ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ಇಂದಿನ ಎ.ಐ. (ಕೃತಕ ಬುದ್ಧಿಮತ್ತೆ) ಯುಗದಲ್ಲಿ ಮೊಬೈಲ್ ಫೋನ್‌ಗಳು ಕೇವಲ ಆಟಿಕೆಗಳಲ್ಲ, ಅವು ಜ್ಞಾನದ ದೊಡ್ಡ ಕಣಜಗಳು. ಕೋವಿಡ್ ಕಾಲಘಟ್ಟದ ನಂತರ ಮೊಬೈಲ್ ಫೋನ್ ಎಂಬುದು ಮಕ್ಕಳ ಶಿಕ್ಷಣದ ಭಾಗವೇ ಆಗಿದೆ ಎಂದು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಹಿರಿಯ ತಜ್ಞರಾದ ರೋ. ಶಶಿಧರ್ ರಾವ್ ಹೇಳಿದರು.
ನಗರದ ದೇವರಾಜ್ ಅರಸ್ ಎಜುಕೇಶನ್ ಸೊಸೈಟಿ ಚಿತ್ರದುರ್ಗ (ಶ್ರೀ ವೆಂಕಟೇಶ್ವರ ಕಾಲೇಜ್ ಆಫ್ ಎಜುಕೇಶನ್) ಹಾಗೂ ರೋಟರಿ ಟ್ರಸ್ಟ್ ಶಾಲೆ ಚಿತ್ರದುರ್ಗ ಎರಡೂ ಸಂಸ್ಥೆಗಳ ಸಹಭಾಗಿತ್ವದಲ್ಲಿ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಸಹಯೋಗದಲ್ಲಿ ದಿನಾಂಕ 25 ಆಗಸ್ಟ್ 2026, ಮಂಗಳವಾರ ಮಧ್ಯಾಹ್ನ 3ಗಂಟೆಯಿಂದ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ “ಸೈಬರ್ ಸುರಕ್ಷತಾ ಕ್ರಮಗಳು ಹಾಗೂ ಎ.ಐ. ಯುಗದಲ್ಲಿ ಮೊಬೈಲ್ ಫೋನ್’ನ ಜವಾಬ್ದಾರಿಯುತ ಬಳಕೆ” ಎಂಬ ವಿಷಯದ ಬಗ್ಗೆ ಘನ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್ ಬಳಕೆಯನ್ನು ಬಹಳ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಬಳಸಬೇಕು. ಮಕ್ಕಳು ತಂತ್ರಜ್ಞಾನದ ಯಾವುದೇ ಪ್ರಾಕಾರದ ಅಥವಾ ಮೊಬೈಲ್ ಫೋನ್’ಗಳ ಬಳಕೆಯಲ್ಲಿ ಪೋಷಕರ ಮೇಲುಸ್ತುವಾರಿ ಮತ್ತು ಮಾರ್ಗದರ್ಶನ ಅಗತ್ಯ. ಸೈಬರ್ ಜಗತ್ತಿನಲ್ಲಿ ಸುರಕ್ಷಿತವಾಗಿರಲು ಕೆಲವು ಸರಳ ನಿಯಮಗಳನ್ನು ಪಾಲಿಸಬೇಕು. ಪಾಸ್‌ವರ್ಡ್‌ಗಳನ್ನು ಯಾವುದೇ ಹೊರಗಿನವರೊಂದಿಗೆ ಹಂಚಿಕೊಳ್ಳಬಾರದು. ಪ್ರಬಲ ಪಾಸ್ವರ್ಡ್ ಬಳಸಬೇಕು. ಲಾಗಿನ್ ಪ್ರಕ್ರಿಯೆಗೆ ಬಹುಹಂತದ ಸುರಕ್ಷತಾ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು.
ಅಪರಿಚಿತ ಲಿಂಕ್‌ಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬಾರದು.
ಎ.ಐ. ತಂತ್ರಜ್ಞಾನದಿಂದ ಸೃಷ್ಟಿಸಲ್ಪಡುವ ಡೇಟಾ ಬಗ್ಗೆ ಜಾಗರೂಕತೆ ವಹಿಸಬೇಕು, ಇಂಟರ್‌ನೆಟ್‌ನಲ್ಲಿ ನೋಡಿದ್ದೆಲ್ಲವನ್ನೂ ಸುಲಭವಾಗಿ ನಂಬಬಾರದು, ಮಾಹಿತಿ ಮೂಲಗಳನ್ನು ತಿಳಿಯಬೇಕಾದದ್ದು ಅಗತ್ಯ. ಮೊಬೈಲ್ ಬಳಕೆಯ ಸಮಯವನ್ನು ಮಿತಿಗೊಳಿಸಿ, ಮೈದಾನದ ಆಟಗಳಿಗೆ ಮಕ್ಕಳು ಆದ್ಯತೆ ನೀಡಬೇಕು. ಆನ್‌ಲೈನ್‌ನಲ್ಲಿ ಯಾವುದೇ ರೀತಿಯ ಅಸುರಕ್ಷಿತ ಭಾವ ಉಂಟಾದರೆ ತಕ್ಷಣವೇ ಪೋಷಕರ ಗಮನಕ್ಕೆ ತರಬೇಕು.
ಸ್ಮಾರ್ಟ್ ಫೋನ್ ಬಳಸುವವವರೂ ಸ್ಮಾರ್ಟ್ ಆಗಿಯೇ ವ್ಯವಹರಿಸಬೇಕು. ಎಂದು ಮನಮುಟ್ಟುವಂತೆ ವಿಚಾರಗಳನ್ನು ತಿಳಿಸಿಕೊಟ್ಟು ಮಾರ್ಗದರ್ಶನ ನೀಡಿದರು.
ರೋಟರಿ ಶಾಲೆಯ ಆಡಳಿತಾಧಿಕಾರಿಗಳಾದ ರೋ. ಎಂ.ಬಿ. ಶಂಕರಪ್ಪ ಕಾರ್ಯಕ್ರಮದ ಪೋಷಕರಾಗಿ ಪಾಲ್ಗೊಂಡು, ಅಧ್ಯಕ್ಷತೆಯನ್ನು ರೋಟರಿ ಇಂಗ್ಲಿಷ್ ಹೈಯರ್ ಪ್ರೈಮರಿ ಅಂಡ್ ಹೈಸ್ಕೂಲ್ ಮುಖ್ಯ್ಯೋಪಾಧ್ಯಾಯರು ಶ್ರೀಮತಿ ಉಮಾದೇವಿ ಎಚ್.ಎಂ ರವರು ವಹಿಸಿದ್ದರು.
ವೇದಿಕೆಯಲ್ಲಿ ಶ್ರೀಮತಿ ಗೌರಮ್ಮ ಎನ್. ರೋಟರಿ ಕನ್ನಡ ಹೈಯರ್ ಪ್ರೈಮರಿ ಸ್ಕೂಲ್ ನ ಮುಖ್ಯ್ಯೋಪಾಧ್ಯಾಯರು, ಶಿಕ್ಷಕರುಗಳಾದ ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಜ್ಯೋತಿ, ಶ್ರೀಮತಿ ಮಲ್ಲಿಕಾ ಮತ್ತಿತರರಿದ್ದರು.
ಪ್ರಶಿಕ್ಷಣಾರ್ಥಿಗಳಾದ ಮುಸಾದಿಕ್ ಅಹಮದ್ ಪಟೇಲ್, ಸುಪ್ರಜ್, ಗೋವಿಂದ್, ಪ್ರಿಯಾ, ರುಚಿತಾ, ದಿವ್ಯಾ ಮತ್ತಿತರರು ಕಾರ್ಯಕ್ರಮ ಆಯೋಜನೆಯಲ್ಲಿ ಶ್ರಮಿಸಿದರು.
ಶಿಕ್ಷಣ ಸಂಸ್ಥೆಗಳ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಳು, ರೋಟರಿ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸೈಬರ್ ಸೆಕ್ಯೂರಿಟಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಜ್ಞಾನಾಸಾಕ್ತರು ಭಾಗವಹಿಸಿದ್ದರು.










