Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭದ್ರೆ ನೀರು ಹರಿಸಲು ಅನುಮತಿ ; ಸರ್ಕಾರದ ಕ್ರಮ ಸ್ವಾಗತರ್ಹ ; ನೀರಾವರಿ ಹೋರಾಟ ಸಮಿತಿ ಹೇಳಿಕೆ

---Advertisement---

ಸುದ್ದಿಒನ್, ಚಿತ್ರದುರ್ಗ, ಆ.25: ಐದು ದಶಕಗಳ ಹೋರಾಟದ ಫಲ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಂಡು, ಆಮೆಗತಿ ಕಾಮಗಾರಿ ಮಧ್ಯೆಯೂ 3 ಟಿಎಂಸಿ ಅಡಿ ಭದ್ರಾ ನೀರನ್ನು ಮೀಸಲಿಟ್ಟು ಪ್ರಾಯೋಗಿಕವಾಗಿ ಹರಿಸಲು ಸರ್ಕಾರ ಕ್ರಮಕೈಗೊಂಡಿರುವುದು ಸ್ವಾಗತರ್ಹ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ, ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನೀರು ಹರಿಸಲು ಅಗತ್ಯ ಸಿದ್ಧತೆ ಕೈಗೊಂಡಿದ್ದು, ವಿಶ್ವೇಶ್ವರ ಜಲನಿಗಮದ ಕೋರಿಕೆ ಮೇರೆಗೆ ಯೋಜನೆಗಳ ಹಂತ-1ರ ಪ್ರಾಯೋಗಿಕ ಚಾಲನೆಗಾಗಿ ನೀರನ್ನು ಹರಿಸುವಂತೆ
ಸರ್ಕಾರ ಆದೇಶಿಸಿರುವುದು ಸಂಸತ ಮೂಡಿಸಿದ್ದು, ಕೂಡಲೇ ನೀರು ಹರಿಸುವ ದಿನಾಂಕ ನಿಗದಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಕಾಡಾ ಸಮಿತಿ ಕೂಡ ಬಯಲುಸೀಮೆ ಜನರ ಸಂಕಷ್ಟಗಳನ್ನು ಅರಿತು ಇನ್ಮುಂದೆಯೂ ಚಿತ್ರದುರ್ಗ, ಕಡೂರು, ತುಮಕೂರು ಜಿಲ್ಲೆಗೆ ಕಾಲಕಾಲಕ್ಕೆ ನೀರು ಹರಿಸಲು ಬೆಂಬಲವಾಗಿ ನಿಲ್ಲಬೇಕು. ನೀರು ವಿಷಯದಲ್ಲಿ ಪರಸ್ಪರ ಜಗಳಕ್ಕೆ ಅವಕಾಶ ಕೊಡದೆ ಒಡಹುಟ್ಟಿದ ಅಣ್ಣತಮ್ಮಿಂದರಂತೆ
ಪರಸ್ಪರ ಸಹಕರಿಸಬೇಕಿದೆ. ಕೃಷಿ ಮತ್ತು ಕುಡಿಯುವ ನೀರಿಗೆ ಆದ್ಯತೆ ನೀಡಿ ಭದ್ರಾ ಯೋಜನೆ ಜಾರಿಗೊಳಿಸಿದ್ದು,
ನಿಗದಿತ ಅವಧಿಯೊಳಗೆ ಪೂರ್ಣಗೊಂಡಿದ್ದರೇ ಬರಗಾಲದ ಸಂಕಷ್ಟದಿಂದ ಜಿಲ್ಲೆಯ ಜನರು ಪಾರಾಗುತ್ತಿದ್ದರು. ಆದರೆ, ಕಾಮಗಾರಿ ವಿಳಂಬಂದಿಂದ ಇಲ್ಲಿನ ಜನ ಈಗಲೂ ಸಮಸ್ಯೆ ಸುಳಿಗೆ ಸಿಲುಕಿದ್ದಾರೆ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಾಯೋಗಿಕವಾಗಿ ನೀರು ಹರಿಸಲು ಅನುಮತಿ ನೀಡಿರುವ ಸರ್ಕಾರ, ಕೂಡಲೇ ನೀರು ಹರಿಸುವ ಮಾರ್ಗಗಳ ತಪಾಸಣೆ ನಡೆಸಿ ತಕ್ಷಣವೇ ನೀರು ಹರಿಸುವ ದಿನಾಂಕ ನಿಗದಿಗೊಳಿಸಬೇಕು. ಮುಖ್ಯವಾಗಿ ಪ್ರಾಯೋಗಿಕ ಪ್ರಯತ್ನದ ಮೂಲಕ ಜನರ ಮನಸ್ಸನ್ನು ಸಂಭ್ರಮಿಸುವ ನಿರ್ಧಾರದ
ಜೊತೆಗೆ ಬರಗಾಲ ಪ್ರದೇಶಗಳಿಗೆ ಶಾಶ್ವತವಾಗಿ ನೀರು ಹರಿಸಲು ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಯೋಜನೆಗೆ ಭೂಮಿ ಪೂಜೆ ಮಾಡಿದ್ದು 2009ರಲ್ಲಿ, ಬಳಿಕ ರಾಜ್ಯದಲ್ಲಿ ಆಳ್ವಿಕೆ ನಡೆಸಿದ
ಎಲ್ಲ ಸರ್ಕಾರಗಳು ತಮ್ಮ ಕಾಲಘಟ್ಟದಲ್ಲಿ ಅನುದಾನ ಬಿಡುಗಡೆ ಮಾಡಿವೆ. ಪ್ರಸ್ತುತ ರಾಜ್ಯ ಸರ್ಕಾರ ನೀರು ಹರಿಸಲು ನಿರ್ಧರಿಸಿರುವುದು ಉತ್ತಮ ನಡೆ ಆಗಿದೆ. ಆದರೆ, ಯೋಜನೆ
ಪೂರ್ಣಗೊಳಿಸಲು ಮತ್ತು ಕೆಲ ಕಾನೂನು ತೊಡಕುಗಳ ನಿವಾರಣೆಗೆ ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು, ಕೇಂದ್ರ ಬಜೆಟ್‌ನಲ್ಲಿ 2023ರಲ್ಲಿ ಘೋಷಿಸಿದ 5,300 (ಪರಿಷ್ಕೃತ 6,200) ಕೋಟಿ ರೂ.
ಅನುದಾನವನ್ನು ಷರತ್ತು ರಹಿತವಾಗಿ ಬಿಡುಗಡೆಗೊಳಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದ
ಎಲ್ಲ ಪಕ್ಷದ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ತರಲು, ಪ್ರಧಾನಿ ಬಳಿ ನಿಯೋಗ ಕರೆದೊಯ್ಯಲು ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಆಯೋಜಿಸಿ ನಿರ್ಣಯಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅನೇಕ ಸಂಕಷ್ಟಗಳು, ವಿಳಂಬ ನೀತಿ ಮಧ್ಯೆಯೂ ಅತ್ಯಂತ ತಾಳ್ಮೆ ವಹಿಸಿ ಶಾಂತಿಯುತ ಹೋರಾಟದ ಹಾದಿಯಲ್ಲಿ ಸಾಗಿರುವ ಜಿಲ್ಲೆಯ ಜನರ ಪಾಲಿಗೆ ಭದ್ರೆ ನೀರು ಪ್ರಾಯೋಗಿಕವಾಗಿ ಹರಿಸುವ ದಿನ ಸಂಭ್ರಮವನ್ನುಂಟು ಮಾಡಲಿದೆ. ಈ ಸಂಭ್ರಮ ಕೆಲವೇ ದಿನಗಳಿಗೆ ಸೀಮಿತವಾಗದೆ ಚಿತ್ರದುರ್ಗ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವುದು, ತುಂಡು ಭೂಮಿಯನ್ನೂ ಕೈಬಿಡದೆ ಎಲ್ಲ ಕೃಷಿ ಜಮೀನುಗಳಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಹೊಣೆಗಾರಿಕೆ ಆಗಿದೆ.

ಈ ನಿಟ್ಟಿನಲ್ಲಿ ಎಲ್ಲರನ್ನೊಳಗೊಂಡು ಹೋರಾಟವನ್ನು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಎಂದಿನಂತೆ ಮುಂದುವರಿಸಲಿದೆ ಎಂದು ಸಂಚಾಲಕರಾದ ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ಜೋಗಿಮಟ್ಟಿ ಮಹೇಶಬಾಬು, ಮುಖಂಡರಾದ ಆರ್.ಶೇಷಣ್ಣಕುಮಾರ್,
ಕೂನಿಕೆರೆ ರಾಮಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now