ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಆ. 20 : ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ / ಎಸ್ಟಿ ನೌಕರರ ಸಮನ್ವಯ ಸಮಿತಿ(ರಿ), ಕೇಂದ್ರ ಸಮಿತಿ, ಬೆಂಗಳೂರು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ / ಎಸ್ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಸಮಾವೇಶ ನಾಳೆ (ಆ.21, ಶುಕ್ರವಾರ) ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಿ ಎಸ್ಸಿ / ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಪ್ರದೀಪ್ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ 7.75 ಲಕ್ಷ ಹುದ್ದೆಗಳ ಪೈಕಿ ಸುಮಾರು 4 ಲಕ್ಷ ಸರ್ಕಾರಿ ನೌಕರರು ಮಾತ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿ, ಅಂದಾಜು 20 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಪಂಗಡಗಳ ನೌಕರರು ವಿವಿಧ ಇಲಾಖೆಗಳಲ್ಲಿ, ವಿವಿಧ ಹಂತಗಳಲ್ಲಿ ಸರ್ಕಾರದ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಸುಮಾರು 2,84,724 ಹೆಚ್ಚು ಹುದ್ದೆಗಳು ಖಾಲಿಯಿದ್ದು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು 24,000 ಬ್ಯಾಕ್‍ಲಾಗ್ ಹುದ್ದೆಗಳು ಭರ್ತಿ ಮಾಡದೇ ಖಾಲಿ ಉಳಿದುಕೊಂಡಿರುತ್ತವೆ. ಸ್ವಾತಂತ್ರ್ಯ ದೊರೆತು 79 ವರ್ಷಗಳು ಮುಕ್ತಾಯಗೊಳ್ಳುವ ಹಂತಕ್ಕೆ ತಲುಪಿದ್ದರೂ ಇನ್ನೂ ಪರಿಶಿಷ್ಟ ಜಾತಿ/ಪಂಗಡದ ನೌಕರರಿಗೆ ಮೀಸಲಿರುವ 17:7 ಪ್ರಮಾಣ ಮೀಸಲಾತಿಯನ್ನು ನೀಡದಿರುವುದು ಖಂಡನೀಯವಾಗಿದೆ.
ಪ್ರಸ್ತುತ ಇರುವ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್ಸಿ/ಎಸ್ಟಿ ನೌಕರರು ದಿನನಿತ್ಯ ಜಾತಿಯ ತಾರತಮ್ಯದಿಂದಾಗಿ ಅನುಭವಿಸುತ್ತಿರುವ ಮಾನಸಿಕ ಹಿಂಸೆಗಳನ್ನು ಖಂಡಿತಾ ವರ್ಣಿಸಲು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಮತ್ತು ಸರ್ಕಾರದ ಅದೇಶಗಳನುಸಾರ ಸೌಲಭ್ಯಗಳು ಲಭಿಸುತ್ತಿದೆಯೇ ಎನ್ನುವುದು ಮೂಲಭೂತ ಪ್ರಶ್ನೆಯಾಗಿದೆ. ಇದಕ್ಕೆ ಆಳುವ ವರ್ಗ ಮತ್ತು ಕೆಲವು ಜಾತಿಯ ಮನಸ್ಸಿನ ಅಧಿಕಾರಿಗಳ ತಾತ್ಸಾರ ಮತ್ತು ನಿರ್ಲಕ್ಷ್ಯ ಮನೋಭಾವನೆ ಮೇಲ್ನೋಟಕ್ಕೆ ಕಾಣುವಂತದ್ದು, ಇದರಿಂದಾಗಿ ಎಸ್ಸಿ/ಎಸ್ಪಿ ನೌಕರರಿಗೆ ಕಾನೂನುಬದ್ದವಾಗಿ ಲಭಿಸಬೇಕಾದ ಬಡ್ತಿ ಮುಂತಾದ ಸೌಲಭ್ಯಗಳು ಮರೀಚಿಕೆಯಾಗುತ್ತಿವೆ. ನಿಯಮಾನುಸಾರ, ಇಲಾಖೆಗಳೇ ಮಾಡಿಕೊಂಡಿರುವ ವೃಂದ ಮತ್ತು ನೇಮಕಾತಿ ನಿಯಮಗಳನುಸಾರ ಅರ್ಹತೆ ಮತ್ತು ಜೇಷ್ಠತೆ ಇದ್ದಾಗ್ಯೂ ಜಾತಿಯಾಧಾರಿತ. ವ್ಯವಸ್ಥೆಯೊಳಗೆ ಎಸ್ಸಿ/ಎಸ್ಟಿ ನೌಕರರು ವಂಚನೆಗೆ ಒಳಗಾಗುತ್ತಿದ್ದಾರೆ ಎಂದರು.
ಚಿತ್ರದುರ್ಗ ಜಿಲ್ಲಾ ಉಪಾದ್ಯಕ್ಷರಾದ ಟಿ. ದೇವರಾಜ್ ಮಾತನಾಡಿ, ರಾಜ್ಯ ಸರ್ಕಾರವು ಪವಿತ್ರ-2 ಪ್ರಕರಣದ ತೀರ್ಪಿನ ನಂತರವೂ ಎಸ್ಸಿ/ಎಸ್ಪಿ ನೌಕರರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಕೆಲ ಅವಕಾಶವಾದಿ ಅಧಿಕಾರಿಗಳ ತಾತ್ಸಾರ ಮತ್ತು ನಿರ್ಲಕ್ಷ್ಯ ಮನೋಭಾವನೆಯಿಂದ ವಿವಿಧ ಇಲಾಖೆಗಳಲ್ಲಿ ಎಸ್ಸಿ/ಎಸ್ಟಿ ನೌಕರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಇನ್ನೂ ಮೀನಾಮೇಷವನ್ನು ಮಾಡುತ್ತಿದ್ದಾರೆ. ಇದನ್ನು ಪ್ರಜ್ಞಾವಂತರಾಗಿರುವ ನಾವು ತೀವ್ರವಾಗಿ ಖಂಡಿಸ ಬೇಕಾಗಿದೆ. ಈಗ ನಾವು ಹಿಂದೆಂದಿಗಿಂತಲೂ ಹೆಚ್ಚು ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ. ಆಗ ಮಾತ್ರ ನಮ್ಮ ಸಂವಿಧಾನ ಮತ್ತು ನಮಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿ, ಮುಂದಿನ ಪೀಳಿಗೆಯ ರಕ್ಷಣೆಯನ್ನು ಮಾಡಿದಂತಾ ಗುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ, ಕನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯು ರಾಜ್ಯದ ಎಸ್ಸಿ/ಎಸ್ಪಿ ನೌಕರರ ಐಕ್ಯತೆ ಪ್ರದರ್ಶನ ಮಾಡುವ ಸಲುವಾಗಿ ಮತ್ತು ನಮ್ಮ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಸಲ್ಲಿಸುವ ಉದ್ದೇಶದಿಂದ ಆಗಸ್ಟ್ 28, 2026 ಶುಕ್ರವಾರದಂದು ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ್ ಪ್ಯಾಲೆಸ್(ಗೇಟ್‍ನಂ.8)ರಲ್ಲಿ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶವನ್ನು ಹಮ್ಮಿಕೊಂಡಿದ್ದು, ಸದರಿ ಸಮಾವೇಶವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ ಅಧ್ಯಕ್ಷತೆ ವಹಿಸಲಿದ್ದು, ನಿಕಟಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ದಿಕ್ಕೂಚಿ ನುಡಿಗಳನ್ನು ನುಡಿಯಲಿದ್ದಾರೆ. ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್.ಮುನಿಯಪ್ಪನವರು, ಗೃಹಸಚಿವರಾದ ಪ್ರಿಯಾಂಕ್ ಖರ್ಗೆ ಸೇರಿದಂತೆ ಸರ್ಕಾರದ ಸಚಿವರುಗಳು, ಶಾಸಕರುಗಳು ಮತ್ತು ವಿರೋಧ ಪಕ್ಷದ ನಾಯಕರು ನೇತೃತ್ವ ವಹಿಸಲಿದ್ದು, ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಪ್ರಗತಿಪರ ಸ್ವಾಮೀಜಿಗಳು, ಪ್ರಗತಿಪರ ಚಿಂತಕರುಗಳು ಭಾಗವಹಿಸಿ ಶೋಷಿತ ಸಮುದಾಯದ ನೌಕರರ ಸಾಮಾಜಿಕ ಜವಾಬ್ದಾರಿ ಕುರಿತಂತೆ ಮಾರ್ಗದರ್ಶನ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ‘ಸಂವಿಧಾನದ ಆಶಯಗಳು; ಎಸ್ಸಿ/ಎಸ್ ನೌಕರರು ಮತ್ತು ಅಧಿಕಾರಿಗಳ ಜವಾಬ್ದಾರಿ’ ವಿಷಯ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಈ ಐಕ್ಯತಾ ಸಮಾವೇಶದಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಎಸ್ಸಿ/ಎಸ್ಪಿ ನೌಕರ ಸಂಘಟನೆಯ ಮುಖಂಡರುಗಳು ಭಾಗವಹಿಸಲಿದ್ದಾರೆ.
ಜಿಲ್ಲಾಧ್ಯಕ್ಷರಾದ ಹರೀಶ್ ಎಸ್,ಎಲ್. ಸಂಘಟನಾ ಕಾರ್ಯದರ್ಶಿ, ತಿಪ್ಪಸ್ವಾಮಿ ಗೌರವಾದ್ಯಕ್ಷರಾದ ಪರಶು ರಾಮ್ ರಂಗಪ್ಪ ನರಸಿಂಹಪ್ಪ ಉಪಸ್ಥಿತರಿದ್ದರು.











