ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 24 : ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ವಿರುದ್ದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ವರ್ಗಗಳ ವಿಭಾಗದಿಂದ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿ ಕೇಂದ್ರ ಬಿಜೆಪಿ.ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಲಾಯಿತು.
ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಮದಕರಿನಾಯಕ ಪ್ರತಿಮೆವರೆಗೂ ಸಾಗಿ ರಾಜ್ಯ ಬಿಜೆಪಿ. ಅಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್, ಸಿ.ಟಿ.ರವಿ ವಿರುದ್ದ ಘೋಷಣೆಗಳನ್ನು ಕೂಗಿದರು.
ಪಂಜಿನ ಮೆರವಣಿಗೆಯ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ ಬಿ.ನಾಗೇಂದ್ರರವರ ರಾಜಿನಾಮೆ ಕೇಳಲು ಬಿಜೆಪಿ.ಗೆ ನೈತಿಕತೆಯಿಲ್ಲ. ಬಿ.ಎಸ್.ಯಡಿಯೂರಪ್ಪನವರು ಜೈಲಿಗೆ ಹೋಗಿದ್ದನ್ನು ಬಿಜೆಪಿ.ಯವರು ಮರೆತಂತಿದೆ. ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿರುವುದರ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸದ ಬಿಜೆಪಿ.ಯವರು ವಿನಾ ಕಾರಣ ಬಿ.ನಾಗೇಂದ್ರರವರ ಮೇಲೆ ಇಲ್ಲಸಲ್ಲದ ಆಪಾದನೆ ಹೊರಿಸುತ್ತಿರುವುದು ಸರಿಯಲ್ಲ.
ಜನಾರ್ಧನರೆಡ್ಡಿರವರು ಸಚಿವ ಬಿ.ನಾಗೇಂದ್ರ ವಿರುದ್ದ ವಿಜಯೇಂದ್ರರವರನ್ನು ಎತ್ತಿಕಟ್ಟುತ್ತಿದ್ದಾರೆ. ವಾಲ್ಮೀಕಿ ಪ್ರತಿಮೆ ಉದ್ಘಾಟನೆಗೂ ಕ್ಯಾತೆ ತೆಗೆದು ನಿಲ್ಲಿಸಿದ್ದಾರೆ. ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಬಿ.ನಾಗೇಂದ್ರರವರು ಯಾವುದೆ ಹಗರಣ ನಡೆಸಿಲ್ಲ ಎನ್ನುವುದನ್ನು ಮೊದಲು ಬಿಜೆಪಿ. ನಾಯಕರುಗಳು ಅರ್ಥಮಾಡಿಕೊಳ್ಳಲಿ ಎಂದು ಎಚ್ಚರಿಸಿದರು.
ಬಸವರಾಜ್ ಬಚ್ಚಬೋರನಹಟ್ಟಿ ಮಾತನಾಡಿ ಕಳ್ಳರ ಗುಂಪಿನ ನಾಯಕ ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಜನಾರ್ಧನರೆಡ್ಡಿ ಇವರುಗಳು ಜಿಲ್ಲೆಯಲ್ಲಿ ಎಲ್ಲಿಯೂ ಸಂಚರಿಸಲು ಬಿಡುವುದಿಲ್ಲ. ಅನಗತ್ಯವಾಗಿ ಸಚಿವ ಬಿ.ನಾಗೇಂದ್ರ ರಾಜಿನಾಮೆಗೆ ಬಿಜೆಪಿ ಯವರು ಪಟ್ಟು ಹಿಡಿದಿರುವುದರಲ್ಲಿ ಯಾವುದೇ ಹುರುಳಿಲ್ಲ. ಇದೇ ಪ್ರವೃತ್ತಿ ಮುಂದುವರೆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕಾಗುತ್ತದೆಂದರು.
ದಲಿತ ವಿರೋಧಿ, ರೈತ, ವಿದ್ಯಾರ್ಥಿಗಳ ವಿರೋಧಿ ಬಿಜೆಪಿ.ಯ ಮೊಟ್ಟೆ ಹಗರಣವನ್ನು ರಾಜ್ಯದ ಜನ ಇನ್ನು ಮರೆತಿಲ್ಲ. ಹೀಗಿರುವಾಗ ಕಾಂಗ್ರೆಸ್ನ ಬಿ.ನಾಗೇಂದ್ರ ಏಕೆ ರಾಜಿನಾಮೆ ಕೊಡಬೇಕೆಂದು ಪ್ರಶ್ನಿಸಿದರು? ಕಾಂಗ್ರೆಸ್ ಕಿಸಾನ್ ಸೆಲ್ ವಿಭಾಗದ ಅಧ್ಯಕ್ಷ ಎ.ನಾಗರಾಜ್, ಪ್ರಕಾಶ್ರಾಮನಾಯ್ಕ, ಹೊಳಲ್ಕೆರೆ ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್, ಶ್ರೀನಿವಾಸ್, ಶಿವಕುಮಾರಸ್ವಾಮಿ, ಗುರುಸ್ವಾಮಿ ಇನ್ನು ಅನೇಕರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.










