ದಾವಣಗೆರೆಯಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿಗೆ ಹೋಗಿ ಬರುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ಹೊರಟಿದ್ದ ರಮೇಶ್ ಕುಮಾರ್, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಇದೀಗ ನಾಪತ್ತೆಯಾಗಿದ್ದಾರೆ. ನಾಲ್ವರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿರುವುದು ಕುಟುಂಬಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ದಾವಣಗೆರೆ ನಗರದ ಬನಶಂಕರಿ ಬಡಾವಣೆಯ ನಿವಾಸಿಗಳಾದ ರಮೇಶ್ ಕುಮಾರ್ (38), ಪತ್ನಿ ಜಯಶೀಲ (36), ಪುತ್ರ ಹಿತೇಶ್ (9) ಹಾಗೂ ಮೂರು ವರ್ಷದ ಪುತ್ರಿ ಪ್ರೇರಣ ನಾಪತ್ತೆಯಾದವರು. ಮೂಲತಃ ದಾವಣಗೆರೆ ತಾಲೂಕಿನ ಶ್ಯಾಗಲೆ ಗ್ರಾಮದವರಾದ ರಮೇಶ್ ಕುಮಾರ್, ಷೇರು ಮಾರುಕಟ್ಟೆ ಹೂಡಿಕೆ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.
ರಮೇಶ್ ಕುಮಾರ್ ಅವರು ಸ್ವಂತ ಹಣದ ಜತೆಗೆ ಸಾರ್ವಜನಿಕರಿಂದಲೂ ಹಣ ಪಡೆದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಇತ್ತೀಚೆಗೆ ಉಂಟಾದ ನಷ್ಟದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಆರ್ಥಿಕ ಸಮಸ್ಯೆಯಿಂದಾಗಿ ಕುಟುಂಬ ಸಮೇತ ಮನೆ ತೊರೆದಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ.ಆಗಸ್ಟ್ 14ರಂದು ರಮೇಶ್ ಕುಮಾರ್ ತಮ್ಮ ಪೋಷಕರಿಗೆ ಕರೆ ಮಾಡಿ ವೈಯಕ್ತಿಕ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿ ವಾಪಸ್ ಬರುವುದಾಗಿ ತಿಳಿಸಿದ್ದರು. ಬಳಿಕ ಕಾರು ಅಥವಾ ಬೈಕ್ ಬಳಸದೆ, ಮನೆಯ ಬಳಿಯೇ ವಾಹನಗಳನ್ನು ನಿಲ್ಲಿಸಿ ಆಟೋ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದ್ದರು ಎನ್ನಲಾಗಿದೆ.
ಬೆಂಗಳೂರಿಗೆ ತೆರಳಿದ ಬಳಿಕ ಕುಟುಂಬದ ನಾಲ್ವರು ವಾಪಸ್ ಮನೆಗೆ ಬಂದಿಲ್ಲ. ಅವರೊಂದಿಗೆ ಸಂಪರ್ಕಿಸಲು ಕುಟುಂಬಸ್ಥರು ಹಲವು ಬಾರಿ ಪ್ರಯತ್ನಿಸಿದರೂ ಎಲ್ಲರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿರುವುದು ಕಂಡುಬಂದಿದೆ.
ನಾಲ್ಕೈದು ದಿನ ಕಳೆದರೂ ಕುಟುಂಬದ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಹಾಗೂ ಸಂಬಂಧಿಕರು ದಾವಣಗೆರೆ, ಬೆಂಗಳೂರು ಸೇರಿದಂತೆ ಹಲವು ಕಡೆ ಹುಡುಕಾಟ ನಡೆಸಿದ್ದಾರೆ. ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ವಿದ್ಯಾನಗರ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ವಿದ್ಯಾನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರಮೇಶ್ ಕುಮಾರ್ ಅವರ ಮೊಬೈಲ್‌ನ ಕೊನೆಯ ನೆಟ್‌ವರ್ಕ್ ಲೊಕೇಶನ್ ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದ್ದು, ದಾವಣಗೆರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.ಕುಟುಂಬದ ನಾಲ್ವರು ಎಲ್ಲಿಗೆ ತೆರಳಿದ್ದಾರೆ, ಅವರ ಮೊಬೈಲ್‌ಗಳು ಏಕೆ ಸ್ವಿಚ್‌ಆಫ್ ಆಗಿವೆ ಹಾಗೂ ನಾಪತ್ತೆಗೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









