ರಾಜ್ಯದ ಆರ್ಥಿಕವಾಗಿ ಹಿಂದುಳಿದ ಹಾಗೂ ಸಂತಾನಹೀನತೆಯಿಂದ ಬಳಲುತ್ತಿರುವ ದಂಪತಿಗಳಿಗೆ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಆಯುಷ್ಮಾನ್ ಭಾರತ್-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB-ArK) ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ IVF ಸೇರಿದಂತೆ ವಿವಿಧ ಸಂತಾನೋತ್ಪತ್ತಿ ಚಿಕಿತ್ಸೆಯನ್ನು ಒದಗಿಸಲು ಸರ್ಕಾರ ಮುಂದಾಗಿದೆ.ಇನ್ಮುಂದೆ IVF (In Vitro Fertilisation), ICSI (Intracytoplasmic Sperm Injection) ಹಾಗೂ FET (Frozen Embryo Transfer) ಸೇರಿದಂತೆ ಹಲವು ಆಧುನಿಕ ಸಂತಾನೋತ್ಪತ್ತಿ ಚಿಕಿತ್ಸೆಗಳು ಯೋಜನೆಯಡಿ ಲಭ್ಯವಾಗಲಿವೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಡಾ. ಧನಂಜಯ್ ಸರ್ಜಿ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಈ ಮಾಹಿತಿ ತಿಳಿಸಿದ್ದಾರೆ.
ಯೋಜನೆಯಡಿ BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ ನಿಯಮಾನುಸಾರ ಉಚಿತ ಚಿಕಿತ್ಸೆ ದೊರೆಯಲಿದೆ. APL ಕಾರ್ಡ್‌ದಾರರಿಗೆ ರಿಯಾಯಿತಿ ದರದಲ್ಲಿ IVF ಸೇರಿದಂತೆ ಅಗತ್ಯ ಸಂತಾನೋತ್ಪತ್ತಿ ಚಿಕಿತ್ಸೆಗಳು ಲಭ್ಯವಾಗಲಿವೆ.ಮೊದಲ ಹಂತದಲ್ಲಿ 120 ಮಂದಿಗೆ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಗುಣಮಟ್ಟದ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ಯಾರು ಅರ್ಹರು?
ಈ ಸೌಲಭ್ಯ ಪಡೆಯಲು ದಂಪತಿಗಳಿಗೆ ಸ್ವಂತ ಮಗು ಇರಬಾರದು. ಅರ್ಜಿದಾರರ ವಯಸ್ಸು 21ರಿಂದ 55 ವರ್ಷದೊಳಗಿರಬೇಕು. ಚಿಕಿತ್ಸೆ ಪಡೆಯಲು ಬಯಸುವ ದಂಪತಿಗಳು ಮೊದಲು ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ವಿಭಾಗದಿಂದ ಶಿಫಾರಸು ಪತ್ರ ಪಡೆಯುವುದು ಕಡ್ಡಾಯವಾಗಿದೆ.

ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ?
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಅಡಿಯಲ್ಲಿ ನೋಂದಾಯಿತ ಸರ್ಕಾರಿ ಹಾಗೂ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸಾ ಸೌಲಭ್ಯ ದೊರೆಯಲಿದೆ.
ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿರುವ ‘ಆಯುಷ್ಮಾನ್ ಮಿತ್ರ’ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಸರ್ಕಾರ ತಿಳಿಸಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಸಂತಾನಹೀನ ದಂಪತಿಗಳಿಗೆ ದುಬಾರಿ ಸಂತಾನೋತ್ಪತ್ತಿ ಚಿಕಿತ್ಸೆಯ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ಈ ಯೋಜನೆ ಸಹಕಾರಿಯಾಗುವ ನಿರೀಕ್ಷೆಯಿದೆ.








