದಲ ಹಂತದಲ್ಲಿ ವಾಡಿಕೆ ಮಳೆಗಿಂತ ಶೇ.60 ಕ್ಕಿಂತ ಹೆಚ್ಚು ಕೊರತೆಯಾದರೆ, ಸಸತ ಮೂರುವಾರ ಶುಷ್ಕ ವಾತಾವರಣ ಇದ್ದರೆ ಬರ ಪೀಡಿದ ಪ್ರದೇಶ ಎಂದು ಘೋಷಿಸಲಾಗುತ್ತದೆ.
ಚಿತ್ರದುರ್ಗ ಜಿಲ್ಲೆಯ ಜೂನ್ 1 ರಿಂದ ಆಗಸ್ಟ್ 12 ರವರೆಗೆ ಚಳ್ಳಕೆರೆ 199 ಮಿ.ಮೀ, ಚಿತ್ರದುರ್ಗ 242 ಮಿ.ಮೀ, ಹಿರಿಯೂರು 138 ಮಿ.ಮೀ, ಹೊಳಲ್ಕೆರೆ 225 ಮಿ.ಮೀ, ಹೊಸದುರ್ಗ 186 ಮಿ.ಮೀ, ಮೊಳಕಾಲ್ಮೂರು 214 ಮಿ.ಮೀ ಆಗಿದೆ. ಚಿತ್ರದುರ್ಗ ಜಿಲ್ಲೆಯ ಯಾವುದೇ ತಾಲ್ಲೂಕುಗಳಲ್ಲಿ ಶೇ.60 ರಷ್ಟು ಮಳೆ ಕೊರತೆಯಾಗಿಲ್ಲ, ಆದರೆ ಜೂನ್ 1 ರಿಂದ ಆಗಸ್ಟ್ 12 ರ ಅವಧಿಯಲ್ಲಿ ಹಿರಿಯೂರು, ಚಳ್ಳಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲಿ ಸತತ ಮೂರು ವಾರಗಳ ಕಾಲ ಶುಷ್ಕ ವಾತಾವರಣ ದಾಖಲಾಗಿದೆ. ಇದರ ಆಧಾರದಲ್ಲಿ ಮೊದಲ ಹಂತದಲ್ಲಿ ಈ ತಾಲ್ಲೂಕುಗಳು ಬರ ಪಟ್ಟಿಗೆ ಸೇರ್ಪಡೆಯಾಗಿವೆ. ಆದರೆ ಚಿತ್ರದುರ್ಗ,ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಶುಷ್ಕ ವಾತಾವರಣ ದಾಖಲಾಗಿಲ್ಲ. ಇದೇ ತಾಂತ್ರಿಕ ಕಾರಣದಿಂದಾಗಿ ಈ ತಾಲ್ಲೂಕುಗಳು ಬರಪಟ್ಟಿಯಲ್ಲಿ ಸೇರಿಲ್ಲ. ಜಿಲ್ಲೆಯ ರೈತಮುಖಂಡರು ಹಾಗೂ ಜನಪ್ರತಿನಿಧಿಗಳು ಈ ಅಂಶಗಳನ್ನು ಗಮನಿಸಬೇಕು. ಬರ ಘೋಷಣೆಯಲ್ಲಿ ಯಾವುದೇ ರಾಜಕೀಯ ಅಥವಾ ಪಕ್ಷಪಾತ ಮಾಡುವ ಪ್ರಮೇಯ ಸರ್ಕಾರಕ್ಕೆ ಇಲ್ಲ ಎಂದು ಸಚಿವ ಟಿ.ರಘುಮೂರ್ತಿ ತಿಳಿಸಿದರು.
ಎರಡನೇ ಹಂತದಲ್ಲಿ ಬರ ಪೀಡಿತ ತಾಲ್ಲೂಕುಗಳಲ್ಲಿ ಬಿತ್ತನೆಯಾದ ಕೃಷಿ ಬೆಳೆಗಳ ಸ್ಥಿತಿ, ಉಪಗ್ರಹ ಆಧಾರಿತ ಸಸ್ಯವರ್ಗ ಸೂಚ್ಯಂಕ (Satellite-based Vegetation Indices), ಮಣ್ಣಿನ ತೇವಾಂಶ ಮತ್ತು ಅಂತರ್ಜಲ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಇದನ್ನು ಆಧರಿಸಿ ಬರದ ತೀವ್ರತೆ ಪ್ರಭಾವ ತಿಳಿದು ಬರುತ್ತೆದೆ. ಈ ದತ್ತಾಂಶಗಳನ್ನು ಕ್ರೂಢಿಕರಿಸಿ ಅಧಿಕಾರಿಗಳು ಬರಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸ್ಥಳದ ವಾಸ್ತವ ಸ್ಥಿತಿಗತಿಗಳನ್ನು ಪರಿಶೀಲಿಸಿ ವರದಿ ನೀಡುವರು. ಕೆ.ಎಸ್.ಎನ್.ಡಿ.ಎಂ.ಸಿ ನಡೆಸಿದ ಸಮಗ್ರ ಬರ ಮೌಲ್ಯಮಾಪನ ಆಧಾರದಲ್ಲಿ ಒಟ್ಟು 102 ತಾಲ್ಲೂಕುಗಳಲ್ಲಿ ಮೂರನೇ ಹಂತದ ಸ್ಥಳೀಯ ತನಿಖೆ ಹಾಗೂ ಕ್ಷೇತ್ರ ಪರಿಶೀಲನೆ ಪ್ರಕ್ರಿಯೆ ನಡೆಸಲು ಆಗಸ್ಟ್ 13 ರಂದು ಮಂತ್ರಿ ಮಂಡಲದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಚಿವ ಟಿ.ರಘುಮೂರ್ತಿ ಮಾಹಿತಿ ನೀಡಿದರು.
ಆಗಸ್ಟ್ ದ್ವಿತೀಯಾರ್ಧ ಹಾಗೂ ಸೆಪ್ಟೆಂಬರ್ ತಿಂಗಳ ಮಳೆ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಬೆಳೆಗಳ ಮೇಲಾಗುವ ಪರಿಣಾಮಗಳನ್ನು ಆಧರಿಸಿ 2026ರ ಖಾರೀಫ್ ಋತುವಿನ ಕೊನೆಯವರೆಗೆ ಮತ್ತೊಮ್ಮೆ ಬರ ಪರಿಸ್ಥಿತಿಯನ್ನು ಪರಾಮರ್ಶಿಸಲಾಗುವುದು. ಖಾರೀಫ್ ಋತುವಿನುದ್ದಕ್ಕೂ ನಿಯಮಾನುಸಾರ ಬರ ಪೀಡಿತ ಸ್ಥಳಗಳ ವಾಸ್ತವ ಸ್ಥಿತಿಗತಿಗಳನ್ನು ಪರಿಶೀಲಿಸಿ ಹೆಚ್ಚುವರಿ ತಾಲೂಕುಗಳು ಬರಪೀಡಿತ ಎಂದು ಹಂತ-ಹಂತವಾಗಿ ಘೋಷಣೆ ಅಧಿಸೂಚನೆ ಹೊರಡಿಸುವ ಅವಕಾಶವೂ ಇದೆ ಸಚಿವ ಟಿ.ರಘುಮೂರ್ತಿ ಹೇಳಿದರು.
ಬರ ಘೋಷಣೆಗೆ ಹೋಬಳಿ ಘಟಕ ಪರಿಗಣನೆಗೆ ಮನವಿ :
ಬರ ಘೋಷಣೆಗೆ ಪ್ರಸ್ತುತ ತಾಲ್ಲೂಕನ್ನು ಘಟಕವಾಗಿ ಪರಿಗಣಿಸಲಾಗುತ್ತಿದೆ. ಇದರಿಂದ ಕೆಲವೊಂದು ನಿರ್ದಿಷ್ಟ ಭಾಗಗಳ ರೈತರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಹೋಬಳಿ ಘಟಕವನ್ನಾಗಿ ಬರ ಪರಿಸ್ಥಿತಿಯನ್ನು ಪರಿಗಣಿಸುವಂತೆ ಮುಂಬರುವ ಸಂಪುಟ ಸಭೆಯಲ್ಲಿ ಮನವಿ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಸಚಿವ ಟಿ. ರಘುಮೂರ್ತಿ ಉತ್ತರಿಸಿದರು.
ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯ ಅಭಾವವಿರುವುದು ನಿಜ. ನಿರಂತರವಾಗಿ ಮಳೆಯಾಗದೆ ಅಸಮತೋಲಿತವಾಗಿ ಮಳೆಯಾಗುತ್ತಿರುವುದು ತೊಂದರೆಗೆ ಕಾರಣವಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಬರದ ಮಾನದಂಡ ನಿರ್ಧರಿಸಲಾಗುತ್ತಿದೆ. ಆದರೆ ಹೋಬಳಿವಾರು ಪರಿಗಣಿಸಿದರೆ ನೈಜ ಸಂತ್ರಸ್ತರಿಗೆ ನೆರವು ನೀಡಲು ಸಾಧ್ಯ. ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲ್ಲೂಕುಗಳು ಸದಾ ಬರಪೀಡಿತ ಪ್ರದೇಶಗಳಾಗಿದ್ದರೂ, ನಿಯಮಗಳ ಪ್ರಕಾರ ಕನಿಷ್ಠ ಮೂರುವರೆ ವಾರಗಳ ಕಾಲ ಶುಷ್ಕ ವಾತಾವರಣ ಮಾನದಂಡ ತಾಂತ್ರಿಕವಾಗಿ ತೃಪ್ತಿಯಾಗದ ಕಾರಣ ಬರ ಘೋಷಣೆಯಲ್ಲಿ ತೊಡಕಾಗಿದೆ. ಆದರೆ ಬೆಳೆ ಹಾನಿ ಹಾಗೂ ವಾಸ್ತವ ಸ್ಥಿತಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರ ಶ್ರಮಿಸಲಿದೆ ಎಂದು ಸಚಿವರು ಭರವಸೆ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ.ಸಿಇಓ ಡಾ.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.













