ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ ಆ. 27 : ಭಾರತೀಯ ಜನತಾ ಪಾರ್ಟಿ ಮತ್ತು ಜಾತ್ಯಾತೀತ ಜನತಾದಳ ಹೊಸದುರ್ಗ. ಇವರ ಸಹಭಾಗಿತ್ವದಲ್ಲಿ ಗುರುವಾರ ಹೂಸದುರ್ಗ ನಗರದಲ್ಲಿ ಎಡದಂಡೆ ಮತ್ತು ಬಲದಂಡೆಯಲ್ಲಿ ಬರುವ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವುದು. ತಾಲ್ಲೂಕನ್ನು ಬರಪೀಡಿತ ಎಂದು ತಕ್ಷಣ ಘೋಷಣೆ ಮಾಡಿ ಸಮಸ್ತ ರೈತ ಬಾಂಧವರಿಗೆ ಶೀಘ್ರವೇ ಬರಪರಿಹಾರವನ್ನು ನೀಡುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ರ್ಯಾಲಿ ಹಾಗೂ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.
ಹೊಸದುರ್ಗದ ನಗರದ ಶ್ರೀ ವೀರಭದ್ರಸ್ವಾಮಿ ದೇವಾಲಯದಿಂದ ಐ.ಬಿ. ವೃತ್ತದವರೆಗೆ. ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿ ಐ.ಬಿ.ವೃತ್ತದಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು ಇದರಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರಾದ ಲಿಂಗಮೂರ್ತಿ ಮಾತನಾಡಿ, ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವಲ್ಲಿ ಹಾಗೂ ಬರ ಪರಿಹಾರ ತಲುಪಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಕಳೆದ ಮೂರು ವರ್ಷಗಳಿಂದ ಈ ಭಾಗದ ಜನತೆ ಮತ್ತು ಹೊಸದುರ್ಗ ಸೇರಿದಂತೆ ಸುತ್ತಮುತ್ತಲಿನ ಬರನಾಡು ಪ್ರದೇಶಗಳಿಗೆ ಕುಡಿಯುವ ನೀರು ಸಿಗಬಹುದು ಎಂದು ಸಮಾಧಾನದಿಂದ ಕಾಯುತ್ತಿದ್ದರು. ಈ ಹಿಂದೆ ಕುಡಿಯುವ ನೀರಿನ ಯೋಜನೆಗಾಗಿ ಪಕ್ಷಾತೀತವಾಗಿ ಬೆಂಬಲ ಕೋರಿದಾಗ ಮಾನವೀಯತೆ ಆಧಾರದ ಮೇಲೆ ನಾವು ಬೆಂಬಲ ನೀಡಿದ್ದೆವು. ಆದರೆ ತಿಂಗಳುಗಳು ಕಳೆದರೂ ನೀರು ಪೂರೈಸುವಲ್ಲಿ ಆಡಳಿತಾರುತ್ತ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಲಿಂಗಮೂರ್ತಿ ವಾಗ್ದಾಳಿ ನಡೆಸಿದರು.
ತಮ್ಮ ಸರ್ಕಾರದ ಅವಧಿಯಲ್ಲಿ ಶೇಕಡಾ 60ಕ್ಕಿಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಪ್ರಸ್ತುತ ಸರ್ಕಾರ ಶೇಕಡಾ 20ರಷ್ಟು ಅನುದಾನವನ್ನೂ ಬಿಡುಗಡೆ ಮಾಡದೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಮಧ್ಯ ಕರ್ನಾಟಕ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತೀವ್ರ ಬರಗಾಲ ಆವರಿಸಿದ್ದರೂ, ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ. ಸಚಿವರ ಸ್ಥಾನಮಾನ ಹಾಗೂ ಸರ್ಕಾರದ ಉಳಿವಿಗಾಗಿ ನಿರತರಾಗಿರುವ ನಾಯಕರು, ಸಂಕಷ್ಟದಲ್ಲಿರುವ ಜನರಿಗೆ ನೀರು ನೀಡುವ ಕೆಲಸ ಮಾಡುತ್ತಿಲ್ಲ. ಕಳೆದ 15-18 ವರ್ಷಗಳ ಹಿಂದೆ ಪ್ರಾರಂಭವಾಗಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಬರೀ ಪೂಜೆ ಹಾಗೂ ಅನುದಾನದ ಸುಳ್ಳು ಭರವಸೆ ನೀಡಿ ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ ಎಂದು ಲಿಂಗಮೂರ್ತಿ ದೂರಿದರು.
ಯೋಜನೆಯಡಿ ಬರುವ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮೂಲಕ 28 ಕೆರೆಗಳನ್ನು ತುಂಬಿಸುವ ಭರವಸೆ ನೀಡಲಾಗಿತ್ತು. ಆದರೆ ತಾಲೂಕಿನ ಸುಮಾರು 75 ರಿಂದ 80 ದೊಡ್ಡ ಕೆರೆಗಳಿಗೆ ಹಾಗೂ ಸಮೀಪದ ಜಲಾಶಯಗಳಿಂದ 20 ರಿಂದ 70 ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದರೂ ಕುಡಿಯುವ ನೀರು ಒದಗಿಸಿಲ್ಲ. ತಾಲೂಕಿನ ಪ್ರತಿಯೊಂದು ಕೆರೆಗೂ ನೀರು ತುಂಬಿಸಬೇಕು ಎಂಬುದು ಪ್ರಮುಖ ಆಗ್ರಹವಾಗಿದೆ. ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ರೈತರಿಗೆ ರಾಗಿ ಖರೀದಿ ಕೇಂದ್ರಗಳ ಹಣ ತಲುಪಿಲ್ಲ. ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ರೈತರ ಜಮೀನಿನ ದಾಖಲೆಗಳನ್ನು ಮಾಡಲು ಒಂದೂವರೆ ವರ್ಷಗಳ ಕಾಲ ಅಲೆದಾಡಿಸಲಾಗುತ್ತಿದೆ. ರಾಯಚೂರು, ಬಳ್ಳಾರಿ ಭಾಗದಲ್ಲಿ ರೈತರ ಹಕ್ಕುಗಳಿಗಾಗಿ ಹಾಗೂ ಬಿಡದಿ ಟೌನ್ಶಿಪ್ ಸೇರಿದಂತೆ ವಿವಿಧೆಡೆ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ನಾಳೆಯೇ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ತಾಲೂಕನ್ನು “ಬರಪೀಡಿತ ತಾಲೂಕು” ಎಂದು ಅಧಿಕೃತವಾಗಿ ಘೋಷಿಸಬೇಕು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸಬೇಕು. ಈ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಶಾಂತಿಯುತವಾಗಿ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಧರಣಿ ಮುಂದುವರಿ ಸಲಾಗುವುದು ಎಂದು ಲಿಂಗಮೂರ್ತಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಧಾನ ಪತರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ದಶಕಗಳೇ ಕಳೆದರೂ ಭದ್ರಾ ಮೇಲ್ದಂಡೆ ಯೋಜನೆಯ ಕೆಲಸಗಳು ವಿಳಂಬ ಗತಿಯಲ್ಲಿ ಸಾಗಿದೆ. ನಿರಂತರವಾಗಿ ಎಲ್ಲಾ ರೈತ ಪರ ಸಂಘಟನೆಗಳು, ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಈ ವಿಷಯವಾಗಿ ಒತ್ತಡ ಹಾಕಿದ್ದರೂ, ಯಾವುದೇ ಪರಿಣಾಮಕಾರಿ ಕೆಲಸ ಆಗುತ್ತಿಲ್ಲ. ರಾಜ್ಯ ಸರ್ಕಾರ ಇಚ್ಛಾಶಕ್ತಿಯ ಕೊರತೆಯಿಂದ ಬರಪೀಡಿತ ಜಿಲ್ಲೆಯ ರೈತರು ಅತ್ಯಂತ ಕಷ್ಟಕ್ಕೆ ಸಿಲುಕಿದ್ದು ಸಾವಿರಾರು ಹೆಕ್ಟೇರು ಅಡಿಕೆ ಬೆಳೆ ನೀರಿನ ಕೊರತೆಯಿಂದ ನಾಶವಾಗುವ ಪರಿಸ್ಥಿತಿ ಬಂದಿದೆ. ತಾಲ್ಲೂಕಿನ ಅಂತರ್ಜಲ ಕುಸಿತದಿಂದ ಜನ ಕಂಗಾಲಾಗಿದ್ದು, ಅಕ್ಕ-ಪಕ್ಕದ ತಾಲ್ಲೂಕುಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಿಂದ ಫಲ ಲಭಿಸಿದ್ದು ನಮ್ಮ ತಾಲ್ಲೂಕಿನಲ್ಲಿ ಶೂನ್ಯ ಪ್ರಗತಿಯಾಗಿದೆ ಎಡದಂಡೆ ಮತ್ತು ಬಲದಂಡೆಯಲ್ಲಿ ಬರುವ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸಬೇಕು, ಹೊಸದುರ್ಗ ತಾಲ್ಲೂಕನ್ನು ಬರಪೀಡಿತ ಎಂದು ತಕ್ಷಣ ಘೋಷಣೆ ಮಾಡಿ ಸಮಸ್ತ ರೈತರಿಗೆ ಶೀಘ್ರವೇ ಬರಪರಿಹಾರವನ್ನು ನೀಡಬೇಕು,ಕುಡಿಯುವ ನೀರಿನ ಯೋಜನೆಯಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸಿ ಶೀಘ್ರ ಕಾರ್ಯವನ್ನು ಪೂರ್ಣಗೊಳಿಸಬೇಕು,ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ಆಡಳಿತದ ವಿರುದ್ಧ ತಾಲ್ಲೂಕಿನ ಜನತೆ ಬೆಸತ್ತಿದ್ದಾರೆ ಎಂದರು.
ಈ ಪ್ರತಿಭಟನಾ ಧರಣಿಯಲ್ಲಿ ಹೊಸದುರ್ಗ ತಾಲ್ಲೂಕಿನ ಭಾರತೀಯ ಜನತಾ ಪಾರ್ಟಿ ಹಾಗೂ ಜಾತ್ಯಾತೀತ ಜನತಾದಳದ ಮುಖಂಡರು ರೈತರು ಕಾರ್ಯಕರ್ತರು ಭಾಗವಹಿಸಿದ್ದರು.











