ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಆಗಸ್ಟ್. 22 : ದಿನ ನಿತ್ಯವೂ ನಗರವನ್ನು ಶುಚಿಗೊಳಿಸುವ ಪೌರ ಕಾರ್ಮಿಕರ ಕೆಲಸ ಸಮಾಜದಲ್ಲಿನ ಎಲ್ಲಾ ವೃತ್ತಿಗಿಂತಲೂ ಅತ್ಯಂತ ಪವಿತ್ರವಾದುದು. ನಿಮ್ಮ ನೋವನ್ನು ಅರ್ಥಮಾಡಿಕೊಂಡಿದ್ದೇನೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಹೇಳಿದರು.
ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಪೌರ ಕಾರ್ಮಿಕರಿಗೆ ಬಟ್ಟಗಳನ್ನು ವಿತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ಮಾತನಾಡಿದ ಅವರು ಅತ್ಯಂತ ನಿಕೃಷ್ಟ ಹಾಗೂ ತಳಮಟ್ಟದ ಕೆಲಸ ನಿಮ್ಮದು. ಹೋರಾಟದ ಮೂಲಕ ಸರ್ಕಾರದಿಂದ ಆಗುವ ಕೆಲವು ಬದಲಾವಣೆಗಳನ್ನು ಅನುಷ್ಟಾನಕ್ಕೆ ತರಲು ನಾನು ಸದಾ ಸಿದ್ದನಿದ್ದೇನೆ. ಹುಟ್ಟುಹಬ್ಬವೆಂದರೆ ಎಲ್ಲರೂ ವಿಜೃಂಭಣೆಯಿಂದ ಆಚರಿಸಿಕೊಳ್ಳುವುದನ್ನು ನೋಡುತ್ತಿದ್ದೇನೆ. ನಿಮ್ಮೊಂದಿಗೆ ನಾನು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವುದು ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಯಾವುದೆ ಕಾರಣಕ್ಕೂ ನೀವುಗಳು ಕೀಳರಿಮೆಯನ್ನಿಟ್ಟುಕೊಳ್ಳಬೇಡಿ. ನಿಮ್ಮ ಅನೇಕ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪೌರಾಡಳಿತ ಸಚಿವರ ಜೊತೆ ಚರ್ಚಿಸುತ್ತೇನೆ. ನಾನು ಅಧಿಕಾರದಲ್ಲಿರುವುದರೊಳಗೆ ನಿಮಗೆ ನಿವೇಶನಗಳನ್ನು ಕೊಡಿಸುತ್ತೇನೆಂದು ಪಿ.ರಘು ಪೌರ ಕಾರ್ಮಿಕರಿಗೆ ಭರವಸೆ ನೀಡಿದರು.
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ ಅಯ್ಯಪ್ಪನ ಸನ್ನಿಧಿಯಲ್ಲಿ ಪಿ.ರಘುರವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಅರ್ಥಪೂರ್ಣ.
ರಾಜ್ಯದ ಜನರಿಗೆ ನಿಮ್ಮ ಸೇವೆ ಸಿಗಬೇಕು. ಭಗವಂತ ನಿಮಗೆ ಹೆಚ್ಚಿನ ಶಕ್ತಿ ಹಾಗೂ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿಯ ಶರಣ್‍ಕುಮಾರ್ ಮಾತನಾಡುತ್ತ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಸದಾ ಜನರ ಜೊತೆಯಲ್ಲಿರುತ್ತಾರೆ. ಸರಳ ಸಜ್ಜನಿಕೆಯ ಸ್ವಭಾವ ಅವರದು. ಹಾಗಾಗಿ ಪೌರ ಕಾರ್ಮಿಕರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಅವರ ದೊಡ್ಡತನ ತೋರಿಸುತ್ತದೆ. ಅಯ್ಯಪ್ಪನ ಸನ್ನಿಧಾನಕ್ಕೆ ಬರುವವರು ಉನ್ನತ ಸ್ಥಾನಕ್ಕೆ ಏರುತ್ತಾರೆ. ಅದೇ ರೀತಿ ಪಿ.ರಘು ವಿಧಾನಸಭೆ ಪ್ರವೇಶಿಸಿ ದಲಿತರ ಕಣ್ಣೀರೊರೆಸುವಂತಾಗಲಿ ಎಂದು ಹಾರೈಸಿದರು.
ಪತ್ರಕರ್ತ ರವಿ ಮಲ್ಲಾಪುರ ಮಾತನಾಡಿ ಪಿ.ರಘು ಭರವಸೆಯ ನಾಯಕ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಸೇವೆ ಮಾಡುವ ಅಧಿಕಾರ ಸಿಗಲಿ. ಪೌರ ಕಾರ್ಮಿಕರ ಜೊತೆ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿರುವುದನ್ನು ನೋಡಿದರೆ ಅವರಿಗೆ ಪೌರ ಕಾರ್ಮಿಕರ ಮೇಲೆ ಎಷ್ಟೊಂದು ಗೌರವವಿದೆ ಎನ್ನುವುದನ್ನು ತೋರಿಸುತ್ತದೆಂದು ಗುಣಗಾನ ಮಾಡಿದರು.
ಭೋವಿ ಸಮಾಜದ ತಿಮ್ಮಣ್ಣ, ಭಾರತೀಯ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬೀರಾವರ ಪ್ರಕಾಶ್, ಆಕಾಶವಾಣಿಯ ನವೀನ್ ಮಸ್ಕಲ್, ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಕೆ.ಟಿ.ಶಿವಕುಮಾರ್‍ರವರ ಕುಟುಂಬದವರು ಹಾಗೂ ಪಿ.ರಘುರವರ ಅಪಾರ ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಪಿ.ರಘುರವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು.











