ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಆಗಸ್ಟ್. 22 : ಪ್ರತಿಭೆಯ ಹಿಂದೆ ತಂದೆ-ತಾಯಿಗಳು, ಗುರು-ಹಿರಿಯರ ಪರಿಶ್ರಮವಿದೆ. ವಿದ್ಯೆ ಎನ್ನುವುದು ತಪಸ್ಸಿದ್ದಂತೆ. ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಟ್ಟು ಓದಿದರೆ ಮುಂದೆ ಸುಖವಾಗಿರುತ್ತೀರ ಎಂದು ನಿವೃತ್ತ ಪ್ರಾಂಶುಪಾಲರಾದ ಬಿ.ಸಿ.ಶಾಂತರಾಜ್ ತಿಳಿಸಿದರು.
ಕುಂಚಿಗ ವೀರಶೈವ ಲಿಂಗಾಯಿತ ಸಮಾಜ(ರಿ) ಹಾಗೂ ಉತ್ಥಾನ ಟ್ರಸ್ಟ್ ವತಿಯಿಂದ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯೆಗಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಶಿಕ್ಷಣದ ಜೊತೆ ಕೃಷಿಯ ಮಹತ್ವವನ್ನು ನೀವುಗಳು ತಿಳಿದುಕೊಂಡಿರಬೇಕು. ಪದವಿ ಪಡೆದ ತಕ್ಷಣ ಕೃಷಿಗೂ ನಮಗೂ ಸಂಬಂಧವಿಲ್ಲವೇನೋ ಎನ್ನುವ ರೀತಿಯಲ್ಲಿರುವುದು ಸರಿಯಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದರಿಂದ ಮತ್ತೊಬ್ಬರಿಗೆ ಪ್ರೇರಣೆ ನೀಡಿದಂತಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸುಖ-ವಿದ್ಯೆ ಎರಡು ಬೇಕೆಂದರೆ ನಕಲಿಗಳಾಗುತ್ತೀರ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ವ್ಯಾಪಾರಿಕರಣವಾಗುತ್ತಿದೆ ಎಂದು ವಿಷಾಧಿಸಿದರು.
ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಸೇರಿದಂತೆ ಅನೇಕ ಸಾಧಕರು ಕಷ್ಟಪಟ್ಟು ಓದಿದ್ದಾರೆ. ಅಂತಹವರ ಹಾದಿಯಲ್ಲಿ ಇಂದಿನ ವಿದ್ಯಾರ್ಥಿಗಳು ಸಾಗಬೇಕು. ವಿದ್ಯಾರ್ಥಿಗಳಿಗೆ ಕ್ಷಣ ಕ್ಷಣವೂ ಅಮೂಲ್ಯವಾದುದು. ಮೊಬೈಲ್‍ನಲ್ಲಿ ಸಮಯವನ್ನು ವ್ಯರ್ಥವಾಗಿ ಕಳೆಯುವುದರ ಬದಲು ಓದಿನ ಕಡೆ ಗಮನ ಕೊಡಿ. ಸಮಾಜದಲ್ಲಿ ವ್ಯಸನಗಳಿಗೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ಅದಕ್ಕಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಬಿ.ಸಿ.ಶಾಂತರಾಜ್ ಕರೆ ನೀಡಿದರು.
ಮನಸ್ಸು ಮನಸ್ಸುಗಳ ನಡುವೆ ಗೋಡೆಯನ್ನು ಕಟ್ಟಿಕೊಳ್ಳಬಾರದು. ಸೃಷ್ಠಿಯನ್ನು ಅರ್ಥಮಾಡಿಕೊಂಡು ಬದುಕಬೇಕು. ನಿರುದ್ಯೋಗ ಎಲ್ಲಾ ಕಾಲದಲ್ಲಿಯೂ ಇದೆ. ಆದ್ದರಿಂದ ಸರ್ಕಾರಿ ನೌಕರಿಯನ್ನೇ ನೆಚ್ಚಿಕೊಂಡು ಕೂರಬಾರದು. ಸ್ವಂತ ಉದ್ದಿಮೆ ಮಾಡುವ ಮೂಲಕ ಸ್ವಾವಲಂಭಿಗಳಾಗಿ ಬದುಕುವುದನ್ನು ಕಲಿಯಬೇಕು. ಅವಮಾನ ತುಂಬಾ ಕೆಟ್ಟದ್ದು, ಶಿಕ್ಷಣದ ಜೊತೆ ಸಂಸ್ಕಾರ ಕಲಿಯಿರಿ. ಸಮಾಜದ ಸಂಘಟನೆಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕುಂಚಿಗ ವೀರಶೈವ ಲಿಂಗಾಯಿತ ಸಮಾಜದ ನಿರ್ದೇಶಕ ಎಲ್.ಬಿ.ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕಳೆದ ಹದಿನೈದು ವರ್ಷಗಳಿಂದಲೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕರಿಸಲಾಗುತ್ತಿದೆ. ಸಮಾಜದಲ್ಲಿ ಕೆಲವರ ಪಿತೂರಿ ನಡುವೆಯೂ ಕಟ್ಟಡ ಕಟ್ಟಿದ್ದೇವೆ. ಅಭಿವೃದ್ದಿಗೆ ನಮ್ಮವರೆ ಕೆಲವರು ಅಡ್ಡಿಪಡಿಸುತ್ತಿರುವುದು ಮನಸ್ಸಿಗೆ ನೋವುಂಟು ಮಾಡುತ್ತದೆ. ಆರಂಭದಲ್ಲಿ ಎರಡು ಮೂರು ಜನರನ್ನಿಟ್ಟುಕೊಂಡು ಸಮಾಜವನ್ನು ಕಟ್ಟಿದ್ದೇನೆ. ಪ್ರತಿಯೊಂದಕ್ಕೂ ಲೆಕ್ಕ ಇಡಲಾಗಿದೆ. ಗುಣ ಮಟ್ಟದ ಬಿಲ್ಡಿಂಗ್ ಕಟ್ಟೋಣ. ಎಲ್ಲರೂ ಸಹಕರಿಸಿ ಎಂದು ವಿನಂತಿಸಿದರು.
ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ. ಸಮಾಜ ಉದ್ದಾರವಾದರೆ ದೇಶ ಉದ್ದಾರವಾದಂತೆ ಎಂದು ಕುಂಚಿಗ ವೀರಶೈವ ಲಿಂಗಾಯಿತ ಸಮಾಜದವರಲ್ಲಿ ವಿನಂತಿಸಿದರು.
ಕುಂಚಿಗ ವೀರಶೈವ ಲಿಂಗಾಯಿತ ಸಮಾಜದ ಕಾರ್ಯದರ್ಶಿ ಹೆಚ್.ಕುಬೇರಪ್ಪ ದಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾಜದ ಆಡಳಿತ ಮಂಡಳಿ ಖಜಾಂಚಿ ಕೆ.ಹೆಚ್.ಮುರುಗೇಶಗೌಡ್ರು, ನಿವೃತ್ತ ಡಿ.ವೈ.ಎಸ್ಪಿ. ಎಸ್.ಬಸವರಾಜಪ್ಪ, ಯು.ಪಾರ್ವತಮ್ಮ, ಆಡನೂರು ಸ್ವಾಮಿ ಇವರುಗಳು ವೇದಿಕೆಯಲ್ಲಿದ್ದರು.
ದಗ್ಗೆಶಿವಪ್ರಕಾಶ್, ಎನ್.ಎಸ್.ಲವಕುಮಾರ್ ಹಾಗೂ ಕುಂಚಿಗ ವೀರಶೈವ ಲಿಂಗಾಯಿತ ಸಮಾಜದ ಅನೇಕರು ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಿದ್ದರು.











