ಬೆಂಗಳೂರು. ಆಗಸ್ಟ್.24: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಂ-ಕಿಸಾನ್) ಯೋಜನೆಯಡಿ ಪ್ರೋತ್ಸಾಹಧನವನ್ನು ನಿರಂತರವಾಗಿ ಪಡೆಯಲು ಎಲ್ಲಾ ಅರ್ಹ ರೈತರು ಪ್ರತಿ ವರ್ಷ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, 2019 ರ ಫೆಬ್ರವರಿ 1ರ ಪೂರ್ವದಲ್ಲಿ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ಸಣ್ಣ, ಅತಿಸಣ್ಣ, ಮಧ್ಯಮ ಮತ್ತು ದೊಡ್ಡ ರೈತ ಕುಟುಂಬಗಳಿಗೆ ವರ್ಷಕ್ಕೆ ರೂ. 6,000/- ಪ್ರೋತ್ಸಾಹಧನವನ್ನು ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ (ತಲಾ ರೂ.2,000/-) ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಹಣ ಪಾವತಿಯನ್ನು ಮುಂದುವರಿಸಲು ‘ಫ್ರೂಟ್ಸ್’ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಅಗ್ರಿಸ್ಟ್ಯಾಕ್ ಯೋಜನೆ ಅಡಿ ಗುರುತಿನ ಸಂಖ್ಯೆಯನ್ನು ಸೃಜಿಸುವುದು ಕಡ್ಡಾಯಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ‘PMKISAN e-KYC through FaceRecognition App’ ಮೂಲಕ ಮುಖ (ಫೇಸ್) ದೃಢೀಕರಣದ ಆಧಾರದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ಆದ್ದರಿಂದ, ಫಲಾನುಭವಿ ರೈತರು ಕೂಡಲೇ ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಹತ್ತಿರದ ಸಿಎಸ್‌ಸಿ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಯೋಜನೆಯ ಸೌಲಭ್ಯವನ್ನು ಮುಂದುವರಿಸಬೇಕಾಗಿ ಕೋರಲಾಗಿದೆ.









