ದಿನನಿತ್ಯದ ಜೀವನದಲ್ಲಿ ಕಾಣಿಸಿಕೊಳ್ಳುವ ಸುಸ್ತು, ಕಿರಿಕಿರಿ, ನಿದ್ರೆಯಲ್ಲಿನ ಬದಲಾವಣೆಗಳನ್ನು ಬಹುತೇಕರು ಸಾಮಾನ್ಯವೆಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಇಂತಹ ಬದಲಾವಣೆಗಳು ನಿರಂತರವಾಗಿ ಮುಂದುವರಿದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರತೊಡಗಿದರೆ, ಅವು ಡಿಪ್ರೆಶನ್‌ನ ಆರಂಭಿಕ ಸೂಚನೆಗಳಾಗಿರಬಹುದು.
ನಿರಂತರ ದುಃಖ ಮತ್ತು ನಿರಾಶೆ
ಯಾವುದೇ ಸ್ಪಷ್ಟ ಕಾರಣವಿಲ್ಲದಿದ್ದರೂ ದೀರ್ಘಕಾಲ ದುಃಖ, ಖಾಲಿತನ ಅಥವಾ ನಿರಾಶೆಯ ಭಾವನೆ ಕಾಡುವುದು ಡಿಪ್ರೆಶನ್‌ನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಹಿಂದೆ ಸಂತೋಷ ನೀಡುತ್ತಿದ್ದ ವಿಷಯಗಳಲ್ಲಿಯೂ ಸಂತೋಷ ಕಾಣಿಸದಿರುವುದು ಹಾಗೂ ಭವಿಷ್ಯದ ಬಗ್ಗೆ ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುವುದು ಗಮನಾರ್ಹ ಸೂಚನೆಯಾಗಿದೆ.
ಇಷ್ಟದ ಕೆಲಸಗಳಲ್ಲೂ ಆಸಕ್ತಿ ಕಡಿಮೆಯಾಗುವುದು
ಮೊದಲು ಖುಷಿಯಿಂದ ಮಾಡುತ್ತಿದ್ದ ಕೆಲಸಗಳು, ಸ್ನೇಹಿತರನ್ನು ಭೇಟಿಯಾಗುವುದು, ಪ್ರವಾಸ ಹೋಗುವುದು, ಸಿನಿಮಾ ನೋಡುವುದು ಅಥವಾ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿಯೇ ಆಸಕ್ತಿ ಇಲ್ಲದಂತಾಗುವುದು ಡಿಪ್ರೆಶನ್‌ನ ಮತ್ತೊಂದು ಪ್ರಮುಖ ಲಕ್ಷಣ. ಕೆಲವರು ನಿಧಾನವಾಗಿ ಸಾಮಾಜಿಕ ಚಟುವಟಿಕೆಗಳಿಂದಲೂ ದೂರವಾಗಬಹುದು.
ಸದಾ ಸುಸ್ತು ಮತ್ತು ಶಕ್ತಿಯ ಕೊರತೆ

ಸಾಕಷ್ಟು ನಿದ್ರೆ ಅಥವಾ ವಿಶ್ರಾಂತಿ ಪಡೆದರೂ ನಿರಂತರವಾಗಿ ದಣಿವು ಕಾಡುವುದು ಕೂಡ ಗಮನಿಸಬೇಕಾದ ಸಂಗತಿ. ಸಾಮಾನ್ಯ ಕೆಲಸಗಳನ್ನು ಮಾಡಲು ಸಹ ಹೆಚ್ಚಿನ ಪ್ರಯತ್ನ ಬೇಕೆನಿಸುವುದು, ಬೆಳಗ್ಗೆ ಎದ್ದೇಳಲು, ಕಚೇರಿಗೆ ಹೋಗಲು ಅಥವಾ ಮನೆಯ ಕೆಲಸಗಳನ್ನು ಮಾಡಲು ಕಷ್ಟವಾಗುವುದು ಕಾಣಿಸಿಕೊಳ್ಳಬಹುದು.
ನಿದ್ರೆ ಮತ್ತು ಹಸಿವಿನಲ್ಲಿ ಬದಲಾವಣೆ
ಡಿಪ್ರೆಶನ್‌ನ ಪರಿಣಾಮ ನಿದ್ರೆ ಮತ್ತು ಆಹಾರ ಸೇವನೆಯ ಮೇಲೂ ಬೀಳಬಹುದು. ಕೆಲವರಿಗೆ ನಿದ್ರೆ ಬರದೆ ಇರಬಹುದು ಅಥವಾ ಪದೇಪದೇ ಎಚ್ಚರವಾಗಬಹುದು. ಇನ್ನು ಕೆಲವರು ಸಾಮಾನ್ಯಕ್ಕಿಂತ ಹೆಚ್ಚು ನಿದ್ರೆ ಮಾಡಬಹುದು. ಇದೇ ರೀತಿ ಹಸಿವು ಕಡಿಮೆಯಾಗುವುದು ಅಥವಾ ಹೆಚ್ಚು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುವುದು, ಇದರಿಂದ ತೂಕದಲ್ಲಿ ಹಠಾತ್ ಬದಲಾವಣೆ ಕಾಣಿಸಿಕೊಳ್ಳುವುದೂ ಸಾಧ್ಯ.
ಯಾವಾಗ ಎಚ್ಚರ ವಹಿಸಬೇಕು?
ಈ ರೀತಿಯ ಬದಲಾವಣೆಗಳು ಕೆಲವು ದಿನಗಳಲ್ಲ, ನಿರಂತರವಾಗಿ ಹಲವು ದಿನಗಳು ಅಥವಾ ವಾರಗಳ ಕಾಲ ಮುಂದುವರಿದು ನಿಮ್ಮ ವೈಯಕ್ತಿಕ, ಸಾಮಾಜಿಕ ಅಥವಾ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ಅದನ್ನು ಕೇವಲ ಸಾಮಾನ್ಯ ಸುಸ್ತು ಎಂದು ನಿರ್ಲಕ್ಷಿಸಬಾರದು. ಸಮಯಕ್ಕೆ ಸರಿಯಾಗಿ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಮುಖ್ಯ.
ಗಮನಿಸಿ: ಮೇಲಿನ ಲಕ್ಷಣಗಳು ಕಂಡುಬಂದರೆ ಅದರಿಂದಲೇ ಡಿಪ್ರೆಶನ್ ಇದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಸೂಕ್ತ ತಜ್ಞರಿಂದ ಮೌಲ್ಯಮಾಪನ ಮಾಡಿಸಿಕೊಳ್ಳುವುದು ಅಗತ್ಯ.












