ಶಿವಮೊಗ್ಗ.ಆಗಸ್ಟ್.24: ರಾಜ್ಯದ ಎಲ್ಲಾ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಅನವಟ್ಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೆಪಿಎಸ್ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಅನುಕೂಲಕ್ಕಾಗಿ ಸ್ವಂತ ಬಸ್ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ ಎಂದು ಹೇಳಿದರು. ಈ ಬಸ್ಗಳು ಮಕ್ಕಳನ್ನು ಮನೆಗಳಿಂದ ಶಾಲೆಗೆ ಕರೆತಂದು, ಶಾಲೆ ಮುಗಿದ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ ಹೊಂದಿರಲಿವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಿಂದ ಶಾಲಾ-ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಸಾರಿಗೆ ಸಮಸ್ಯೆ ಎದುರಿಸುತ್ತಿರುವುದನ್ನು ಸರ್ಕಾರ ಗಮನಿಸಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸದ್ಯಕ್ಕೆ ಕೆಎಸ್ಆರ್ಟಿಸಿ ಬಸ್ಗಳ ಮೂಲಕ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಇದೇ ವೇಳೆ, ರಾಜ್ಯದಲ್ಲಿ ಸುಮಾರು ₹4,000 ಕೋಟಿ ವೆಚ್ಚದಲ್ಲಿ ಹೊಸದಾಗಿ 1,000 ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸುರಕ್ಷಿತ ಹಾಗೂ ಸುಗಮ ಸಾರಿಗೆ ವ್ಯವಸ್ಥೆ ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.









