ಮಹಾಬಲಿಪುರಂ : ತಮಿಳುನಾಡಿನ ಮಹಾಬಲಿಪುರಂನಲ್ಲಿ ಸನ್ಮಾನ್ಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಗವಹಿಸಿದರು.
ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖಾಂಶಗಳು ಹೀಗಿವೆ.
ದೇಶದ ಆರ್ಥಿಕತೆಗೆ ಕರ್ನಾಟಕ ಹಾಗೂ ದಕ್ಷಿಣ ಭಾರತದ ಕೊಡುಗೆ:
ದೇಶದ ಶೇ. 20ರಷ್ಟು ಜನಸಂಖ್ಯೆಯುಳ್ಳ ದಕ್ಷಿಣ ಭಾರತದ 5 ರಾಜ್ಯಗಳು, ಭಾರತದ ಜಿಡಿಪಿಗೆ ಶೇ. 33ರಷ್ಟು (ಪ್ರತಿ 3 ರೂಪಾಯಿಯಲ್ಲಿ 1 ರೂ.) ಕೊಡುಗೆ ನೀಡುತ್ತಿವೆ. ದೇಶದ ಪ್ರಮುಖ ಚಾಲಕ ಶಕ್ತಿಯಾಗಿರುವ ಕರ್ನಾಟಕವು ಶೇ. 5.5ರಷ್ಟು ಜನಸಂಖ್ಯೆಯೊಂದಿಗೆ ದೇಶದ ಜಿಡಿಪಿಗೆ ಶೇ. 9ರಷ್ಟು ಪಾಲು ನೀಡುತ್ತಿದೆ. ಅಲ್ಲದೆ, ದೇಶದ ಒಟ್ಟು ಸಾಫ್ಟ್‌ವೇರ್ ರಫ್ತಿನಲ್ಲಿ ಶೇ. 42, ವಿದೇಶಿ ನೇರ ಬಂಡವಾಳದಲ್ಲಿ (FDI) ಶೇ. 21ಕ್ಕಿಂತ ಹೆಚ್ಚು, ಏರೋಸ್ಪೇಸ್ ಉದ್ಯಮದಲ್ಲಿ ಶೇ. 60, ಕಾಫಿ ಉತ್ಪಾದನೆಯಲ್ಲಿ ಶೇ. 70 ಹಾಗೂ ಸಂಸ್ಕರಿತ ಘರ್ಕಿನ್(ಸಣ್ಣ ಸೌತೆಕಾಯಿ) ರಫ್ತಿನಲ್ಲಿ ಶೇ. 90ರಷ್ಟು ಪಾಲನ್ನು ಹೊಂದಿರುವ ಕರ್ನಾಟಕವು 1,100 ಜಾಗತಿಕ ಸಾಮರ್ಥ್ಯ ಕೇಂದ್ರಗಳೊಂದಿಗೆ (GCCs) ಮುಂಚೂಣಿಯಲ್ಲಿದ್ದು, ಬೆಂಗಳೂರು ವಿಶ್ವದ ಅಗ್ರ ಐದು ಎಐ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಜಿಎಸ್‌ಟಿ ಮತ್ತು ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ.
ಹಣಕಾಸು ಮತ್ತು ಅನುದಾನದ ಬೇಡಿಕೆಗಳು:
* 15ನೇ ಹಣಕಾಸು ಆಯೋಗದಲ್ಲಿ ವಿಭಜಿಸಬಹುದಾದ ತೆರಿಗೆ ಪಾಲಿನಲ್ಲಿ ಕರ್ನಾಟಕದ ಪಾಲು ಶೇ. 4.7ರಿಂದ ಶೇ. 3.6ಕ್ಕೆ ಇಳಿಕೆಯಾಗಿದ್ದರಿಂದ ಉಂಟಾದ ₹65,000 ಕೋಟಿ ನಷ್ಟವನ್ನು ಸರಿಪಡಿಸಿ, ಪಾಲನ್ನು ಪೂರ್ಣವಾಗಿ ಶೇ. 4.7ಕ್ಕೆ ಮರುಸ್ಥಾಪಿಸುವುದು.
* 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ₹5,495 ಕೋಟಿ ವಿಶೇಷ ಅನುದಾನ ಮತ್ತು ₹6,000 ಕೋಟಿ ರಾಜ್ಯ-ನಿರ್ದಿಷ್ಟ ಅನುದಾನವನ್ನು ಬಿಡುಗಡೆ ಮಾಡುವುದು.
* ಬೆಂಗಳೂರು–ಮುಂಬೈ ಹೈಸ್ಪೀಡ್ ರೈಲು, STRR ದಕ್ಷಿಣ ಭಾಗ, ರಾಯಚೂರಿಗೆ AIIMS ಹಾಗೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಮುಂತಾದ ಕೇಂದ್ರ ಯೋಜನೆಗಳ ಮೂಲಕ ಹೆಚ್ಚುವರಿ ಬೆಂಬಲ ಒದಗಿಸುವುದು.
* ನಾವು ಸದಾ ನಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೇವೆ. ಕೇಂದ್ರ ಸರ್ಕಾರದಿಂದ ನಾವು ಕೇಳುತ್ತಿರುವುದು ಒಂದೇ ಒಂದು ವಿಷಯ: ನಾವು ಎಷ್ಟು ಹಂಚಿಕೊಳ್ಳುತ್ತೇವೆಯೋ, ಅಷ್ಟೇ ಕಾಳಜಿಯನ್ನು ದಯವಿಟ್ಟು ನಮ್ಮ ಮೇಲೂ ತೋರಿಸಿ.
ರಾಜಕೀಯ ಪ್ರಾತಿನಿಧ್ಯ ಮತ್ತು ಮಹಿಳಾ ಮೀಸಲಾತಿ:
* ಜನಸಂಖ್ಯಾ ನಿಯಂತ್ರಣ ಸಾಧಿಸಿದ ಕಾರಣಕ್ಕಾಗಿ ದಕ್ಷಿಣ ಭಾರತದ ರಾಜಕೀಯ ಧ್ವನಿ ಕುಗ್ಗಬಾರದು; ಆದ್ದರಿಂದ 1971ರ ಜನಸಂಖ್ಯಾ ಆಧಾರವನ್ನು ಗೌರವಿಸಿ ಕ್ಷೇತ್ರ ಪುನರ್ವಿಂಗಡಣೆ ಮಾಡುವುದು.
* ಮುಂದಿನ ಜನಗಣತಿಯವರೆಗೆ ಕಾಯದೆ, ಪ್ರಸ್ತುತ ಇರುವ ಲೋಕಸಭಾ ಸ್ಥಾನಗಳ ವ್ಯಾಪ್ತಿಯಲ್ಲೇ ತಕ್ಷಣವೇ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವುದು.
ಅಂತರರಾಜ್ಯ ಜಲ ಸಹಕಾರ:
* ಸಮಾನತೆ, ಪಾರದರ್ಶಕತೆ ಮತ್ತು ಸಹಕಾರದೊಂದಿಗೆ ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳಲ್ಲಿ ಕರ್ನಾಟಕದ ಕಾನೂನುಬದ್ಧ ನೀರಿನ ಹಕ್ಕನ್ನು ರಕ್ಷಿಸಿ, ‘ನೀರಿನ ಹಂಚಿಕೆ’ಯಿಂದ ‘ನೀರಿನ ಸಹಕಾರ’ದತ್ತ ಸಾಗುವುದು. ಕೃಷ್ಣಾ ನದಿ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ನದಿ ಜೋಡಣೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ವಹಿಸುವುದು.
* ನ್ಯಾಯಮಂಡಳಿ ತೀರ್ಪುಗಳ ಅನ್ವಯ ಕರ್ನಾಟಕದ ಕಾನೂನುಬದ್ಧ ನೀರಿನ ಹಕ್ಕನ್ನು ರಕ್ಷಿಸುವುದು ಹಾಗೂ ರೈತರಿಗೆ ನೀರು ಒದಗಿಸುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು.
ಇತರ ಪ್ರಮುಖ ಬೇಡಿಕೆಗಳು :
* ರಾಜ್ಯಗಳ ತೆರಿಗೆ ಹಕ್ಕನ್ನು ಮೊಟಕುಗೊಳಿಸುವ ‘Mines & Minerals (Development & Regulation) Act, 2026’ ಕಾಯ್ದೆಯನ್ನು ಮರುಪರಿಶೀಲಿಸುವುದು.
* ಮಾದಕ ವಸ್ತುಗಳ (ಡ್ರಗ್ಸ್) ಕಳ್ಳಸಾಗಣೆಯನ್ನು ತಡೆಯಲು ಕಠಿಣ ಕಾನೂನು ಜಾರಿ ಮತ್ತು ತನಿಖಾ ವ್ಯವಸ್ಥೆಯನ್ನು ಬಲಪಡಿಸುವುದು.
* ಆರೋಗ್ಯ, ಶಿಕ್ಷಣ, ವಸತಿ, ಕರಾವಳಿ ಸವೆತ ತಡೆ ಹಾಗೂ ವಿಪತ್ತು ನಿರ್ವಹಣೆಗೆ ಹೆಚ್ಚಿನ ಕೇಂದ್ರ ನೆರವು ನೀಡುವುದು.
ನಮ್ಮ ನಿಧಿಗಳಲ್ಲಿ ನ್ಯಾಯ, ನಮ್ಮ ಧ್ವನಿಯಲ್ಲಿ ನ್ಯಾಯ ಮತ್ತು ಆರ್ಥಿಕತೆಯನ್ನು ಮುನ್ನಡೆಸುತ್ತಿರುವ ರಾಜ್ಯಗಳಿಗೆ ಸಲ್ಲಬೇಕಾದ ಗೌರವ ಸಿಗಬೇಕು. ಕರ್ನಾಟಕ ಮತ್ತು ದಕ್ಷಿಣ ಭಾರತ ಬಲಿಷ್ಠವಾದಾಗ ಮಾತ್ರ ಇಡೀ ಭಾರತ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ.
















